ಸಾರಾಂಶ
ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ ಮುಕ್ತಾಯ ಸಮಾರಂಭ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಯಾವುದೇ ಒತ್ತಡದ ಬದುಕಿಗಾಗಿ ದಾರಿ ತಪ್ಪುವುದಕ್ಕಿಂತ ನಮ್ಮನ್ನು ಬೆಳೆಸಲು ತಂದೆತಾಯಿಗಳು ಶ್ರಮಿಸಿದ ಪರಿಯನ್ನು ನೆನೆಪಿಸಿಕೊಂಡರೆ ನಿಮ್ಮ ಹಾದಿ ತಪ್ಪು ಮನಸ್ಸು ಬದಲಾಗುತ್ತದೆ ಎಂದರು.
ಕೊಪ್ಪಳ: ದುಶ್ಚಟ, ದುರ್ಗುಣ ಬಿಟ್ಟರೆ ನಾವೇ ದೇವರು. ಇದರಿಂದ ಮನಸು ಸಹಜವಾಗಿಯೇ ಸಾಧನೆಯತ್ತ ಮುಖ ಮಾಡುತ್ತದೆ ಎಂದು ಗವಿಸಿದ್ದೇಶ್ವರ ಶ್ರೀ ಹೇಳಿದರು.ನಗರದ ಗವಿಮಠ ಆವರಣದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ ಮುಕ್ತಾಯ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಒತ್ತಡದ ಬದುಕಿಗಾಗಿ ದಾರಿ ತಪ್ಪುವುದಕ್ಕಿಂತ ನಮ್ಮನ್ನು ಬೆಳೆಸಲು ತಂದೆತಾಯಿಗಳು ಶ್ರಮಿಸಿದ ಪರಿಯನ್ನು ನೆನೆಪಿಸಿಕೊಂಡರೆ ನಿಮ್ಮ ಹಾದಿ ತಪ್ಪು ಮನಸ್ಸು ಬದಲಾಗಲಾಗುತ್ತದೆ. ತಾವು ತಂಗಳದ್ದು ಉಂಡು ನಿಮಗೆ ಬಿಸಿ ಅಡುಗೆ ಹಾಕಿದ ತಂದೆ, ತಾಯಿಯನ್ನು ನೆನಪಿಸಿಕೊಂಡರೆ ನೀವು ಖಂಡಿತ ದಾರಿ ತಪ್ಪುವುದಿಲ್ಲ.
ಇಂಥ ತಂದೆ-ತಾಯಿಗಳನ್ನು ನಾವು ಹೀರೋಗಳನ್ನಾಗಿ ಮಾಡಿಕೊಳ್ಳಬೇಕೇ ವಿನಃ ಸಿನೆಮಾದಲ್ಲಿ ನಟಿಸುವ ರೀಲ್ ಹೀರೋಗಳನ್ನು ಹೀರೋಗಳನ್ನಾಗಿ ಕಾಣಬಾರದು ಎಂದರು.ಕಲ್ಲು ಮೂರ್ತಿಯಾಗುವುದಾದರೆ ಮನುಷ್ಯರಾದ ನಾವು ಏಕೆ ಸದ್ಗುಣವಂತರಾಗಲು ಸಾಧ್ಯವಿಲ್ಲ. ಕಲ್ಲಿನಲ್ಲಿ ಬೇಡವಾದ ಭಾಗವನ್ನು ತೆಗೆದಾಗ ಅದು ಮೂರ್ತಿಯಾಗುತ್ತದೆ.
ಹಾಗೆಯೇ ಮನಸ್ಸಿನ ಇರುವ ಬೇಡವಾದ ಗುಣಗಳನ್ನು ನಿಗ್ರಹಿಸಿದರೆ ಖಂಡಿತವಾಗಿಯೂ ನಾವು ಮೂರ್ತಿಗಳಂತೆ ಒಳ್ಳಯರಾಗಲು ಸಾಧ್ಯವಾಗುತ್ತದೆ ಎಂದರು.ಭವಿಷ್ಯ ನಿರ್ಮಾಣವಾಗುವುದು ನಿಮ್ಮ ಗುಣಗಳಿಂದ ಕೆಟ್ಟ ಹವಾಸ್ಯ ಬೆಳಗಿಸಿಕೊಂಡರೆ ಅದರಿಂದ ಹೊರಬರಲು ಸಾಧ್ಯವಿಲ್ಲ.
ಕೆಟ್ಟಗುಣಗಳು ನಿಮ್ಮಲ್ಲಿ ಬೆಳವಣಿಗೆಯಾದರೆ ಮೊದಲೇ ಜಾಗೃತರಾದರೆ ಖಂಡಿತವಾಗಿಯು ನೀವು ಅವುಗಳಿಂದ ದೂರ ಇರಬಹುದು ಎಂದು ಮಾದಕ ವಸ್ತುಗಳಿಂದ ದೂರ ಇರಬೇಕು ಎನ್ನುವುದನ್ನು ಮಾರ್ಮಿಕವಾಗಿ ಹೇಳಿದರು.