ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಉನ್ನತ ಶಿಕ್ಷಣದಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆಯಾಗಿ ರ್‍ಯಾಂಕ್ ಪಡೆಯುವ ಮೂಲಕ ರೈತರ ಮಕ್ಕಳು, ಕೃಷಿ ಕೂಲಿಕಾರ್ಮಿಕ ದಂಪತಿಯ ಪುತ್ರಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಹೆತ್ತವರ ಹೆಸರಿಗೆ ಕೀರ್ತಿ ತಂದಿದ್ದಾರೆ. ಮಕ್ಕಳ ಸಾಧನೆ ಕಂಡ ತಂದೆ-ತಾಯಿಯ ಸಂತಸಕ್ಕೆ ಪಾರವೇ ಇರಲಿಲ್ಲ.ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎಪಿಜೆ ಅಬ್ದುಲ್ ಕಲಾಂ ಜ್ಞಾನಸಂಗಮ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. ತಮ್ಮ ಮಕ್ಕಳು ಚಿನ್ನದ ಪದಕ ಹಾಗೂ ಉನ್ನತ ಶಿಕ್ಷಣದ ಪ್ರಮಾಣ ಪತ್ರ ಸ್ವೀಕರಿಸುವ ಕ್ಷಣವನ್ನು ಪಾಲಕರು ಕಣ್ತುಂಬಿಕೊಂಡು ಆನಂದ ಭಾಷ್ಪ ಹರಿಸಿ, ಮಕ್ಕಳಿಗೆ ಶುಭ ಹಾರೈಸಿದರು. ಪಾಲಕರ ಸಂತಸಕ್ಕೆ ಪಾರವೇ ಇರಲಿಲ್ಲ.
ವಿಶೇಷವಾಗಿ ಚಿಕ್ಕೋಡಿ ತಾಲೂಕಿನ ಕುಟಾಳಿ ಗ್ರಾಮದ ಕೃಷಿ ಕೂಲಿ ಕಾರ್ಮಿಕ ದಂಪತಿ ಪುತ್ರಿ ಮೀನಾಕ್ಷಿ ಪುಂಡಲೀಕ ದಾವನೆ ಎಂಬ ವಿದ್ಯಾರ್ಥಿನಿ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡು ಗಮನ ಸೆಳೆದರು. ಇವರ ತಂದೆ ಪುಂಡಲೀಕ ಮತ್ತು ತಾಯಿ ಅನಿತಾ ಇಬ್ಬರೂ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಈ ದಂಪತಿಗೆ ಐವರು ಮಕ್ಕಳಿದ್ದು, ಮೊದಲ ಪುತ್ರಿ ಅಮೃತಾ , ಚಿಕ್ಕೋಡಿ ಸಿವಿಲ್ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರಿ ಮಾಡುತ್ತಿದ್ದರೆ, ಎರಡನೇ ಪುತ್ರ ಅಮರ ಸ್ವಗ್ರಾಮ ಕುಟಾಳಿಯಲ್ಲಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕನೇ ಪುತ್ರಿ ಸುಮಿತ್ರಾ ಎಂಎ, ಬಿ.ಇಡಿ ಪದವಿ ಪಡೆದಿದ್ದು, ಸರ್ಕಾರಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿ. ಇನ್ನು ಕೊನೆಯ ಪುತ್ರ ಭೀಮರಾವ ಬಿಇ ಸಿವಿಲ್ ಮುಗಿಸಿದ್ದು, ಬೆಂಗಳೂರಿನ ಎಟಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 3ನೇ ಪುತ್ರಿ ಮೀನಾಕ್ಷಿ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಈಗ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.ಉನ್ನತ ಶಿಕ್ಷಣದಲ್ಲಿ ನನಗೆ ಚಿನ್ನದ ಪದಕ ದೊರೆತಿರುವುದರಿಂದ ತುಂಬಾ ಖುಷಿ ಆಗುತ್ತಿದೆ. ನನ್ನ ಈ ಸಾಧನೆಗೆ ನನ್ನ ತಂದೆ-ತಾಯಿ ಆಶೀರ್ವಾದ ಹಾಗೂ ಉಪನ್ಯಾಸಕರ ಪ್ರೋತ್ಸಾಹ ಕಾರಣ. ವಸತಿ ನಿಲಯದಲ್ಲಿದ್ದುಕೊಂಡು ನಾನು ಉನ್ನತ ಶಿಕ್ಷಣ ಅಧ್ಯಯನ ಮಾಡಿದ್ದೇನೆ. ವಸತಿ ನಿಲಯದಲ್ಲಿರುವುದರಿಂದ ಅಧ್ಯಯನ ಮಾಡಲು ನನಗೆ ತುಂಬಾ ಅನುಕೂಲವಾಗಿದೆ. ಭವಿಷ್ಯತ್ತಿನಲ್ಲಿ ಪಿಯು ಇಲ್ಲವೆ, ಡಿಗ್ರಿ ಕಾಲೇಜಿನ ಉಪನ್ಯಾಸಕಿಯಾಗುವ ಗುರಿ ಇದೆ ಎಂದು ಮೀನಾಕ್ಷಿ ದಾವನೆ ಹೇಳಿದರು.
ಎರಡು ಚಿನ್ನದ ಪದಕ ಮುಡಿಗೇರಿಸಿಕೊಂಡ ಮಹೇಶ್ವರಿ:ಎಂಎ (ಕನ್ನಡ)ದಲ್ಲಿ ಮಹೇಶ್ವರಿ ತೇಗೂರ ಎರಡು ಚಿನ್ನದ ಪದಕ ಪಡೆದಿದ್ದಾರೆ. ಇವರ ತಂದೆ ಶಿವಾನಂದ ರೈತರಾಗಿದ್ದಾರೆ. ತಾಯಿ ಮಹಾದೇವಿ ಗೃಹಣಿ. ಈ ದಂಪತಿಗೆ ಮೂವರು ಮಕ್ಕಳು. ಓರ್ವ ಪುತ್ರ ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್. ಇನ್ನೋರ್ವ ಪುತ್ರಿ ಮದುವೆಯಾಗಿದೆ. ಮಹೇಶ್ವರಿ ಎಂಎ ಕನ್ನಡದಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ. ಭವಿಷ್ಯತ್ತಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಸಹಾಯಕ ಉಪನ್ಯಾಸಕಿಯಾಗುವ ಗುರಿ ಹೊಂದಿದ್ದಾರೆ. ನನಗೆ ಎರಡು ಚಿನ್ನದ ಪದಕ ದೊರೆತಿರುವುದರಿಂದ ತುಂಬಾ ಸಂತಸವಾಗಿದೆ. ಇದಕ್ಕೆ ನನ್ನ ತಂದೆ-ತಾಯಿ ಹಾಗೂ ಉಪನ್ಯಾಸಕರ ಪ್ರೋತ್ಸಾಹವೇ ಕಾರಣ ಎಂದು ಮಹೇಶ್ವರಿ ತೇಗೂರು ಸಂತಸ ವ್ಯಕ್ತಪಡಿಸಿದರು.
ಎಂಎ ಪತ್ರಿಕೋದ್ಯಮ ವಿಭಾಗದಲ್ಲಿ ಸಂಜೀವಿನಿ ಶ್ರೀಶೈಲ ಉಳ್ಳೇಗಡ್ಡಿ ಅವರಿಗೆ ಒಂದು ಚಿನ್ನದ ಪದಕ ಪಡೆದಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮದಭಾವಿ ಗ್ರಾಮದವರು. ಇವರ ತಂದೆ ಶ್ರೀಶೈಲ ರೈತರಾಗಿದ್ದಾರೆ. ತಾಯಿ ಗೃಹಣಿ. ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಈ ದಂಪತಿಗೆ ನಾಲ್ವರು ಮಕ್ಕಳು, ಓರ್ವ ಪುತ್ರ, ಮೂವರು ಪುತ್ರಿಯರು. ಈ ಪೈಕಿ ಓರ್ವ ಪುತ್ರಿ ವಿವಾಹವಾಗಿದೆ. ಎಂಎ ಪತ್ರಿಕೋದ್ಯಮದಲ್ಲಿ ಚಿನ್ನದ ಪದಕ ಸಿಕ್ಕಿರುವುದರಿಂದ ತುಂಬಾ ಸಂತಸವಾಗಿದೆ. ಭವಿಷ್ಯತ್ತಿನಲ್ಲಿ ನಾನು ಪಿಎಚ್‌ಡಿ ವ್ಯಾಸಂಗ ಮಾಡಬೇಕೆಂದಿದ್ದೇನೆ. ಸದ್ಯ ಬೆಂಗಳೂರಿನಲ್ಲಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಈ ಸಾಧನೆಗೆ ತಂದೆ-ತಾಯಿ ಆರ್ಶೀವಾದ, ಸಹಕಾರ ಹಾಗೂ ಉಪನ್ಯಾಸಕರ ಪ್ರೋತ್ಸಾಹವೇ ಕಾರಣ ಎಂದು ಸಂಜೀವಿನಿ ಉಳ್ಳೇಗಡ್ಡಿ ಸಂತಸ ವ್ಯಕ್ತಪಡಿಸಿದರು.ನಾವು ಬೇರೆಯವರ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತೇವೆ .ಆದರೆ, ನಮ್ಮ ಮಕ್ಕಳ ಓದಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಚಿನ್ನದ ಪದಕ ಸಿಕ್ಕಿರುವುದರಿಂದ ತುಂಬಾ ಸಂತಸವಾಗಿದೆ.-ಪುಂಡಲೀಕ ದಾವನೆ, ಮೀನಾಕ್ಷಿ ತಂದೆ