ನಾಳೆಯಿಂದ ದೇವರ ಪ್ರಾಣಪ್ರತಿಷ್ಠಾಪನಾ ಮಹೋತ್ಸವ

| Published : Apr 30 2024, 02:01 AM IST

ನಾಳೆಯಿಂದ ದೇವರ ಪ್ರಾಣಪ್ರತಿಷ್ಠಾಪನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೇ ೨ರ ಬೆಳಗ್ಗೆ ೮ರಿಂದ ಶಿಖರ ಕಲಶ ಸ್ಥಾಪನೆ, ಪ್ರಸಾದ ಉತ್ಸರ್ಗ, ಮಧ್ಯಾಹ್ನ ಪೂಜೆ, ಸಂಜೆ ೫ರಿಂದ ಬಾಲಾಲಯ ವಿಸರ್ಜನೆ, ಕಲಾ ಸಂಕೋಚ, ಜೀವ ಕುಂಭ ಸ್ಥಾಪನೆ ಜರುಗುವುದು.

ಸಿದ್ದಾಪುರ: ಪುರಾತನ ಕ್ಷೇತ್ರಗಳಲ್ಲಿ ಒಂದಾದ ಕೊಂಡ್ಲಿಯ ಕಾಳಿಕಾ ಭವಾನಿ(ಕಾಳಮ್ಮ) ದೇವಿ ಹಾಗೂ ಪರಿವಾರ ದೇವತೆಗಳ ನೂತನ ವಿಗ್ರಹ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ಮೇ ೧ರಿಂದ ೪ರ ವರೆಗೆ ಜರುಗಲಿದೆ ಎಂದು ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜಯವಂತ ಶಾನಭಾಗ ತಿಳಿಸಿದರು.ಕೊಂಡ್ಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಶ್ರೀನಿವಾಸ ಭಟ್ಟರು ಮಂಜಗುಣಟ್ಟಿವರ ಮಾರ್ಗದರ್ಶನದಲ್ಲಿ ಹಾಗೂ ವೇ. ಕುಮಾರ ಭಟ್ಟರ ನೇತೃತ್ವದಲ್ಲಿ ಇನ್ನಿತರ ವೈದಿಕ ಶ್ರೇಷ್ಠರಿಂದ ಮೇ ೧ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಮೇ ೧ರ ಬೆಳಗ್ಗೆ ೮ರಿಂದ ಗಣಪತಿಪೂಜೆ, ಮಹಾಸಂಕಲ್ಪ ನಡೆಯಲಿದೆ. ಸಂಜೆ ೫ರಿಂದ ವಾಸ್ತುಬಲಿ, ನೂತನ ದೇವಾಲಯ ಪರಿಗ್ರಹ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮೇ ೨ರ ಬೆಳಗ್ಗೆ ೮ರಿಂದ ಶಿಖರ ಕಲಶ ಸ್ಥಾಪನೆ, ಪ್ರಸಾದ ಉತ್ಸರ್ಗ, ಮಧ್ಯಾಹ್ನ ಪೂಜೆ, ಸಂಜೆ ೫ರಿಂದ ಬಾಲಾಲಯ ವಿಸರ್ಜನೆ, ಕಲಾ ಸಂಕೋಚ, ಜೀವ ಕುಂಭ ಸ್ಥಾಪನೆ ಜರುಗುವುದು.

ಮೇ ೩ರ ಬೆಳಗ್ಗೆ ೧೦.೩೦ಕ್ಕೆ ಕಾಳಿಕಾಭವಾನಿ ದೇವರ ಹಾಗೂ ಗಣಪತಿ, ಕಾಲಭೈರವ ಪರಿವಾರ ದೇವರ ಪ್ರಾಣಪ್ರತಿಷ್ಠಾಪನೆ, ಚಂಡಿಕಾ ಪಾರಾಯಣ, ಮಧ್ಯಾಹ್ನಪೂಜೆ ನಡೆಯಲಿದೆ. ಮಧ್ಯಾಹ್ನ ೧೨ರಿಂದ ಧರ್ಮಸಭೆ ನಡೆಯಲಿದ್ದು, ಶಿರಳಗಿಯ ಬ್ರಹ್ಮಾನಂದಭಾರತೀ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀನಿವಾಸ ಭಟ್ಟರು, ಜ್ಯೋತಿಷಿಗಳಾದ ವಿ. ಗೋಪಾಲಕೃಷ್ಣ ಶರ್ಮಾ, ದೇವಾಲಯದ ವಾಸ್ತುಶಿಲ್ಪಿ ಶಿರಸಿಯ ಅರುಣ ನಾಯಕ, ವಿಗ್ರಹ ಶಿಲ್ಪಿ ಶಿರಸಿ ವರ್ಲೆಗದ್ದೆಯ ವೆಂಕಟರಮಣ ಹೆಗಡೆ ಪಾಲ್ಗೊಳ್ಳುವರು.

ನಂತರ ಮಹಾಸಂತರ್ಪಣೆ ಜರುಗಲಿದೆ. ಧರ್ಮಸಭೆಯ ನಂತರ ಗ್ರಾಮದ ಮಹಿಳಾ ತಂಡಗಳಿಂದ ಭಜನೆ ನಡೆಯುವುದು. ಮೇ ೪ರ ಬೆಳಗ್ಗೆ ಚಂಡಿಕಾಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗುವುವು. ಅಲ್ಲದೇ ಯಕ್ಷಗಾನ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.ದೇವಾಲಯ ಆಡಳಿತ ಸಮಿತಿ ಗೌರವಾಧ್ಯಕ್ಷ ಜಿ.ಜಿ. ಹೆಗಡೆ ಹೆಗ್ಗಾರಳ್ಳಿ, ಕಾರ್ಯದರ್ಶಿ ನರಹರಿ ಡೋಂಗ್ರೆ ಹೊನ್ನೆಗುಂಡಿ, ಸಮಿತಿ ಪದಾಧಿಕಾರಿಗಳಾದ ಪ್ರಭಾಕರ ನಾಯ್ಕ ಬಾಲಿಕೊಪ್ಪ, ರಾಮಚಂದ್ರ ನಾಯ್ಕ ಬಾಲಿಕೊಪ್ಪ ಇದ್ದರು.