ಸಾರಾಂಶ
ಕಾಯಿಲೆ ವಾಸ ಮಾಡುತ್ತೇನೆ ಎಂದು ಹೇಳಿ ಮಹಿಳೆಯ ಮಾಂಗಲ್ಯ ಸರ, ಪುರುಷನ ಉಂಗುರವನ್ನು ಅಪಹರಿಸಿಕೊಂಡು ಹೋಗಿದ್ದ ಕಳ್ಳ ಸ್ವಾಮಿಯೋರ್ವನನ್ನು ಗ್ರಾಮಾಂತರ ಠಾಣೆ ಪೊಲೀಸರು ಮಾಲು ಸಹಿತ ಬಂಧಿಸಿದ್ದಾರೆ.
ಸಾಗರ: ಕಾಯಿಲೆ ವಾಸ ಮಾಡುತ್ತೇನೆ ಎಂದು ಹೇಳಿ ಮಹಿಳೆಯ ಮಾಂಗಲ್ಯ ಸರ, ಪುರುಷನ ಉಂಗುರವನ್ನು ಅಪಹರಿಸಿಕೊಂಡು ಹೋಗಿದ್ದ ಕಳ್ಳ ಸ್ವಾಮಿಯೋರ್ವನನ್ನು ಗ್ರಾಮಾಂತರ ಠಾಣೆ ಪೊಲೀಸರು ಮಾಲು ಸಹಿತ ಬಂಧಿಸಿದ್ದಾರೆ.
ತಾಲೂಕಿನ ಹೊನ್ನೆಸರ ಗ್ರಾಮದ ವಿನಾಯಕ ಅವರ ಮನೆಯಲ್ಲಿ ಮಾ.೨೩ರಂದು ಮಧ್ಯಾಹ್ನ ೨ ಗಂಟೆ ಸಮಯದಲ್ಲಿ ಆರೋಪಿಯು ವಿನಾಯಕ ಅವರ ಪತ್ನಿ ಶೈಲಜಾ ಅವರ ಆರೋಗ್ಯ ಸುಧಾರಿಸಲು ಪೂಜೆ ಮಾಡಬೇಕು ಎಂದು ಹೇಳಿದ್ದಾನೆ. ಪತ್ನಿಯ ಆರೋಗ್ಯ ಸುಧಾರಿಸುತ್ತದೆ ಎಂದು ಪತಿ ವಿನಾಯಕ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.ಪೂಜೆ ಮಾಡಲು ಹಿಟ್ಟಿನ ಗೊಂಬೆಯೊಳಗೆ ಚೈನ್ ಮತ್ತು ಉಂಗುರ ಅಡಗಿಸಿ ಇಡಬೇಡಬೇಕು ಎಂದು ಹೇಳಿ ಶೈಲಜಾ ಅವರ ೩೫ ಗ್ರಾಂ ತೂಕದ ಮಾಂಗಲ್ಯ ಸರ, ವಿನಾಯಕ ಅವರ ಕೈನಲ್ಲಿದ್ದ ೫ಗ್ರಾಂ ತೂಕದ ಉಂಗುರವನ್ನು ಸ್ವಾಮಿ ಪಡೆದಿದ್ದಾನೆ. ಆದರೆ ಪೂಜೆ ನಂತರ ಹಿಟ್ಟಿನ ಗೊಂಬೆಯಲ್ಲಿ ಹುಡುಕಿದಾಗ ಮಾಂಗಲ್ಯ ಸರ ಮತ್ತು ಉಂಗುರ ನಾಪತ್ತೆಯಾಗಿತ್ತು. ಈ ಸಂಬಂಧ ವಿನಾಯಕ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಜಿಲ್ಲಾ ರಕ್ಷಣಾಧಿಕಾರಿಗಳ ಸೂಚನೆ ಮೇರೆಗೆ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಮಾಂಗಲ್ಯಸರ ಮತ್ತು ಚಿನ್ನದ ಉಂಗುರ ಕಳ್ಳತನ ಮಾಡಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹೊಂಬ್ಳಿ ಗ್ರಾಮದ ವಾಸಿ ಬಸಯ್ಯ ಹಿರೇಮಠ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ೩.೪೦ ಲಕ್ಷ ರು. ಮೌಲ್ಯದ ಮಾಂಗಲ್ಯ ಸರ ಮತ್ತು ಉಂಗುರವನ್ನು ವಶಕ್ಕೆ ಪಡೆಯಲಾಗಿದೆ.ಗ್ರಾಮಾಂತರ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಸಿದ್ದರಾಮಪ್ಪ, ಸಿಬ್ಬಂದಿಗಳಾದ ಶೇಕ್ ಫೈರೋಜ್ ಅಹ್ಮದ್, ರವಿಕುಮಾರ್, ಹನುಮಂತ ಜಂಬೂರು, ನಂದೀಶ್, ಪ್ರವೀಣ್ ಕುಮಾರ್, ಜಿಲ್ಲಾ ತಾಂತ್ರಿಕ ಘಟಕದ ಇಂದ್ರೇಶ್ ಹಾಗೂ ವಿಜಯಕುಮಾರ್ ಪಾಲ್ಗೊಂಡಿದ್ದರು.