ಬಹು ಜನ್ಮಗಳ ಪುಣ್ಯದ ಫಲವಾಗಿ ಮಾನವ ಜೀವನ ಪ್ರಾಪ್ತವಾಗಿದೆ. ಅರಿವು ಆಚರಣೆಗಳಿಂದ ಬದುಕು ಸಮೃದ್ಧಗೊಳ್ಳಬೇಕು. ಬದುಕಿ ಬಾಳುವ ಮಾನವನಿಗೆ ದೇವರು ಕೊಟ್ಟ ಕೊಡುಗೆ ಅಪಾರವಾದುದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
- ಹನಗವಾಡಿಯಲ್ಲಿ ಜನಜಾಗೃತಿ ಧರ್ಮ ಸಮಾರಂಭದಲ್ಲಿ ರಂಭಾಪುರಿ ಶ್ರೀ
- - -ಕನ್ನಡಪ್ರಭ ವಾರ್ತೆ ಹರಿಹರ
ಬಹು ಜನ್ಮಗಳ ಪುಣ್ಯದ ಫಲವಾಗಿ ಮಾನವ ಜೀವನ ಪ್ರಾಪ್ತವಾಗಿದೆ. ಅರಿವು ಆಚರಣೆಗಳಿಂದ ಬದುಕು ಸಮೃದ್ಧಗೊಳ್ಳಬೇಕು. ಬದುಕಿ ಬಾಳುವ ಮಾನವನಿಗೆ ದೇವರು ಕೊಟ್ಟ ಕೊಡುಗೆ ಅಪಾರವಾದುದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಹನಗವಾಡಿಯಲ್ಲಿ ಮಂಗಳವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳಬೇಕು. ಇಲ್ಲದಿದ್ದರೆ ಜೀವನ ವ್ಯರ್ಥವಾಗುತ್ತದೆ. ಜೀವನದ ಉನ್ನತಿ ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ. ಶ್ರೀ ರೇಣುಕಾಚಾರ್ಯರು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯೆ, ದಯಾ, ಕ್ಷಮಾ, ದಾನ, ಪೂಜಾ, ಜಪ ಹಾಗೂ ಧ್ಯಾನ ಎಂಬ ದಶಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ವಿದ್ಯೆ ಮತ್ತು ಸಂಪತ್ತು ಗಳಿಸುವಾಗ ಸುದೀರ್ಘವಾಗಿ ಬಾಳುತ್ತೇವೆ ಎಂಬ ನಂಬಿಕೆ ಕಳೆದುಕೊಳ್ಳಬಾರದು. ಧರ್ಮಾಚರಣೆ ವಿಚಾರ ಬಂದಾಗ ಮೃತ್ಯು ಬಿಟ್ಟಿದ್ದಲ್ಲ ಎಂಬ ಭೀತಿ ಇಟ್ಟುಕೊಂಡು ಬದುಕಬೇಕಿದೆ. ಶಿವಜ್ಞಾನ- ಗುರು ಕಾರುಣ್ಯ ಪಡೆದು ಮಾನವ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಬದುಕಿನಲ್ಲಿ ಸತ್ಯ, ಶಾಂತಿ, ಸಮೃದ್ಧಿ ಅವಶ್ಯಕ. ಪ್ರಕೃತಿ ಮಾತೆ ನಮಗೆಲ್ಲ ಬಹು ದೊಡ್ಡ ಕೊಡುಗೆ ಕೊಟ್ಟಿದೆ. ನಿಸರ್ಗ ಮುನಿದರೆ ಬದುಕೇ ಬರಡು. ಅನ್ನ ಕೊಡುವ ರೈತನ ಬಾಳು ಉಜ್ವಲಗೊಳ್ಳಲು ಶ್ರಮ ಸಾಧನೆ ಮತ್ತು ಗುರು ಕಾರುಣ್ಯ ಬಹಳ ಮುಖ್ಯ. ಭದ್ರಾ ಜಲಾಶಯ ತುಂಬಿದರೆ ಈ ಭಾಗದಲ್ಲಿ ಬೆಳೆ. ವರುಣ ಕೃಪೆ ಮಾಡಿದರೆ, ರೈತ ಸಮುದಾಯಕ್ಕೆ ಒಳತಾದೀತು. ಗುರುಪೀಠದ ಆಶೀರ್ವಾದ ನಮಗೆಲ್ಲ ಒಳಿತನ್ನು ಉಂಟು ಮಾಡಲೆಂದರು.
ನ್ಯಾಯವಾದಿ ದೊಡ್ಡಮನೆ ಮಂಜುನಾಥ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀ ಮತ್ತು ದುಗ್ಲಿ- ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.ಸಮಾರಂಭದಲ್ಲಿ ಚಂದ್ರಶೇಖರ ಪೂಜಾರ, ಡಿ.ಕುಮಾರ್, ಲೀಲಾವತಿ ಶಿವಶಂಕರಯ್ಯ, ಎಸ್.ಉಮಾಪತಿ, ಯಶೋಧಮ್ಮ, ರೂಪ, ನಾಗರತ್ನ, ಸುನಂದ ರವೀಂದ್ರ, ಸುಧಾ ಪಂಚಯ್ಯ, ರಮ್ಯ ಕೆ.ವಿ.ವೀರೇಶ ಜಯಮ್ಮ ಶರಣಪ್ಪಯ್ಯ ಸ್ವಾಮಿ, ಲಲಿತಮ್ಮ ಶಿವಯೋಗಿ ಸ್ವಾಮಿ, ಪುಷ್ಪ, ನಂದಿನಿ, ಶ್ವೇತಾ, ವನಜಾಕ್ಷಮ್ಮ, ಗಂಗಾಧರ ಹಿರೇಮಠ, ರೂಪ ಎಚ್.ಎಂ. ಕರಿಬಸಯ್ಯ, ಐಶ್ವರ್ಯ, ಡಾ.ಗುರುಪಾದಯ್ಯ ಸಾಲಿಮಠ, ಶ್ರೀ ರಂಭಾಪುರಿ ಸ್ವಾಮೀಜಿ ಇಷ್ಟಲಿಂಗ ಪೂಜಾ ನೆರವೇರಿಸಿದರು.
- - --11HRR.01:
ಹರಿಹರ ತಾಲೂಕಿನ ಹನಗವಾಡಿಯಲ್ಲಿ ಮಂಗಳವಾರ ನಡೆದ ಜನಜಾಗೃತಿ ಧರ್ಮ ಸಮಾರಂಭವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು.