ವಿಭೂತಿ ಪುರುಷರು ಭಗವಂತನ ಸನ್ನಿಧಾನ: ಪೇಜಾವರ ಶ್ರೀ

| Published : Feb 21 2025, 12:46 AM IST

ಸಾರಾಂಶ

ಸಂಭವಾಮಿ ಯುಗೇ ಯುಗೇ ಎಂದು ಭಗವದ್ಗೀತೆಯಲ್ಲಿ ಮಾನವರಿಗೆ ವಚನ ನೀಡಿದ್ದ ಭಗವಂತನು ಕಲಿಗಾಲದಲ್ಲಿ ಸಾಧು, ಸಂತರು ಮತ್ತು ವಿಭೂತಿ ಪುರುಷರಲ್ಲಿ ಪ್ರಕಟವಾಗಿದ್ದಾನೆ ಎಂದು ಉಡುಪಿ ಪೇಜಾವರ ಮಠದ ಪ್ರಸನ್ನತೀರ್ಥ ಶ್ರೀಪಾದಂಗಳವರು ಹೇಳಿದರು.

ಹುಬ್ಬಳ್ಳಿ: ಸಂಭವಾಮಿ ಯುಗೇ ಯುಗೇ ಎಂದು ಭಗವದ್ಗೀತೆಯಲ್ಲಿ ಮಾನವರಿಗೆ ವಚನ ನೀಡಿದ್ದ ಭಗವಂತನು ಕಲಿಗಾಲದಲ್ಲಿ ಸಾಧು, ಸಂತರು ಮತ್ತು ವಿಭೂತಿ ಪುರುಷರಲ್ಲಿ ಪ್ರಕಟವಾಗಿದ್ದಾನೆ ಎಂದು ಉಡುಪಿ ಪೇಜಾವರ ಮಠದ ಪ್ರಸನ್ನತೀರ್ಥ ಶ್ರೀಪಾದಂಗಳವರು ಹೇಳಿದರು.

ಇಲ್ಲಿನ ಸಿದ್ಧಾರೂಢ ಮಠದಲ್ಲಿ ಸದ್ಗುರು ಸಿದ್ಧಾರೂಢರ 190ನೇ ಜಯಂತ್ಯುತ್ಸವ ಹಾಗೂ ಜ. ಗುರುನಾಥಾರೂಢರ 115ನೇ ಶತಮಾನೋತ್ಸವ, ಶಿವರಾತ್ರಿ ಮಹೋತ್ಸವ, ಜಾತ್ರೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವವೇದಾಂತ ಪರಿಷತ್ ಉದ್ಘಾಟಿಸಿ, ಸಂಭವಾಮಿ ಯುಗೇ ಯುಗೇ ಎಂಬ ವಿಷಯ ಕುರಿತು ಮಾತನಾಡಿದರು.

ಹಿಂದಿನ ಯುಗಗಳಲ್ಲಿ ಭಗವಂತನು ಅವತಾರ ಎತ್ತಿದ್ದನು. ಕಲಿಯುಗದಲ್ಲಿ ಅಂಥ ಅವಕಾಶ ಇಲ್ಲ. ಹಾಗಾಗಿ ಆತ ಕಲಿಯುಗದಲ್ಲಿ ವಿಭೂತಿಪುರುಷರ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಅಂಥ ವಿಭೂತಿ ಪುರುಷರಾಗಿದ್ದ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅಸಂಖ್ಯ ಭಕ್ತರು ಪ್ರೇಮ, ವಿಶ್ವಾಸಗಳ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.

ಸಾನಿಧ್ಯ ವಹಿಸಿದ್ದ ಇಂಚಲ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಶ್ರೀಗಳು ಮಾತನಾಡಿ, ಭಕ್ತರು ನದಿಯಾದರೆ ಭಗವಂತ ಸಮುದ್ರ. ನದಿಯು ಸಮುದ್ರವನ್ನು ಸೇರಿ ಸಮುದ್ರವೇ ಆಗುವ ಹಾಗೆ ಭಕ್ತರು ಭಗವಂತನನ್ನು ಅನನ್ಯ ಶ್ರದ್ಧೆಯಿಂದ ಆರಾಧಿಸಿದರೆ ಅವರೂ ಸಮುದ್ರವೇ ಅಂದರೆ ಭಗವಂತನೇ ಆಗುವರು ಎಂದರು.

ಪೂಜಾರ ಮುದ್ದೇನಹಳ್ಳಿಯ ಸಚ್ಚಿದಾನಂದ ಸ್ವಾಮೀಜಿ, ಮಂದ್ರೂಪದ ರಾಮಚಂದ್ರ ಮೇತ್ರಿ. ಕಲಬುರಗಿಯ ಲಕ್ಷ್ಮೀತಾಯಿ, ದೇವರ ಹುಬ್ಬಳ್ಳಿಯ ಸಿದ್ಧ ಶಿವಯೋಗಿ ದೇವರು, ರಾಮಕೃಷ್ಣ ಆಶ್ರಮದ ನಿತ್ಯಸ್ವಾತ್ಮಾನಂದ ಸ್ವಾಮೀಜಿ, ವ್ಯಾಸಾಶ್ರಮದ ಮಹಾಮಂಡಲೇಶ್ವರ ಅಸಂಗಾನಂದ ಸ್ವಾಮೀಜಿ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಬೆಂಗಳೂರು ಗಾಂಧಿ ಭವನದ ಅಧ್ಯಕ್ಷ ಡಾ. ವೊಡೆಪಿ ಕೃಷ್ಣ, ವಿಶ್ವವೇದಾಂತ ಪರಿಷತ್ ಸ್ವಾಗತ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್, ಉದ್ಯಮಿ ಡಾ. ವಿ.ಎಸ್‌.ವಿ. ಪ್ರಸಾದ, ಮಹೇಂದ್ರ ಸಿಂಘಿ, ರಂಗಾ ಬದ್ದಿ ಮಾತನಾಡಿದರು.

ಹುಬ್ಬಳ್ಳಿ ಅಭಿನವ ಸಿದ್ಧಾರೂಢ ಸ್ವಾಮೀಜಿ, ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ, ಅಣ್ಣಿಗೇರಿಯ ಶಿವಕುಮಾರ ಸ್ವಾಮೀಜಿ, ಮಿಟ್ಟಿಮಲಕಾಪುರ ಶಾಂತಾಶ್ರಮದ ನಿಜಾನಂದ ಸ್ವಾಮೀಜಿ, ಬೀದರಿನ ಲಕ್ಷ್ಮೀತಾಯಿ, ಉಪ್ಪಾರಟ್ಟಿಯ ನಾಗೇಶ್ವರ ಸ್ವಾಮೀಜಿ, ಪಂಡರಪುರದ ಶಾಂತಾದೇವಿ ಅಮ್ಮನವರು, ಬುರಣಾಪುರದ ಯೋಗೀಶ್ವರಿ ಮಾತಾ, ಹಳಕಟ್ಟಿಯ ನಿಜಗುಣ ಸ್ವಾಮೀಜಿ, ಟ್ರಸ್ಟ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ. ಧರ್ಮದರ್ಶಿಗಳಾದ, ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ವಿನಾಯಕ ಘೋಡಕೆ, ಚನ್ನವೀರ ಮುಂಗುರವಾಡಿ, ವಿ.ಡಿ. ಕಾಮರೆಡ್ಡಿ, ರಮೇಶ ಬೆಳಗಾವಿ, ವಸಂತ ಸಾಲಗಟ್ಟಿ, ಗೀತಾ ಕಲಬುರ್ಗಿ, ಮ್ಯಾನೇಜರ್ ಈರಣ್ಣ ತುಪ್ಪದ, ಶಾಂತರಾಜ ಪೋಳ ಸೇರಿ ಹಲವರಿದ್ದರು.

ಧರ್ಮದರ್ಶಿ, ವಿಶ್ವವೇದಾಂತ ಪರಿಷತ್ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಸ್ವಾಗತಿಸಿದರು. ಬೀದರಿನ ಗಣೇಶಾನಂದ ಮಹಾರಾಜರು ನಿರೂಪಿಸಿದರು.

ಬಾಕ್ಸ್...

ಸಾಧಕರಿಗೆ ಸಾವು ಅಂತ್ಯವಲ್ಲ

ಸಾಧಕರಿಗೆ ಸಾವು ಅಂತ್ಯವಲ್ಲ. ಮರಣದ ನಂತರವೂ ಜೀವಿಸುವುದೇ ಸಾಧನೆ. ಶ್ರೀ ಸಿದ್ಧಾರೂಢರು ಅಂಥ ಸಾಧಕರು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ವಿಶ್ವವೇದಾಂತ ಪರಿಷತ್ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ಸಿದ್ಧಾರೂಢ ಕಥಾಮೃತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಶ್ರೀ ಸಿದ್ಧಾರೂಢರು ಮತ್ತು ಇತರ ಸಾಧಕರು ಆಧ್ಯಾತ್ಮ ಸಂಪತ್ತಿನ ಬದುಕು ನಡೆಸಿದರು. ಸ್ಥಾನಮಾನದ ಆಧಾರದ ಮೇಲೆ ಯಶಸ್ಸು ಸಿಗುವುದು ಬೇರೆ. ಸಿದ್ಧಾರೂಢರಂಥವರಿಗೆ ಅದರ ಅಗತ್ಯವಿಲ್ಲ. ಅದ್ವೈತ ತತ್ವದಡಿ ಬದುಕು ನಡೆಸುವುದು ಸರಳ ಎಂದು ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವುದೇ ಸಿದ್ಧಾರೂಢರು ಬೋಧಿಸಿದ ತತ್ವ. ದ್ವೆತ ಹಾಗೂ ಅದ್ವೆತಗಳೆಲ್ಲ ಬೇರೆ ಅಲ್ಲ. ಒಬ್ಬ ಮಾನವ ಇನ್ನೊಬ್ಬ ಮಾನವನನ್ನು ಗೌರವಿಸುವುದು ಹಾಗೂ ಅವರ ಅಸ್ತಿತ್ವವನ್ನು ಗೌರವಿಸುವುದು ಮನುಷ್ಯ ಧರ್ಮವಾಗಬೇಕು ಎಂದರು.