ಅಂಜನಾದ್ರಿಯ ಆಂಜನೇಯನ ದೇವಸ್ಥಾನಕ್ಕೆ ಉದ್ಯಮಿ ಮಹೇಶ ರೆಡ್ಡಿ 1.5 ಕೆಜಿ ಚಿನ್ನದ್ದು ಎಂದು ಚಿನ್ನಲೇಪಿತ ತಾಮ್ರದ ಆಭರಣಗಳನ್ನು ನೀಡಿದ್ದು, ಈಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಅಂಜನಾದ್ರಿಯ ಆಂಜನೇಯನ ದೇವಸ್ಥಾನಕ್ಕೆ ಉದ್ಯಮಿ ಮಹೇಶ ರೆಡ್ಡಿ 1.5 ಕೆಜಿ ಚಿನ್ನದ್ದು ಎಂದು ಚಿನ್ನಲೇಪಿತ ತಾಮ್ರದ ಆಭರಣಗಳನ್ನು ನೀಡಿದ್ದು, ಈಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ಹೈದರಾಬಾದ್ ಮೂಲದ ಮಹೇಶ ರೆಡ್ಡಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಉಪಸ್ಥಿತಿಯಲ್ಲಿ ₹2.5 ಕೋಟಿ ಮೌಲ್ಯದ್ದು ಎಂದು ನೀಡಿದ್ದ ಆಭರಣಗಳೇ ಈಗ ಪೂರ್ಣ ಚಿನ್ನದ್ದು ಅಲ್ಲ, ಅವುಗಳು ಕೇವಲ ಚಿನ್ನಲೇಪಿತ ತಾಮ್ರದ ಆಭರಣಗಳು ಎಂದು ಖಚಿತ ಆಗಿರುವುದರಿಂದ ಅವುಗಳಲ್ಲಿರುವ ಚಿನ್ನದ ಪ್ರಮಾಣ ಎಷ್ಟು ಎಂದು ತಿಳಿಯುವುದೇ ದೊಡ್ಡ ಸವಾಲು ಆಗಿದೆ.

ಆಭರಣಗಳನ್ನು ಸಿದ್ಧ ಮಾಡಿರುವ ಅಕ್ಕಸಾಲಿಗ ಗುಂಡಾಚಾರ್ಯ ಅವರೇ ಇದು ಚಿನ್ನಲೇಪಿತ ತಾಮ್ರದ ಆಭರಣ ಎಂದು ಹೇಳಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಬಂಗಾರ ತಪಾಸಣೆ ಮಾಡುವ ಅಕ್ಕಸಾಲಿಗರು ಪರಿಶೀಲನೆ ನಡೆಸಿದಾಗ ಇದು ಪೂರ್ಣ ಪ್ರಮಾಣದ ಬಂಗಾರ ಅಲ್ಲ ಎಂದಿದ್ದಾರೆ.

ಪ್ರಮಾಣ ತಿಳಿಯುವುದೇ ಸವಾಲು: ದೇಣಿಗೆ ಕೊಟ್ಟಿರುವ ಆಭರಣಗಳನ್ನು ಒರೆಗೆ ಹಚ್ಚದೆ ಹಾಗೆ ಇಡುವಂತಿಲ್ಲ. ಆಭರಣಗಳನ್ನು ಕರಗಿಸದೆ, ಎಷ್ಟು ಬಂಗಾರ ಇದೆ ಎಂದು ಗೊತ್ತಾಗುವುದಿಲ್ಲ. ಹೀಗಾಗಿ, ಇವುಗಳಲ್ಲಿರುವ ಬಂಗಾರದ ಪ್ರಮಾಣ ಎಷ್ಟು ಎನ್ನುವದನ್ನು ತಿಳಿಯುವುದೇ ದೊಡ್ಡ ಸವಾಲು ಆಗಿದೆ.

ಉದ್ಯಮಿ ಮಹೇಶ ರೆಡ್ಡಿ ಅವರಿಗೆ ಈಗಾಗಲೇ ದಾಖಲೆಯನ್ನು ಒದಗಿಸುವಂತೆ ಸೂಚಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ದಾಖಲಾತಿಯನ್ನು ಅವರು ಒದಗಿಸಿಲ್ಲ.

ಕಾಣಿಕೆ ಹುಂಡಿಗೆ ಬಂದಿದ್ದರೆ ಅವುಗಳನ್ನು ಕರಗಿಸಿ, ಅವುಗಳಲ್ಲಿರುವ ಬಂಗಾರ ಪ್ರಮಾಣವನ್ನು ಸುಲಭವಾಗಿ ಅಳೆಯಬಹುದಾಗಿತ್ತು. ಆದರೆ ದೇವರಿಗೆ ಪ್ರಭಾವಳಿಗಳನ್ನು ನೀಡಿರುವುದರಿಂದ ಅವುಗಳನ್ನು ನಿತ್ಯವೂ ಹಾಕಬೇಕಾಗುತ್ತದೆ. ಹೀಗಾಗಿ ಕರಗಿಸಲು ಸಾಧ್ಯವಿಲ್ಲ. ಈಗ ದೇಣಿಗೆ ನೀಡಿರುವ ಉದ್ಯಮಿಗೆ ಪೂರಕ ದಾಖಲೆ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ.

ಚಿನ್ನಲೇಪಿತ ತಾಮ್ರದ ಆಭರಣಗಳನ್ನು ನೀಡಿ, ಚಿನ್ನದ್ದು ಎಂದು ಹೇಳಿ ಕೊಟ್ಟಿದ್ದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ದೇವರಿಗೆ ಕೊಟ್ಟ ಕಾಣಿಕೆಯಲ್ಲಿಯೂ ಮೋಸ ಮಾಡಿದ್ದಾದರೂ ಯಾಕೆ ? ಎನ್ನುವುದನ್ನು ಕಾಣಿಕೆ ನೀಡಿದವರೇ ಹೇಳಬೇಕಾಗಿದೆ.ಬಂಗಾರ ಖರೀದಿಸಿದ ಬಿಲ್ ತಂದುಕೊಟ್ಟ ಉದ್ಯಮಿ ಮಹೇಶ ರೆಡ್ಡಿ: ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ನೀಡಿದ್ದ ಬಂಗಾರದ ಪ್ರಭಾವಳಿಗಳಿಗೆ ಉದ್ಯಮಿ ಮಹೇಶ ರೆಡ್ಡಿ ಜಿಎಸ್‌ಟಿ ಬಿಲ್‌ ಸಲ್ಲಿಸಿದ್ದಾರೆ. ಜಿಲ್ಲಾಡಳಿತಕ್ಕೆ ಬಂಗಾರದ ಖರೀದಿಸಿದ ಬಿಲ್ ನೀಡಿದ್ದು, ಅದರ ಪ್ರಕಾರ 1400 ಗ್ರಾಮ ಬಂಗಾರವನ್ನು 2,20,42,000 ಪಾವತಿ ಮಾಡಿ, ಖರೀದಿಸಿದ್ದ ಲೆಕ್ಕವನ್ನು ನೀಡಿದ್ದಾರೆ. ಹೀಗಾಗಿ, ಈಗ ಕೊಟ್ಟಿರುವ ಬಂಗಾರದ ಪ್ರಭಾವಳಿಯಲ್ಲಿ 1400 ಗ್ರಾಮ ಚಿನ್ನ ಇದೆಯೋ ಇಲ್ಲ ಎನ್ನುವುದನ್ನು ಪರಮಾರ್ಶೆಗೆ ಒಳಪಡಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.ದಾಖಲೆ ಕೇಳಿದ್ದೇವೆ: ಅಂಜನಾದ್ರಿಯ ಆಂಜನೇಯನಿಗೆ ಕೊಟ್ಟಿರುವ ಪ್ರಭಾವಳಿಗಳಲ್ಲಿ ಬಂಗಾರ ಎಷ್ಟಿದೆ ಎನ್ನುವುದನ್ನು ಪತ್ತೆ ಮಾಡುವುದು ದೊಡ್ಡ ಸವಾಲು ಆಗಿದೆ. ಅದನ್ನು ಕರಗಿಸಿಯೇ ನೋಡಬೇಕು. ದೇವರಿಗೆ ಕೊಟ್ಟಿರುವ ಆಭರಣಗಳನ್ನು ಕರಗಿಸುವಂತೆ ಇಲ್ಲ. ಹೀಗಾಗಿ, ಕಾಣಿಕೆ ಕೊಟ್ಟವರಿಂದಲೇ ಬಂಗಾರ ಖರೀದಿ ಮಾಡಿದ್ದರ ದಾಖಲೆ ಮತ್ತು ಆಭರಣ ಮಾಡಿಸಿದ್ದರಿಂದ ದಾಖಲೆ ಕೇಳಿದ್ದೇವೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಹೇಳಿದರು.