ರೋಗಿಯನ್ನು ಉಪಚರಿಸಲು ನಮಗೆ ದೇವರೇ ನೀಡಿದ ಅವಕಾಶ ಎಂದು ತಿಳಿದು ಸೇವೆ ಮಾಡಿದರೆ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದು ಎಂದು ಚನೈನ ಜೆಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಪಳನಿ ವೇಲು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಓರ್ವ ವೈದ್ಯನಿಗೆ ರೋಗಿಗಿಂತ ದೊಡ್ಡವರು ಯಾರು ಇಲ್ಲ. ರೋಗಿಯನ್ನು ಉಪಚರಿಸಲು ನಮಗೆ ದೇವರೇ ನೀಡಿದ ಅವಕಾಶ ಎಂದು ತಿಳಿದು ಸೇವೆ ಮಾಡಿದರೆ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದು ಎಂದು ಚನೈನ ಜೆಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಪಳನಿ ವೇಲು ಅಭಿಪ್ರಾಯಪಟ್ಟಿದ್ದಾರೆ.ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಮತ್ತು ಡಾ.ಎಂ.ಆರ್.ಹುಲಿನಾಯ್ಕರ್ ಪ್ರತಿಷ್ಠಾನವತಿಯಿಂದ ಆಯೋಜಿಸಿದ್ದ ಸಂಸ್ಥೆಯ ಡಾ.ಎಂ.ಆರ್.ಹುಲಿನಾಯ್ಕರ್ ಮತ್ತು ಶಾಂತಾದುರ್ಗಾದೇವಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡುತಿದ್ದ ಅವರು, ವೈದ್ಯನಲ್ಲಿರುವ ಆಧ್ಯಾತ್ಮ ಪ್ರಚೋಧನೆಗೊಂಡಾಗಲೇ ಒಳ್ಳೆಯ ಸೇವೆ ದೊರೆಯಲು ಸಾಧ್ಯ.ವೃತ್ತಿಗೆ ಹೆಚ್ಚು ಗೌರವ ನೀಡಿ, ಹಣಕ್ಕಲ್ಲ ಎಂದರು.

ಭಾರತೀಯರಲ್ಲಿ ಕೌಶಲ್ಯಕ್ಕೆ ಕೊರತೆ ಇಲ್ಲ.ನ ಮ್ಮಲ್ಲಿ ಸಾಧನೆಯ ಕಡೆಗೆ ಪ್ರಯತ್ನವಿಲ್ಲದೆ ಇನ್ನೊಬ್ಬರನ್ನು ದೂರುವ ಅಗತ್ಯವಿಲ್ಲ. ಅನಗತ್ಯವಾಗಿ ಫೇಸ್‌ಬುಕ್, ವಾಟ್ಸಫ್ ಇನ್ನಿತರ ಸೋಷಿಯಲ್ ಮೀಡಿಯಾಗಳಲ್ಲಿ, ಇನ್ನೊಬ್ಬರ ಬಗ್ಗೆ ಹರಡಿರುವ ಗಾಸಿಫ್‌ಗಳ ಬಗ್ಗೆ, ಲೈಕ್, ಕಾಮೆಂಟ್ ಮಾಡುವ ಬದಲು, ಅದೇ ಸಮಯವನ್ನು ನಮ್ಮ ಕೆರಿಯರ್ ಬಿಲ್ಡ್ ಪ್ ಗೆ ಬಳಸಿಕೊಂಡರೆ ಉತ್ತಮ ವ್ಯಕ್ತಿಯಾಗಿ, ನಾಲ್ಕಾರು ಜನರಿಗೆ ಉಪಯೋಗ ಪಡುವಂತಹ ಸಾಧನೆ ಮಾಡಬಹುದು. ೬೦ವರ್ಷದ ನಂತರ ವಿಶ್ರಾಂತ ಜೀವನ ನಡೆಸುವ ಕಾಲ. ಹಾಗಾಗಿ ಯುವಕರಾಗಿದ್ದಾಗಲೇ ಎನಾದರೂ ಸಾಧಿಸಲು ಪ್ರಯತ್ನಿಸಿ, ಅತಿ ಹೆಚ್ಚು ಶ್ರಮ ವಹಿಸಬೇಕೆಂದು ಯುವ ವೈದ್ಯರಿಗೆ ಡಾ.ಫಳನಿವೇಲು ಸಲಹೆ ನೀಡಿದರು.

ಭಾರತದಲ್ಲಿ ಇಂದಿಗೂ ಕುಟುಂಬ ವ್ಯವಸ್ಥೆ ಗಟ್ಟಿಯಾಗಿದೆ. ಪಾಶ್ಚಿಮಾತ್ಯ ದೇಶಗಳು ಭಾರತೀಯ ಕೌಟುಂಬಿಕ ಪದ್ದತಿಯನ್ನು ಅತ್ಯಂತ ಗೌರವಿಸುತ್ತವೆ. ಚಿಕ್ಕಂದಿನಲ್ಲಿ ಮಕ್ಕಳ ಪೋಷಣೆ, ದೊಡ್ಡವರಾದ ಮೇಲೆ ಅವರು ತಂದೆ ತಾಯಿಗಳ ಪೋಷಣೆ ಮಾಡುವಂತಹ. ಗೌರವದಿಂದ ನಡೆಸಿಕೊಳ್ಳುವ ವಾತಾವರಣ ಇಂದಿಗೂ ಮುಂದುವರೆದಿದೆ. ಇದನ್ನು ಶಾಲೆಗಳಲ್ಲಿ ಕಲಿಸಬೇಕಾಗಿದೆ.ಇಂಗ್ಲೀಷ್‌ ಎಂಬುದು ಸಮೂಹನ ಭಾಷೆಯಷ್ಟೇ, ಮಾತೃಭಾಷೆಯಲ್ಲಿ ನೀವು ಎಷ್ಟು ಪ್ರಬುದ್ದತೆ ಗಳಿಸುತ್ತೀರೋ, ಅದು ಇತರೆ ಭಾಷೆಗಳ ಮೇಲೆ ಹಿಡಿತ ಸಾಧಿಸಲು ಸಹಕಾರಿಯಾಗುತ್ತದೆ ಎಂದು ನುಡಿದರು.

ರಾಷ್ಟ್ರೀಯ ಸ್ವಾಭಿಮಾನ ಪರಿಷದ್‌ನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ್ ಮಾತನಾಡಿ, ಇಂದು ಪ್ರಪಂಚದಲ್ಲಿಯೇ ಒಳ್ಳೆಯ ವೈದ್ಯರೆನಿಸಿಕೊಂಡಿರುವ ಡಾ.ಪಳನಿವೇಲು ಅವರ ಆತ್ಮಕಥೆ ಹಿಂದಿ, ಒರಿಯಾ, ಕನ್ನಡ ಹೀಗೆ ಹಲವು ಭಾಷೆಗಳಿಗೆ ತರ್ಜುಮೆಯಾಗಿದೆ. ಲ್ಯಾಪ್ರೋಸ್ಕೋಪಿ ಚಿಕಿತ್ಸೆಯಲ್ಲಿ ಅವರ ಸಾಧನೆ ಲೋಕವೇ ಮೆಚ್ಚುವಂತಹದ್ದು. ಇಂತಹ ವ್ಯಕ್ತಿಯನ್ನು ಗುರುತಿಸಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಪ್ರಶಸ್ತಿ ನೀಡಿ ಗೌರವ ಹೆಚ್ಚಿಸಿದೆ ಎಂದರು.ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಡಾ.ಪಳನಿವೇಲು ಅವರು ತಮ್ಮ ಇಡೀ ಜೀವನವನ್ನು ವೈದ್ಯಕೀಯ ಕ್ಷೇತ್ರಕ್ಕೆ ಮುಡಿಪಾಗಿಟ್ಟಿದ್ದಾರೆ. ನಾನು ಕೂಡ ವೃತ್ತಿಯಲ್ಲಿ ವೈದ್ಯನಾಗಿ, ಡಾ.ಪಳನಿವೇಲು ಅವರಿಂದ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ತರಬೇತಿ ಪಡೆದು, ಅದನ್ನು ನನ್ನ ವೃತ್ತಿಯಲ್ಲಿ ಬಳಕೆ ಮಾಡಿ, ಸಾವಿರಾರು ರೋಗಿಗಳಿಗೆ ಸೇವೆ ಒದಗಿಸಿದ್ದೇನೆ. ಅಂತಹ ವ್ಯಕ್ತಿಗೆ ನಮ್ಮ ಪ್ರತಿಷ್ಠಾನದಿಂದ ಮೊದಲನೇ ಬಾರಿಗೆ ಪ್ರಶಸ್ತಿ ನೀಡುತ್ತಿರುವುದು ಖುಷಿ ತಂದಿದೆ ಎಂದರು.ಡಾ.ಪಳನಿವೇಲು ಅವರ ಕುರಿತು ಅಭಿನಂದನಾ ನುಡಿಗಳನ್ನಾಡಿದ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಈಶ್ವರ್ ಹೊಸಮನಿ, ಅಂತರರಾಷ್ಟ್ರೀಯ ವೈದ್ಯಕೀಯ ಸಮ್ಮೇಳನಗಳಲ್ಲಿ ಭಾರತೀಯರಿಗೆ ಮಾತನಾಡಲು ಅಷ್ಟೇ ಅವಕಾಶವಿದೆ. ಆದರೆ ಮೊದಲ ಬಾರಿಗೆ ಡಾ.ಪಳನಿವೇಲು ಅವರ ಶಸ್ತ್ರಚಕಿತ್ಸಾ ವಿಧಾನವನ್ನು ಲೈವ್ ಆಗಿ ನೋಡುವಂತಹ ಅವಕಾಶ ಸಿಕ್ಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುವರ್ಣಮುಖಿ ಸಂಸ್ಕೃತಿ ಧಾಮದ ಸಂಸ್ಥಾಪಕ ಡಾ.ಆಚಾರ್ಯ ಎಂ.ನಾಗರಾಜು ಮಾತನಾಡಿದರು. ವೇದಿಕೆಯಲ್ಲಿ ಶಾಂತ ದುರ್ಗಾದೇವಿ, ಡಾ.ರಮಣ್ ಹುಲಿನಾಯ್ಕರ್,ಡಾ.ಲಾವಣ್ಯ ರಮಣ ಹುಲನಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ನೂರಾರು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.