ಸಾರಾಂಶ
ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಆಡಳಿತಕ್ಕೆ ಸಂಬಂಧಪಟ್ಟಂತೆ, ಈ ಹಿಂದೆ ಸುಪ್ರೀಂ ಕೋರ್ಟ್ ನೇಮಿಸಿದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ, ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರಿಗೆ ಸೋಮವಾರ ಸುಪ್ರೀಂ ಕೋರ್ಟ್ ಪುನಃ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಪೂರ್ಣ ಅಧಿಕಾರ ನೀಡಿ ತೀರ್ಪು ನೀಡಿದೆ.
ಸರ್ಕಾರ ನೇಮಿಸಿದ ನಾಲ್ವರು ಸದಸ್ಯರ ನೇಮಕಾತಿಯನ್ನೂ ರದ್ದುಗೊಳಿಸಿ, ಹೊಸ ಸದಸ್ಯರ ನೇಮಕಾತಿಗೆ ಅಧ್ಯಕ್ಷರಿಗೆ ಅಧಿಕಾರ ನೀಡಿ ಆದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ಗೆ ಮುಂದೂಡಿದೆ.ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಒಳಪಡಿಸಿದ ಸುಪ್ರೀಂ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ, ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ನೀಡಿದ ವರದಿಯನ್ನು ಮಾನ್ಯಮಾಡಿದೆ. ಅಷ್ಟೇ ಅಲ್ಲದೆ ಹೈಕೋರ್ಟ್ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ನೀಡಿದ್ದ ತಡೆಯಾಜ್ಞೆಯನ್ನು ವಜಾಗೊಳಿಸಿ ಈ ತೀರ್ಪು ನೀಡಿದೆ.
ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟಂತೆ 2021 ಏಪ್ರೀಲ್‌ನಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದಲ್ಲಿ 8 ಜನರ ಸಮಿತಿ ರಚಿಸಿತ್ತು. ಅದರಲ್ಲಿ 2 ಸ್ಥಳೀಯ ಉಪಾಧಿವಂತ ಮತ್ತು ವಿದ್ವಾಂಸರ ನೇಮಕಾತಿಯ ಅಧಿಕಾರವನ್ನು ಸರ್ಕಾರಕ್ಕೆ ನೀಡಿತ್ತು. ಅದರಂತೆ ಆಗಿನ ಬಿಜೆಪಿ ಸರ್ಕಾರ ನಾಲ್ವರನ್ನು ನೇಮಿಸಿತ್ತು.2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಆ ನಾಲ್ವರ ನೇಮಕಾತಿ ರದ್ದುಗೊಳಿಸಿ, ಪುನಃ ಬೇರೆ ನಾಲ್ವರನ್ನು ನೇಮಿಸಿ ಆದೇಶಿಸಿತ್ತು. ಕಾಂಗ್ರೆಸ್ ಸರ್ಕಾರ ನೇಮಿಸಿದ ನಾಲ್ವರ ವಿರುದ್ಧ ರಾಮಚಂದ್ರಾಪುರ ಮಠ ಹೈಕೋರ್ಟಿನಲ್ಲಿ ತಡೆಯಾಜ್ಞೆ ತಂದಿತ್ತು. ಇದರಿಂದ ಬಿಜೆಪಿ ಸರ್ಕಾರ ನೇಮಿಸಿದ 4 ಜನರೇ ಸಮಿತಿಯ ಸದಸ್ಯರಾಗಿ ಮುಂದುವರಿದಿದ್ದರು.
ಈ ತಡೆಯಾಜ್ಞೆ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಸುಪ್ರೀಂ ಕೋರ್ಟ್‌ಗೆ ತಮ್ಮ ಅಭಿಪ್ರಾಯದ ವರದಿಯನ್ನು ಸಲ್ಲಿಸಿದ್ದರು. ಈಗಿರುವ ಸಮಿತಿಯಿಂದ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ. ಇವರ ಮೇಲೆ ಕ್ರಮ ತೆಗೆದುಕೊಂಡು ನನಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು. ಇಲ್ಲ ಎಂದರೆ ಈ ಹುದ್ದೆಯಿಂದ ನನ್ನನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು.ಸೋಮವಾರ ಅಧ್ಯಕ್ಷರ ವರದಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಚಂದ್ರಚೂಡ ನೇತೃತ್ವದ ಪೀಠ, ಅಧ್ಯಕ್ಷರ ವರದಿಯನ್ನು ಮಾನ್ಯ ಮಾಡಿದೆ. ಅವರಿಗೆ ಸಂಪೂರ್ಣ ಆಡಳಿತಾತ್ಮಕ ಅಧಿಕಾರವನ್ನು ನೀಡಿದೆ. ಉಳಿದ ಸದಸ್ಯರು ಸಲಹೆ ಮಾತ್ರ ನೀಡಬಹುದಾಗಿದೆ. ರಾಮಚಂದ್ರಾಪುರ ಮಠದ ಪರ ಪಡೆದ ತಡೆಯಾಜ್ಞೆಯನ್ನೂ ರದ್ದುಗೊಳಿಸಿದೆ. ಸದಸ್ಯರ ನೇಮಕಾತಿಯ ಅಧಿಕಾರ ಅಧ್ಯಕ್ಷರಿಗೆ ನೀಡಿದೆ.