ಸಾರಾಂಶ
200 ಕೋಟಿ ರುಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಂಗಳೂರು ಜಪ್ಪಿನಮೊಗರು ನಿವಾಸಿ ರೋಶನ್ ಸಲ್ಡಾನಾ (43) ಐಷಾರಾಮಿ ನಿವಾಸದಲ್ಲಿ ಕೋಟ್ಯಂತರ ರು. ಮೌಲ್ಯದ ಸೊತ್ತು, ಭಾರೀ ಪ್ರಮಾಣದ ದೇಶಿ-ವಿದೇಶಿ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು : ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 200 ಕೋಟಿ ರುಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಂಗಳೂರು ಜಪ್ಪಿನಮೊಗರು ನಿವಾಸಿ ರೋಶನ್ ಸಲ್ಡಾನಾ (43) ಐಷಾರಾಮಿ ನಿವಾಸದಲ್ಲಿ ಕೋಟ್ಯಂತರ ರು. ಮೌಲ್ಯದ ಸೊತ್ತು, ಭಾರೀ ಪ್ರಮಾಣದ ದೇಶಿ-ವಿದೇಶಿ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಉದ್ಯಮಿಗಳು ನೀಡಿದ ದೂರಿನ ಆಧಾರದಲ್ಲಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮನೆಯ ಅಡಗುದಾಣದಲ್ಲಿ ಆತನನ್ನು ಬಂಧಿಸಿದ್ದಾರೆ. ಈ ವೇಳೆ ಆತನ ಐಷಾರಾಮಿ ಜೀವನಶೈಲಿಯನ್ನು ನೋಡಿ ಪೊಲೀಸರೇ ಆಶ್ಚರ್ಯಚಕಿತರಾಗಿದ್ದಾರೆ. ಮನೆಯಲ್ಲೇ ಬಾರ್ ಮಾಡಿಕೊಂಡು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹6.72 ಲಕ್ಷ ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ, 667 ಗ್ರಾಂ ಚಿನ್ನಾಭರಣ, ಅಂದಾಜು ₹2.75 ಕೋಟಿ ಮೌಲ್ಯದ ವಜ್ರದ ಉಂಗುರವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಮನೆಯಲ್ಲಿ ಇದೆ 7 ಸ್ಟಾರ್‌ಬಾರ್, ಚಿನ್ನ ಲೇಪನದ ಸೋಫಾ:ಜಪ್ಪಿನಮೊಗರಿನಲ್ಲಿರುವ ಬೃಹತ್ ಮನೆಯನ್ನೇ ಅಡಗುದಾಣ ಮಾಡಿಕೊಂಡು ಇಲ್ಲಿಂದಲೇ ಬಹುತೇಕ ವ್ಯವಹಾರ ಕುದುರಿಸುತ್ತಿದ್ದ. ಈತನ ಮನೆಯಲ್ಲಿರುವ ಅಡಗುದಾಣ ಪತ್ತೆ ಹಚ್ಚಲು ಪೊಲೀಸರು ಹರಸಾಹಸಪಟ್ಟು, ಬಾಗಿಲುಗಳನ್ನು ಒಡೆದು ಒಳಪ್ರವೇಶಿಸಬೇಕಾಯಿತು.ಮನೆಯ ಬೆಡ್‌ರೂಮ್‌ನಿಂದ ಅಡಗುದಾಣಕ್ಕೆ ಸಾಗಲು ವಾರ್ಡ್‌ರೋಬ್‌ನಂತೆ ಕಾಣುವ ಬಾಗಿಲುಗಳನ್ನು ಮಾಡಿಕೊಂಡಿದ್ದ. ಅಲ್ಲಿಂದ ಮೆಟ್ಟಿಲುಗಳನ್ನು ಅಳವಡಿಸಿ ಬಚ್ಚಿಟ್ಟುಕೊಳ್ಳಲು ಇನ್ನೊಂದು ರಹಸ್ಯ ಜಾಗ ಮಾಡಿಕೊಂಡಿದ್ದ.
ಮನೆ ಸುತ್ತಲೂ, ಮನೆಯೊಳಗೂ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳಿವೆ. ಮನೆಗೆ ಪೊಲೀಸರು ಅಥವಾ ವಂಚನೆಗೆ ಒಳಗಾದ ಉದ್ಯಮಿಗಳು ಬರುವುದನ್ನು ಸಿಸಿಟಿವಿಯಲ್ಲೇ ವೀಕ್ಷಿಸಿ ಅಡಗುದಾಣಕ್ಕೆ ಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದ. ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿದಾಗ ಈತ ಮಲೇಷ್ಯಾ ಯುವತಿಯ ಜತೆ ಇದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಮನೆಯಲ್ಲೇ 7 ಸ್ಟಾರ್ ಮಾದರಿಯ ಬಾರ್ ಮಾಡಿಕೊಂಡಿದ್ದು, ಅಲ್ಲಿ ದೇಶಿ-ವಿದೇಶಿ ಹೈಲೆವೆಲ್ ಬ್ರ್ಯಾಂಡ್‌ಗಳ ಮದ್ಯ ಇಟ್ಟುಕೊಂಡಿದ್ದ. ಬಾರ್ ಪಕ್ಕದಲ್ಲೇ ಬೆಡ್ ರೂಂ ಇತ್ತು. ಅಲ್ಲಿನ ಮೇಜು, ಕುರ್ಚಿ, ಸೋಫಾಗಳಿಗೆ ಚಿನ್ನ ಲೇಪಿತ ಹಿಡಿಕೆ ಮಾಡಿಸಲಾಗಿತ್ತು. ಇಲ್ಲಿ ಐಷಾರಾಮಿ ವಸ್ತುಗಳನ್ನು ಇಟ್ಟುಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ
₹200 ಕೋಟಿಗೂ ಅಧಿಕ ವಂಚನೆ?ರೋಶನ್ ಸಲ್ಡಾನಾ ವಿರುದ್ಧ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿವೆ. ಹಣದ ಅವಶ್ಯಕತೆ ಇರುವ ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು.ನಗದು ಹಣವನ್ನು ಅವರಿಂದ ಪಡೆದುಕೊಳ್ಳುತ್ತಿದ್ದ. ಹಣ ಕೈಸೇರಿದ ಬಳಿಕ ಸಾಲ ನೀಡದೆ ವಂಚಿಸುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಕಳೆದ 3 ತಿಂಗಳಲ್ಲಿ ಈತ ಇತರರೊಂದಿಗೆ ಸೇರಿಕೊಂಡು ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೊಲ್ಕತಾ, ಸಾಂಗ್ಲಿ, ಲಖನೌ, ಬಾಗಲಕೋಟೆ ಮತ್ತಿತರ ಕಡೆಯ ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ₹32 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವುದು ಬಯಲಿಗೆ ಬಂದಿದೆ.
ಕೇವಲ ಮೂರೇ ತಿಂಗಳಲ್ಲಿ ₹32 ಕೋಟಿ ಪಡೆದು ವಂಚಿಸಿದ್ದಾನೆ. ಈವರೆಗೆ ₹200 ಕೋಟಿಗೂ ಅಧಿಕ ಹಣ ವಂಚಿಸಿರುವುದು ಪತ್ತೆಯಾಗಿದೆ ಎಂದವರು ಹೇಳಿದರು.ಮೂಲತಃ ಬಜಾಲ್ ಬೊಲ್ಲಗುಡ್ಡ ನಿವಾಸಿಯಾಗಿರುವ ರೋಶನ್ ಸಲ್ಡಾನಾ, ಇಲ್ಲಿಂದ ಮುಂಬೈಗೆ ತೆರಳಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. 8-10 ವರ್ಷಗಳ ಹಿಂದೆ ಹಣದಾಸೆಗೆ ಬಿದ್ದು ವಂಚನೆಯ ಕೆಲಸಕ್ಕೆ ಕೈಹಾಕಿದ್ದ. ಕ್ರಮೇಣ ವಂಚನೆ ಜಾಲವನ್ನು ವಿಸ್ತರಿಸಿಕೊಂಡು ರಾಜ್ಯ, ಹೊರರಾಜ್ಯ ಉದ್ಯಮಿಗಳ ಸಂಪರ್ಕ ಸಾಧಿಸಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ರಾಜ್ಯದ ಕೆಲವೆಡೆ ಈತ ಫೈನಾನ್ಸ್ ಕಚೇರಿಗಳನ್ನು ಹೊಂದಿರುವುದು ತಿಳಿದು ಬಂದಿದೆ.
ಯಾರು ಈ ಆಸಾಮಿ?
- ಮಂಗಳೂರಿನ ಬಜಾಲ್ ಬೊಲ್ಲಗುಡ್ಡ ನಿವಾಸಿಯಾಗಿರುವ ರೋಶನ್ ಸಲ್ಡಾನಾ
- ಮುಂಬೈನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. 8-10 ವರ್ಷದಿಂದ ವಂಚನೆ ದಂಧೆ- ಸಾಲ ಕೊಡಿಸುವುದಾಗಿ ಉದ್ಯಮಿಗಳ ಸಂಪರ್ಕ ಸಾಧಿಸುತ್ತಿದ್ದ. ಹಣ ಪಡೆಯುತ್ತಿದ್ದ
- ಆಮೇಲೆ ಕೈಕೊಡುತ್ತಿದ್ದ. ದೇಶಾದ್ಯಂತ ಈವರೆಗೆ ₹200 ಕೋಟಿ ವಂಚನೆ ಅಂದಾಜು