ಅಸಹಾಯಕರಿಗೆ ಆಸರೆ ಆಗುವುದೇ ದೇವರ ಕೆಲಸ: ಶಾಸಕ ಸಿದ್ದು ಸವದಿ

| Published : Jul 08 2024, 12:32 AM IST

ಅಸಹಾಯಕರಿಗೆ ಆಸರೆ ಆಗುವುದೇ ದೇವರ ಕೆಲಸ: ಶಾಸಕ ಸಿದ್ದು ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಪುರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ಸಂಜೆ ನಡೆದ ತಾಲೂಕು ಘಟಕದ ಸರ್ಕಾರಿ ನೌಕರರ ಸಂಘದ ಸಾಮಾನ್ಯ ಸಭೆಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಗೆ ದೇವರು ಕಲ್ಪಿಸಿದ ಅವಕಾಶ ಎಂದು ಭಾವಿಸಿ ಸಮಾಜದ ಬಡವರ, ದುರ್ಬಲರ ಸಂಕಷ್ಟ ದೂರಗೊಳಿಸಲು ಶ್ರಮಿಸಬೇಕು. ಅಸಹಾಯಕರ ಬೆನ್ನೆಲುಬಾಗಿ ನಿಂತು ಸರ್ಕಾರಿ ಸೌಲಭ್ಯಗಳ ಕಲ್ಪಿಸಲು ಮುಂದಾದರೆ ಅದೇ ದೇವರ ಕೆಲಸ ಎಂದು ಶಾಸಕ ಸಿದ್ದು ಸವದಿ ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.

ಶುಕ್ರವಾರ ಸಂಜೆ ರಾಮಪುರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಜರುಗಿದ ರಬಕವಿ-ಬನಹಟ್ಟಿ ತಾಲೂಕು ಸರ್ಕಾರಿ ನೌಕರರ ಸಂಘದ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸತ್ಯ ಮತ್ತು ದೇಶ ಶಾಶ್ವತ. ದೇಶ ಕಟ್ಟುವ ಕಾಯಕದಲ್ಲಿ ಸಶಕ್ತ ನಾಗರಿಕರ ನಿರ್ಮಾಣ ನಮ್ಮೆಲ್ಲರ ಕೆಲಸವಾಗಬೇಕು. ಸಂಘಟನೆ ನೌಕರರ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಸಂಘದ ಧುರೀಣರಲ್ಲಿ ನೌಕರರಿಗೆ ನ್ಯಾಯ ಒದಗಿಸಲು ತುಡಿತವಿರಬೇಕು. ರಾಜ್ಯಾಧ್ಯಕ್ಷ ಷಡಕ್ಷರಿ ಕ್ರಿಯಾಶೀಲರಿದ್ದು, ಸರ್ಕಾರದ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ೭ನೇ ವೇತನ ಆಯೋಗ ಜಾರಿಗೊಳಿಸಲು ನಿರ್ಧರಿಸಿದಾಗ ನೀತಿ ಸಂಹಿತೆ ಅಡ್ಡಿಯಾಗಿತ್ತು. ಬಳಿಕ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲೇ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ, ೭ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ಭರವಸೆ ನೀಡಿ, ಇದೂವರೆಗೂ ಜಾರಿಗೊಳಿಸಿಲ್ಲವಾದ್ದರಿಂದ ಜಿಲ್ಲಾಮಟ್ಟದ ಸಂಘಟನೆಗಳ ನಾಯಕರು ರಾಜ್ಯ ಸಮಿತಿಗೆ ಒತ್ತಡ ಹೇರಿ ಸರ್ಕಾರ ಎರಡೂ ಭರವಸೆಗಳ ಈಡೇರಿಕೆಗೆ ಗಡುವು ನೀಡಬೇಕು. ವಿಪಕ್ಷವಾಗಿ ನಾವೂ ಸರ್ಕಾರದ ನಡೆಯ ವಿರುದ್ಧ ಹೋರಾಟ ನಡೆಸುತ್ತೇವೆ. ಬೆಲೆ ಏರಿಕೆ ಬಿಸಿಯ ನಡುವೆ ಬದುಕು ಕಟ್ಟಿಕೊಳ್ಳಲು ಹರಸಾಹಸ ನಡೆಯುತ್ತಿರುವಾಗ ಸಿದ್ದರಾಮಯ್ಯ ಸರ್ಕಾರ ಲೋಕಸಭೆ ಚುನಾವಣೆ ಬಳಿ ಎರಡು ಸಂಪುಟ ಸಭೆ ನಡೆಸಿದರೂ ನಿಮ್ಮ ಬೇಡಿಕೆಗೆ ಅಸ್ತು ಎಂದಿಲ್ಲ. ಸದನದಲ್ಲಿ ನೌಕರರ ಧ್ವನಿಯಾಗಲು ಅವಕಾಶ ಕೋರಿ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.

ಆರೋಗ್ಯ ಸಂಜೀವಿನಿ, ಒಪಿಎಸ್ ಮತ್ತು ೭ನೇ ವೇತನ ಆಯೋಗದ ಶಿಫಾರಸು ಜಾರಿಗಾಗಿ ಬರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಜೊತೆಗೆ ತೆರಳಿ ಗಮನ ಸೆಳೆದು ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಅನಿರ್ದಿಷ್ಠಾವಧಿ ಮುಷ್ಕರ ನಡೆಸಲು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಬಸವರಾಜ ಹನಗಂಡಿ ಹೇಳಿದರು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ಗಿರೀಶ ಸ್ವಾದಿ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಜಗದೀಶ ಈಟಿ, ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ದಣ್ಣಾ ಮೇಣಿ, ಬಿಆರ್‌ಪಿಯ ರಮೇಶ ಅವಟಿ, ಸಂಜು ಸಪರೆಡ್ಡಿ, ವಿಠಲ ವಾಲಿಕಾರ, ಬಿ.ಎಸ್. ಪಾಟೀಲ ಮುಂತಾದವರಿದ್ದರು.

ಸಭೆಯಲ್ಲಿ ಡಿ.ಬಿ. ಜಾಯಗೊಂಡ, ವಿಜಯಕುಮಾರ ಹಲಕುರ್ಕಿ, ಪ್ರಕಾಶ ಮೆಂಡಿ, ಪ್ರಸಾದ ಮಾವರಕರ, ಬಿ.ಡಿ. ನೇಮೇಗೌಡ, ಅನೀಲ ಕಡ್ಲಿ, ಶಿವು ಯಾದವಾಡ, ಬಸವರಾಜ ಮುಧೋಳ ಸೇರಿದಂತೆ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು. ಎಂ.ಕೆ. ಮೇಗಾಡಿ ಸಂಗಡಿಗರು ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಗಡೆಣ್ಣವರ ಸ್ವಾಗತ ಗೀತೆ ಹಾಡಿದರು. ಮಹೇಶ ಬಾಗಲಕೋಟೆ ಸ್ವಾಗತಿಸಿದರು. ಪ್ರಶಾಂತ ಹೊಸಮನಿ ನಿರೂಪಿಸಿದರು.