ಸಾರಾಂಶ
ಗೋಕರ್ಣ:ಅಯೋಧ್ಯಾ ರಾಮಮಂದಿರ ಉದ್ಘಾಟನೆ ದಿನವಾದ ಜ. 22ರಂದು ಇಲ್ಲಿನ ಮುಖ್ಯ ಕಡಲ ತೀರದ ಬಳಿ ಇರುವ ಪುರಾಣ ಪ್ರಸಿದ್ಧ ಶ್ರೀರಾಮ ಮಂದಿರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬುಧವಾರ ಸಂಜೆ ದೇವಾಲಯದಲ್ಲಿ ನಡೆಯಿತು. ಮಂದಿರದ ಅರ್ಚಕ ವೇ. ಪ್ರಕಾಶ ಅಂಬೇಕರ್, ವೇ. ಶ್ರೀಧರ ಅಂಬೇಕರ್ ಬಿಡುಗಡೆಗೊಳಿಸಿದರು.ಈ ಕುರಿತು ಮಾತನಾಡಿದ ವೇ. ಸುಬ್ರಹ್ಮಣ್ಯ ಪಂಡಿತ್, ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ಲೋಕಾರ್ಪಣೆಗೊಳ್ಳುವ ಪ್ರಯುಕ್ತ ರಾಮನು ತಪಸ್ಸು ಮಾಡಿದ ಈ ಪವಿತ್ರ ಸ್ಥಳದಲ್ಲಿ ಜ. 17ರಿಂದ ಜ. 23ರ ವರೆಗೆ ಶಾಕಲ ಋಕ್ ಸಂಹಿತಾ ಮಹಾಯಾಗ ನಡೆಯಲಿದೆ. ಜ. 22ರಂದು ಬೆಳಗ್ಗೆ 8 ಗಂಟೆಗೆ ಪುಣ್ಯಾಹವಾಚನ, ಋತ್ವಿಗರ್ಣನೆ, ಗ್ರಹಮಕಪೂರ್ವಕ ರಾಮತಾರಕ ಜಪ ಮತ್ತು ಹವನ, ಕಲಾಭಿವೃದ್ಧಿ, ಕುಂಭಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರುವುದು. ನಂತರ ಮಹಾಮಂಗಳಾರತಿ, ಸಾಮೂಹಿಕ ಪ್ರಾರ್ಥನೆ ಜರುಗಲಿದೆ. ಅಂದು ಸಂಜೆ 4.30ಕ್ಕೆ ಶ್ರೀದೇವರ ಉತ್ಸವ ಮೇಲಿನ ಕೇರಿ ಮಾರುತಿಕಟ್ಟೆ ತಲುಪಲಿದ್ದು, ಈ ಉತ್ಸವ ರಾಮತೀರ್ಥದಿಂದ ಮಣಿಭದ್ರ ಓಣಿ ಮಾರ್ಗವಾಗಿ ಹೊರಟು ರಥಬೀದಿ, ಬಸ್ ನಿಲ್ದಾಣದ ಮುಖಾಂತರ ಚಿನ್ನದಕೇರಿಯಿಂದ ಮಾರುತಿ ಕಟ್ಟೆ ತಲುಪುವುದು, ಮಾರುತಿ ಕಟ್ಟಿಯಿಂದ ಭದ್ರಕಾಳಿ ದೇವಸ್ಥಾನದ ಗಂಜಿಗದ್ದೆ, ಮಾರ್ಗವಾಗಿ ವೆಂಕಟರಮಣ ಮಂದಿರ, ಕೋಟಿ ತೀರ್ಥ ಸುತ್ತಿಗಟ್ಟಿ ರಥಬೀದಿಯಿಂದ ರಾಮತೀರ್ಥಕ್ಕೆ ತಲುಪಲಿದೆ ಎಂದರು.ರಾತ್ರಿ ಹೂವಿನಂಗಿ, ಮಹಾಪೂಜೆ, ಮಹಾಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಸಾಗರಾರತಿ, ರಾಜೋಪಚಾರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 10ಕ್ಕೆ ಯಂಗ್ ಸ್ಟಾರ್ ಕ್ಲಬ್ ವತಿಯಿಂದ ಯಕ್ಷಗಾನ ಪ್ರದರ್ಶನವಿದೆ ಎಂದು ತಿಳಿಸಿದರು.ಈ ವೇಳೆ ಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಾಚಾರ್ಯ ವೇ. ಉದಯ ಮಯ್ಯರ, ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿ ಮೊಳೆ, ವೇ. ದತ್ತಾತ್ರೇಯ ಹೀರೆಗಂಗೆ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಸದಸ್ಯರಾದ ರಮೇಶ ಪ್ರಸಾದ ಸತೀಶ ದೇಶಭಂಡಾರಿ, ಮಹೇಶ ಶೆಟ್ಟಿ, ಯಂಗಸ್ಟಾರ್ ಕ್ಲಬ್ ಅಧ್ಯಕ್ಷ ಕುಮಾರ ಗೋಪಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಮಿತ್ ಗೋಕರ್ಣ, ಸದಸ್ಯ ಅನಿಲ್ ಶೇಟ್, ರವಿ ಗುನಗ, ಗಣಪತಿ ಅಡಿ ,ಅರುಣ್ ಮಂಗರ್ಸಿ ಉಪಸ್ಥಿತರಿದ್ದರು. ಶ್ರೀರಾಮ ದೇವರಿಗೆ ಆರತಿ ಬೆಳಗಿ ಮಂದಿಸುವ ಮೂಲಕ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು.