ಅವ್ಯವಸ್ಥೆಯ ಆಗರವಾದ ಗೋಕರ್ಣ ಬಸ್ ನಿಲ್ದಾಣ

| Published : May 11 2025, 11:50 PM IST

ಸಾರಾಂಶ

ಗೋಕರ್ಣ ಪ್ರವಾಸಿ ತಾಣದ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿ ಉಳಿದಿದೆ

ಗೋಕರ್ಣ: ಪ್ರವಾಸಿ ತಾಣದ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿ ಉಳಿದಿದೆ. ಬಸ್‌ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿದೆ.ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಕೇವಲ ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಮೇಲೆ ಪೌರುಷ ತೋರಿ ತೆರಳುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಂದ ಯಾವುದೇ ಅಭಿವೃದ್ಧಿ ಯೋಜನೆ ಜಾರಿಗೆ ತರಲು ಪ್ರಯತ್ನಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪ್ರಸ್ತುತ ಮಳೆಗಾಲ ಸಮೀಪಿಸುತ್ತಿದ್ದು, ಮಳೆ ಬಂದರೆ ಶಿಥಿಲಗೊಂಡ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಛತ್ರಿ ಹಿಡಿದು ಕುಳಿತುಕೊಳ್ಳಬೇಕಿದೆ.

ಎರಡು ವರ್ಷದ ಹಿಂದೆ ಕುಮಟಾ ಘಟಕ ನಿರ್ವಹಿಸುತ್ತಿದ್ದ ಇಲ್ಲಿನ ಬಸ್ ನಿಲ್ದಾಣವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಸ್ವಚ್ಛತೆ ಹಾಗೂ ನಿರ್ವಹಣೆಗೆ ಪ್ರಥಮ ಸ್ಥಾನ ಪಡೆದ ಅಂಕೋಲಾ ಘಟಕಕ್ಕೆ ನೀಡಲಾಯಿತು. ಇದರಿಂದ ಜನರಿಗೆ ಹೊಸ ನಿರೀಕ್ಷೆ ಮೂಡಿತ್ತು. ಆದರೆ ಇಂದು ಎಲ್ಲವೂ ಹುಸಿಯಾಗಿದೆ. ಎರಡು ವರ್ಷದಿಂದ ಬದಲಾವಣೆ ಎಂದರೆ ಒಂದಿಷ್ಟು ಕಸದ ಬುಟ್ಟಿ ಹಾಗೂ ಸ್ವಚ್ಛತೆ ಕಾಪಾಡಿ ಎಂಬ ನಾಮಫಲಕ ಅಳವಡಿಸಿದ್ದು ಬಿಟ್ಟರೆ ಯಾವುದೇ ಬದಲಾವಣೆ ತರಲಿಲ್ಲ.

ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕಿತ್ತು. ಇದಕ್ಕಾಗಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಪಕ್ಕದಲ್ಲಿದ್ದ ಬಾವಿ ನೀರು ಕಲುಷಿತಗೊಂಡಿದೆ. ಇದುವರೆಗೂ ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಗ್ರಾಮೀಣ ಪ್ರದೇಶದ ಹಲವೆಡೆ ಇನ್ನು ಬಸ್ ವ್ಯವಸ್ಥೆಯಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ತಾಲೂಕು ಕೇಂದ್ರವಾದ ಕುಮಟಾ ಹಾಗೂ ಅಂಕೋಲಾಕ್ಕೆ ರಾತ್ರಿ ವೇಳೆ ಬಸ್ ವ್ಯವಸ್ಥೆಯಲ್ಲದೇ ನಿತ್ಯ ಪ್ರವಾಸಿಗರು, ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ.

ಬಸ್ ನಿಲ್ದಾಣದ ಆವಾರದಲ್ಲಿ ವಾಹನ ನಿಲುಗಡೆ ಅವಕಾಶ ನೀಡಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಇಲ್ಲಿಗೆ ಬಂದ ಪ್ರವಾಸಿಗರು ತ್ಯಾಜ್ಯಗಳ ರಾಶಿ ಸುರಿಯುತ್ತಿದ್ದಾರೆ. ಇದನ್ನ ನಿಯಂತ್ರಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕಸ ಹಾಕುವವರ ಗುರುತಿಸಿ ದಂಡ ವಿಧಿಸಬೇಕು. ನಿಲ್ದಾಣವನ್ನು ಸ್ವಚ್ಛವಾಗಿ ಇಡಲು ಪ್ರಯತ್ನಿಸಬೇಕಿತ್ತು. ಇದು ಕಾರ್ಯರೂಪಕ್ಕೆ ಬಂದಿಲ್ಲ. ಇದರಂತೆ ಇನ್ನು ಅನೇಕ ಸಮಸ್ಯೆಗಳಿವೆ. ಎಲ್ಲವನ್ನು ನಿರ್ಲಕ್ಷಿಸಲಾಗಿದೆ.

ಜಿಲ್ಲೆಯಲ್ಲಿಯೇ ವಿಶಾಲ ಜಾಗ ಹೊಂದಿದ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಇಲ್ಲಿನ ಖಾಲಿ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಜೊತೆಗೆ ಇತ್ತೀಚೆಗೆ ಬೃಹತ್ ವಸತಿಗೃಹ ನಿರ್ಮಿಸಿ ನಡೆಸಲು ಖಾಸಗಿಯವರಿಗೆ ನೀಡಲಾಗಿದೆ. ಖಾಸಗಿ ವಾಹನ ನಿಲುಗಡೆ ಅವಕಾಶ ನೀಡಿ ಟೆಂಡರ್ ಮೂಲಕ ಆದಾಯ ಬರುತ್ತಿದೆ. ಹೀಗೆ ವರ್ಷಕ್ಕೆ ಲಕ್ಷಾಂತರ ರುಪಾಯಿ ಸಂಗ್ರಹವಾದರೂ ಶಿಥಿಲಗೊಂಡ ಬಸ್ ನಿಲ್ದಾಣದ ಬದಲು ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಹಣಕಾಸಿನ ಕೊರತೆ ಎದುರಾಗಿದೆ. ಇದಲ್ಲದೇ ಇಲ್ಲಿ ತುರ್ತು ಅಗತ್ಯವಿರುವ ಕೆಲಸ ಕಾರ್ಯಕ್ಕೂ ಇಲ್ಲಿ ಬರುವ ಆದಾಯ ಬಳಕೆಯಾಗುತ್ತಿಲ್ಲ. ಹೀಗೆ ಯಾವುದೇ ದುರಸ್ತಿ ಮತ್ತಿತರ ಕೆಲಸವಾಗುವುದಿದ್ದರೆ ಕೇಂದ್ರ ಕಚೇರಿಗೆ ಕಳುಹಿಸಿ ಅನುಮೋದನೆ ಪಡೆಯುವಾಗ ಹೆಚ್ಚಿನವು ಹಣಕಾಸಿನ ಕೊರತೆ ಎಂಬ ಉತ್ತರವೇ ಬರುತ್ತದೆ ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಾರಿಗೆ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪ್ರವಾಸಿ ತಾಣದ ಬಸ್ ನಿಲ್ದಾಣದ ಅಭಿವೃದ್ಧಿಯತ್ತ ಕಣ್ತೆರೆದು ನೋಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.