ಸಾರಾಂಶ
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಮೂತ್ರ ಪಿಂಡ ವಿಭಾಗದ ಶಸ್ತ್ರಚಿಕಿತ್ಸಕ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಸಚಿನ್ ಮೀನಕೇರೆ ಅವರು ನವದೆಹಲಿಯ ವೈದ್ಯಕೀಯ ವಿಜ್ಞಾನ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಡಿಎನ್‌ಬಿ ಯೂರಾಲಜಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ೬೦೦ಕ್ಕೆ ೪೧೪ ಅಂಕ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಡಿಎನ್‌ಬಿ ಅಂತಿಮ ವರ್ಷದ ಪರೀಕ್ಷೇಲಿ ಹೆಚ್ಚು ಅಂಕ
ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಮೂತ್ರ ಪಿಂಡ ವಿಭಾಗದ ಶಸ್ತ್ರಚಿಕಿತ್ಸಕ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಸಚಿನ್ ಮೀನಕೇರೆ ಅವರು ನವದೆಹಲಿಯ ವೈದ್ಯಕೀಯ ವಿಜ್ಞಾನ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಡಿಎನ್‌ಬಿ ಯೂರಾಲಜಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ೬೦೦ಕ್ಕೆ ೪೧೪ ಅಂಕ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.ಆ ಮೂಲಕ ಡಾ.ಸಚಿನ್ ಅವರು ಹಿಮ್ಸ್‌ನ ಹಿರಿಮೆಯನ್ನು ರಾಷ್ಟ್ರ ಮಟ್ಟಕ್ಕೆ ಪ್ರಚುರಪಡಿಸಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಿನ್ನದ ಪದಕ ನೀಡಿ ಸನ್ಮಾನಿಸಿದ್ದಾರೆ. ಮೂಲತಃ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಕೋಟಗ್ಯಾಳ ಗ್ರಾಮದ ಡಾ.ಸಚಿನ್ ಹಿಮ್ಸ್‌ನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ.
ನಂತರ ವಿಜಯಪುರದ ಅಲ್-ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಎಂಎಸ್ ಜನರಲ್ ಸರ್ಜರಿ ಪೂರ್ಣಗೊಳಿಸಿದರು. ಬಳಿಕ ಹಾಸನದ ಹಿಮ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗು ಶಸ್ತ್ರಚಿಕಿತ್ಸಕರಾಗಿ ಸೇವೆ ಆರಂಭಿಸಿದರು. ಹಿರಿಯ ವೈದ್ಯರ ಮಾರ್ಗದರ್ಶನದಂತೆ ಮಂಗಳೂರಿನ ಕಸ್ತೂರಬಾಯಿ ಮೆಡಿಕಲ್ ಕಾಲೇಜಿನಲ್ಲಿ ಡಿಎನ್‌ಬಿ ಯೂರಾಲಜಿ ಸೀಟ್ ಪಡೆದು ಶ್ರಮವಹಿಸಿ ಓದಿದ ಪರಿಣಾಮವಾಗಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚಿನ ಅಂಕದೊಂದಿಗೆ ಚಿನ್ನದ ಪದಕ ಪಡೆದು ಹಿಮ್ಸ್‌ಗೆ ಕೀರ್ತಿ ತಂದಿದ್ದಾರೆ.ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯ ಡಾ.ಸಚಿನ್ ಸಾಧನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕೋಟಗ್ಯಾಳ ಗ್ರಾಮದ ಸಾಮಾನ್ಯ ರೈತ ಧನರಾಜ ಹಾಗೂ ಶಾರದಾ ದಂಪತಿಯ ಪುತ್ರ ಸಚಿನ್ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿದ್ದಾರೆ. ಬೀದರ್‌ನ ಆರ್‌ಆರ್‌ಕೆಎಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಹಾಸನದಲ್ಲಿ ಎಂಬಿಬಿಎಸ್ ಪದವಿ ಪಡೆದು ಇಲ್ಲಿಯೇ ಸೇವೆ ಆರಂಭಿಸಿ ಮತ್ತೊಂದು ಸಾಧನೆಯ ಶಿಖರ ಏರಿರುವುದು ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಸಾಧನೆಯ ಬಗ್ಗೆ ಮಾತನಾಡಿರುವ ಡಾ.ಸಚಿನ್, ಮೂಲಸೌಲಭ್ಯಗಳ ಕೊರತೆ ಮಧ್ಯೆಯೂ ನಿರ್ದಿಷ್ಟ ಗುರಿಯೊಂದಿಗೆ ಸತತ ಪರಿಶ್ರಮ ವಹಿಸಿ ಓದಿದ್ದು ಮತ್ತು ಗುರುಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.