ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ದೀಪ ಹಚ್ಚಲು ಸ್ವತಹ ದೇವರೆ ಗುರುವಿನ ರೂಪದಲ್ಲಿ ಆಗಮಿಸುತ್ತಾರೆ ಎಂದು ಸಖರಾಯಪಟ್ಟಣದ ನಿವೃತ್ತ ಪ್ರಾಚಾರ್ಯ ಕೆ.ವಿ.ಚಂದ್ರಮೌಳಿ ಹೇಳಿದ್ದಾರೆ.ಸೋಮವಾರ ಪಟ್ಟಣದ ಅಂಚೆ ಪ್ರತಿಷ್ಠಾನದಿಂದ ಮೂರನೇ ವರ್ಷದ ವಾರ್ಷಿಕೋತ್ಸವ, ಶ್ರೀ ದತ್ತ ಜಯಂತಿ, ಶ್ರೀ ದತ್ತ ಹೋಮ, ಭಜನೆ ಮತ್ತು ಪೂರ್ಣಾಹುತಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ದತ್ತ ಗುರುಗಳು ವಿಶ್ವಗುರು, ಶ್ರೀ ಸದಾಶಿವನೇ ಆಗಿದ್ದಾರೆ, ಶ್ರೀ ಕೃಷ್ಣ ದೇವರಿಗೆ ಮಾರ್ಗಶಿರ ಮಾಸ ಬಹು ಇಷ್ಟವಾದ ಮಾಸವಾಗಿದ್ದು, ಚಂದ್ರ ಮೃಗಶಿರಾ ನಕ್ಷತ್ರದ
ಜೊತೆ ಸೇರುತ್ತಾನೆ ಹಾಗಾಗಿ ಮಾರ್ಗಶಿರ ಮಾಸ ತುಂಬಾ ಶ್ರೇಷ್ಠ. ಶ್ರೀ ದತ್ತಾತ್ರೇಯರು ಜನಿಸಿದ್ದು ಮಾರ್ಗಶಿರ ಮಾಸದ ಪೂರ್ಣಿಮ ದಿವಸವೇ ಅಗಿದ್ದು ಶ್ರೀ ದತ್ತ ಜಯಂತಿ ಅಚರಣೆ ಅರ್ಥಪೂರ್ಣವಾಗಿದೆ ಎಂದು ಹೇಳಿದರು.ಭಗವಂತನು ಸ್ವಯಂ ಪ್ರಕಾಶಿತನಾಗಿದ್ದು ಅತ್ರಿ ಮಹರ್ಷಿಗಳ ಪತ್ನಿ ಅನುಸೂಯ ಅವರ ಅಪೇಕ್ಷೆಯಂತೆ ಅವರಲ್ಲಿ ಜನ್ಮ ತಾಳುತ್ತಾನೆ, ಭಕ್ತರ ಮೇಲೆ ಆಪಾರ ಅನುಕಂಪ ಇದ್ದು ಅವರ ಸರಳವಾದ ಧರ್ಮಾನು ಷ್ಠಾನವನ್ನೇ ಒಪ್ಪಿಕೊಂಡು ಭಕ್ತರಿಗೆ ಆಶೀರ್ವದಿಸುತ್ತಾರೆ. ಭಕ್ತರ ಉದ್ದಾರಕ್ಕಾಗಿ ಸದ್ಗುರು ರೂಪದಲ್ಲಿ ಎಲ್ಲ ಕಾಲದಲ್ಲಿಯೂ ಭಕ್ತರನ್ನು ಆಶೀರ್ವದಿಸುತ್ತಾರೆ. ನಾವು ಗುರುವಿನಲ್ಲಿ ಸಂಪೂರ್ಣವಾಗಿ ನಂಬಿಕೆ ಹೊಂದಿದ್ದು ಶರಣಾದಾಗ ಮಾತ್ರ ಸೌಖ್ಯ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಪುರಸಭಾ ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಮಾತನಾಡಿ ಅಂಚೆ ಪ್ರತಿಷ್ಠಾನದ ಹಿರಿಯರಾದ ಎ.ವಿ. ನಾಗಭೂಷಣ್ ಅವರ ಮಾರ್ಗದರ್ಶನಲ್ಲಿ ನಡೆದು ಮತದಾರರ ಅಶೀರ್ವಾದದಿಂದ ಮೂರನೇ ಬಾರಿ ಪುರಸಭೆ ಸದಸ್ಯನಾಗಿದ್ದೇನೆ. ಪುರಸಭೆ11ನೇ ವಾರ್ಡಿನಲ್ಲಿ ಜನಪರ ಅನೇಕ ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.ಅಂಚೆ ಪ್ರತಿಷ್ಠಾನದ ಅಧ್ಯಕ್ಷ ಎ.ವಿ.ನಾಗಭೂಷಣ್ ಮಾತನಾಡಿ ಸಮಾಜದ ಎಲ್ಲರನ್ನೂ ಒಳಗೊಂಡಂತೆ ಅಂಚೆ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ, ಸಮಾಜ ಸೇವೆಯೇ ಪ್ಪತಿಷ್ಠಾನದ ಉದ್ದೇಶ. ಹಿರಿಯ ಸಮಾಜ ಸೇವಕರನ್ನು ಗೌರವಿಸಲಾಗುತ್ತಿದೆ. 16 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಪ್ರತಿಷ್ಟಾನದ ದಿಂದ ನಡೆಸಲಾಗುತ್ತಿದೆ, ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆ ತಿಳಿಸಿದರು.
ಮೈಸೂರು ಶ್ರೀ ಶಾರದ ವಿಲಾಸ ಕಾಲೇಜು ನಿವೃತ್ತ ಕನ್ನಡ ಉಪನ್ಯಾಸಕ ಎ.ವಿ.ಸೂರ್ಯ ನಾರಾಯಣ ಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೂರ್ಯ ಚಂದ್ರರ ದರ್ಶನದಿಂದ ಹೇಗೆ ಆನಂದ ವಾಗುತ್ತದೆಯೋ ಹಾಗೆ ಈ ಕಾರ್ಯಕ್ರಮ ಆನಂದವಾಗುತ್ತದೆ ಎಂದು ಹೇಳಿದರು.ಅಂಚೆ ಪ್ರತಿಷ್ಠಾನದಿಂದ ನಿವೃತ್ತ ಪ್ರಾಚಾರ್ಯ ಕೆ.ವಿ.ಚಂದ್ರಮೌಳಿ ಮತ್ತು ಪುರಸಭೆ ಸದಸ್ಯ ಟಿ.ಜಿ.ಆಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಪ್ರತಿಷ್ಠಾನದ ಖಚಾಂಚಿ ಎಚ್.ವಿ.ಸತ್ಯನಾರಾಯಣ್, ನಿರ್ದೇಶಕ ಅಜ್ಜಂಪುರ ರೇವಣ್ಣ, ಅಂಚೆ ಪ್ರತಿಷ್ಠಾನದ ಸದಸ್ಯರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಚೆ ಪ್ರತಿಷ್ಠಾನದ ಅಧ್ಯಕ್ಷ ಎ.ವಿ.ನಾಗಭೂಷಣ್, ಗೌರಿ ಅಂಚೆ ಇದ್ದರು.25ಕೆಟಿಆರ್.ಕೆ.07ತರೀಕೆರೆಯಲ್ಲಿ ಅಂಚೆ ಪ್ರತಿಷ್ಠಾನ ವತಿಯಿಂದ ಏರ್ಪಾಡಾಗಿದ್ದ ಪ್ರತಿಷ್ಠಾನದ ಮೂರನೇ ವರ್ಷದ ವಾರ್ಷಿಕೋತ್ಸವ, ಶ್ರೀ ದತ್ತ ಜಯಂತಿ ಕಾರ್ಯಕ್ರಮದ ಉದ್ಗಾಟನೆಯನ್ನುಸಖರಾಯಪಟ್ಟಣದ ನಿವೃತ್ತ ಪ್ರಾಚಾರ್ಯರಾದ ಕೆ.ವಿ.ಚಂದ್ರಮೌಳಿ ನೆರವೇರಿಸಿದರು. ನಿವೃತ್ತ ಕನ್ನಡ ಉಪನ್ಯಾಸಕ ಎ.ವಿ.ಸೂರ್ಯ ನಾರಾಯಣ ಸ್ವಾಮಿ, ಪ್ರತಿಷ್ಠಾನದ ಅಧ್ಯಕ್ಷ ಎ.ವಿ.ನಾಗಭೂಷಣ್, ಪುರಸಭೆ ಸದಸ್ಯ ಟಿ.ಜಿ.ಅಶೋಕ ಕುಮಾರ್, ಅಜ್ಜಂಪುರ ರೇವಣ್ಣ ಇದ್ದಾರೆ.