ಕೂಲಿ ಕೆಲಸದಾಕೆಯ ಪುತ್ರಿಗೆ ಎಂಎಸ್‌ಸಿ ಅಗ್ರಿಯಲ್ಲಿ ಬಂಗಾರದ ಪದಕ

| Published : Jun 29 2024, 12:35 AM IST / Updated: Jun 29 2024, 12:06 PM IST

books
ಕೂಲಿ ಕೆಲಸದಾಕೆಯ ಪುತ್ರಿಗೆ ಎಂಎಸ್‌ಸಿ ಅಗ್ರಿಯಲ್ಲಿ ಬಂಗಾರದ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ನಿವಾಸಿ ಹುಲಿಗೆಮ್ಮ ಅವರ ಪುತ್ರಿ ಸಿದ್ದಮ್ಮ ಚೋಟಪ್ಪನವರ ಎಂಎಸ್ಸಿ ಅಗ್ರಿಯಲ್ಲಿ ಚಿನ್ನದ ಪದಕ ಪಡೆದಿದ್ದಾಳೆ.

ಸೋಮರಡ್ಡಿ ಅಳವಂಡಿ

  ಕೊಪ್ಪಳ: ಕಿತ್ತು ತಿನ್ನುವ ಬಡತನ, ಕೂಲಿ ಕೆಲಸ ಮಾಡಿ ಜೀವನದ ಬಂಡಿ ಸಾಗಿಸುವ ಜೊತೆಗೆ, ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮಹದಾಸೆ ಹೊತ್ತಿದ್ದ ಮಹಾತಾಯಿಯ ಪುತ್ರಿಯೋರ್ವಳು ಧಾರವಾಡದ ಕೃಷಿ ವಿವಿಯಲ್ಲಿ ಎಂಎಸ್‌ಸಿ ಅಗ್ರಿ ಕೀಟಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್‌ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ನಿವಾಸಿ ಹುಲಿಗೆಮ್ಮ ಅವರ ಪುತ್ರಿ ಸಿದ್ದಮ್ಮ ಚೋಟಪ್ಪನವರ ಇಂತಹ ಸಾಧನೆ ಮಾಡಿದ್ದಾರೆ. ಶೇ.94.8 ಅಂಕದೊಂದಿಗೆ ವಿವಿಗೆ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದಿದ್ದಾರೆ.

ಧಾರವಾಡ ಕೃಷಿ ವಿವಿಯಲ್ಲಿ ಗುರುವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ಬಂಗಾರದ ಪದಕ ನೀಡಿ ಪುರಸ್ಕರಿಸಿದ್ದಾರೆ.

ಕಿತ್ತು ತಿನ್ನುವ ಬಡತನ

ಹುಲಿಗೆಮ್ಮನ ಪತಿ ಬೇಗನೆ ತೀರಿಕೊಂಡರು. ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಜೋಪಾನ ಮಾಡುವ ಹೊಣೆ ಹುಲಿಗೆಮ್ಮಾ ಅವರದು. ಹೀಗಾಗಿ, ಕೂಲಿ ಕೆಲಸ ಮಾಡುತ್ತಲೇ ಮಕ್ಕಳನ್ನು ಚೆನ್ನಾಗಿಯೇ ಓದಿಸಬೇಕು ಎನ್ನುವ ಹುಲಿಗೆಮ್ಮಾ ತಾಯಿಯ ಆಸೆಗೆ ಮಕ್ಕಳು ಜೀವತುಂಬಿದ್ದಾರೆ.

ನಾಲ್ಕನೇ ಮಗಳು ಸಿದ್ದಮ್ಮ ಓದಿನಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕೊಪ್ಪಳ ನಗರದ ಶ್ರೀ ಶಾರದಾ ಶಾಲೆಯಲ್ಲಿ ಪೂರೈಸಿದ ಸಿದ್ದಮ್ಮ, ಗಂಗಾವತಿಯ ವಡ್ಡರಟ್ಟಿ ಗ್ರಾಮದ ಸರ್ಕಾರಿ ಕಿತ್ತೂರರಾಣಿ ಚೆನ್ನಮ್ಮ ಶಾಲೆಯಲ್ಲಿ ಹತ್ತನೇ ತರಗತಿ ವರೆಗೂ ಓದುತ್ತಾಳೆ. ಹತ್ತನೇ ತರಗತಿಯಲ್ಲಿ ಶೇಕಡಾ 90ಕ್ಕೂ ಅಧಿಕ ಅಂಕ ಪಡೆದು, ಮಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿಗೆ ಉಚಿತ ಪ್ರವೇಶ ಪಡೆಯುತ್ತಾಳೆ. ಪಿಯುಸಿಯಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ ಸಿದ್ದಮ್ಮ ರಾಯಚೂರು ಕೃಷಿ ವಿವಿಯ ಬಿಎಸ್ಸಿ ಅಗ್ರಿಗೆ ಸಿಇಟಿ ಪರೀಕ್ಷೆ ಬರೆದು ಆಯ್ಕೆಯಾಗುತ್ತಾಳೆ.

ಅಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ ಸಿದ್ದಮ್ಮ ಧಾರವಾಡ ಕೃಷಿ ವಿವಿಯಲ್ಲಿ ಎಂಎಸ್ಸಿ ಅಗ್ರಿ ಕೀಟಶಾಸ್ತ್ರ ವಿಭಾಗದಲ್ಲಿ ಮೆರಿಟ್ ಸೀಟ್‌ ಸಿಗುತ್ತದೆ. ಇದೀಗ ಸಿದ್ದಮ್ಮ ಎಂಎಸ್ಸಿಯಲ್ಲಿ ಶೇಕಡಾ 94.8ರಷ್ಟು ಅಂಕ ಪಡೆದು, ಪ್ರಥಮ ರ್‍ಯಾಂಕ್‌ ಪಡೆದು ಗೋಲ್ಡ್‌ ಮೆಡಲ್‌ ಮುಡಿಗೇರಿಸಿಕೊಂಡಿದ್ದಾರೆ.

ತಾಯಿಯ ಹಠ

ತಂದೆ ತೀರಿದ ಬಳಿಕ ತಾಯಿಯ ಆಸರೆಯಲ್ಲಿಯೇ ಸಿದ್ದಮ್ಮ ಬೆಳೆದಿದ್ದಾಳೆ. ಮಕ್ಕಳನ್ನ ಚೆನ್ನಾಗಿ ಓದಿಸಬೇಕು ಎಂದು ಕೂಲಿ ಮಾಡುತ್ತಲೇ ಹುಲಿಗೆಮ್ಮಾ ಪ್ರಯತ್ನ ಮಾಡುತ್ತಾಳೆ. ಈಗ ಮಗಳ ಸಾಧನೆಯಿಂದ ಹುಲಿಗೆಮ್ಮ ಹಿರಿಹಿರಿ ಹಿಗ್ಗಿದ್ದಾಳೆ. ಘಟಿಕೋತ್ಸವ ಸಮಾರಂಭದಲ್ಲಿ ಮಗಳು ಸಿದ್ದಮ್ಮಗೋಲ್ಡ್ ಮೆಡಲ್ ಸ್ವೀಕಾರ ಮಾಡುವ ವೇದಿಕೆಯ ಎದುರಿಗೆ ಕುಳಿತು ಸಂಭ್ರಮಿಸಿದ್ದಾರೆ. ಅವರ ಸಂತಸಕ್ಕೆ ಪಾರವೇ ಇಲ್ಲ ಎನ್ನುವಂತೆ ಆಗಿದೆ.

ಫಲ ದೊರೆತಿದೆ

ಮಗಳ ಸಾಧನೆಯನ್ನು ಕಂಡು ನನ್ನೆಲ್ಲ ಕಷ್ಟಕ್ಕೂ ಫಲ ದೊರೆತಂತೆ ಆಗಿದೆ. ನಾನು ಕೂಲಿ ಮಾಡಿದರೂ ಪರವಾಗಿಲ್ಲ. ಮಕ್ಕಳು ಚೆನ್ನಾಗಿ ಓದಬೇಕು ಎನ್ನುವ ಬಯಕೆ ಈಡೇರಿದೆ. ನನಗಂತೂ ತುಂಬಾ ಸಂತೋಷವಾಗಿದೆ.

ಹುಲಿಗೆಮ್ಮಾ ಚೋಟಪ್ಪನವರ, ಸಿದ್ದಮ್ಮಳ ತಾಯಿ

ಋಣ ತೀರಸಬೇಕಿದೆ

ನನಗೆ ಗೋಲ್ಡ್ ಮೆಡಲ್ ಬಂದಿರುವುದಕ್ಕೆ ಖುಷಿಯಾಗಿದೆ. ಈಗ ಪಿಎಚ್‌ಡಿ ಮಾಡುತ್ತಿದ್ದು, ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಿದ್ದೇನೆ. ನನ್ನ ತಾಯಿ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ಸಾಧನೆಯ ಮೂಲಕ ಅವರ ಋಣ ತೀರಿಸಬೇಕಾಗಿದೆ.

ಸಿದ್ದಮ್ಮ ಚೋಟಪ್ಪನವರ ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿನಿ.ನಮ್ಮೂರಿನ ಹೆಮ್ಮೆ

ಸಿದ್ದಮ್ಮ ಗೋಲ್ಡ್ ಮೆಡೆಲ್‌ ಪಡೆದಿರುವುದು ನಮ್ಮೂರಿನ ಹೆಮ್ಮೆಯಾಗಿದ್ದು, ಇದರಿಂದ ನಮ್ಮೂರಿನ ಕೀರ್ತಿ ಹೆಚ್ಚಳವಾಗಿದೆ. ಕಡುಬಡತನದಲ್ಲಿ ಸಿದ್ದಮ್ಮ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

ಸಿದ್ದಪ್ಪ ಯಡ್ರಮ್ನಳ್ಳಿ ಹ್ಯಾಟಿ ಗ್ರಾಮ