10, 11ರಂದು ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ

| Published : Feb 08 2024, 01:33 AM IST

ಸಾರಾಂಶ

ರಾಮನಗರ: ನಗರದ ಜಾನಪದ ಲೋಕದಲ್ಲಿ ಫೆ.10 ಮತ್ತು 11ರಂದು ಸುರ್ವಣ ಕರ್ನಾಟಕ ಜಾನಪದ ಲೋಕೋತ್ಸವ - 2024 ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ರಾಮನಗರ: ನಗರದ ಜಾನಪದ ಲೋಕದಲ್ಲಿ ಫೆ.10 ಮತ್ತು 11ರಂದು ಸುರ್ವಣ ಕರ್ನಾಟಕ ಜಾನಪದ ಲೋಕೋತ್ಸವ - 2024 ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಜಾನಪದ ಪರಿಷತ್ತು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಲೋಕೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.

ಈ ಎರಡು ದಿನಗಳ ಕಾಲ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ವೈದವಿಧ್ಯಮಯ ಜಾನಪದ ಗೀತಗಾಯ, ನೃತ್ಯ ಪ್ರದರ್ಶನ, ಕಲಾವಿದರಿಗೆ ಪ್ರಶಸ್ತಿ, ಕರಕುಶಲ ಮತ್ತು ದೇಶಿ ಮೇಳದ ಪ್ರಾತ್ಯಕ್ಷಿಕೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸಾರ್ವಜನಿಕರಿಗೆ ಜಾನಪದ ಲೋಕಕ್ಕೆ ಉಚಿತ ಪ್ರವೇಶ ಇರಲಿದೆ ಎಂದು ಹೇಳಿದರು.

ಫೆ.10ರಂದು ಬೆಳಿಗ್ಗೆ 10.30ಕ್ಕೆ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡರವರ ಅಧ್ಯಕ್ಷತೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲಮೂರ್ತಿ ಲೋಕೋತ್ಸವಕ್ಕೆ ಚಾಲನೆ ನೀಡಲಿದ್ದು, ಪದ್ಮಶ್ರೀ ಪುರಸ್ಕೃತರಾದ ಬುಡಕಟ್ಟು ಸಮುದಾಯದ ಚಿಂತಕ ಸೋಮಣ್ಣ ಕರಕುಶಲು ಮೇಳ ಉದ್ಘಾಟಿಸುವರು. ಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಕೆ.ಧರಣಿದೇವಿ, ಜಿಲ್ಲಾಧಿಕಾರಿ ಅವಿನಾಶ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ದಿಗ್ವಜಯ್ ಬೋಡ್ಕೆ ಮತ್ತಿತರರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಜಾನಪದ ಕಲೆಗಳ ಯುವಜನೋತ್ಸವ ರಾಜ್ಯ ಮಟ್ಟದ ಸ್ಪರ್ಧೆಗೆ ಪರಿಷತ್ತಿನ ನಿಕಟ ಪೂರ್ವ ಟಿ.ತಿಮ್ಮೇಗೌಡ ಚಾಲನೆ ನೀಡಲಿದ್ದು, ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅಧ್ಯಕ್ಷತೆ ವಹಿಸುವರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ - 7500 ರು., ತೃತೀಯ -5 ಸಾವಿರ ಹಾಗೂ 2 ಸಮಾಧಾನಕರ ಬಹುಮಾನ ತಲಾ 2 ಸಾವಿರ ರು.ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಕಲಾ ಪ್ರದರ್ಶನ :

ಅಂದು ಸಂಜೆ 5.30ಗಂಟೆಗೆ ಬಯಲು ರಂಗಮಂದಿರದಲ್ಲಿ ಕಲಾ ಪ್ರದರ್ಶನದಲ್ಲಿ ಅಂತರರಾಷ್ಟ್ರೀಯ ಜಾನಪದ ಗಾಕಿ ಸವಿತಾ ಗಣೇಶ್ ಪ್ರಸಾದ್ ಜನಪದ ಗೀತ ವೈವಿದ್ಯ, ರಾಮನಗರ ಜಿಲ್ಲೆಯ ಹನುಮಂತನಾಯ್ಕ ಮತ್ತು ತಂಡ ಪೂಜಾ ಕುಣಿತ, ಲೋಕೇಶ್ - ಗೋವಿಂದಪ್ಪ ಮತ್ತು ತಂಡ ತಮಟೆ ಜುಗಲ್ ಬಂದಿ, ಮಂಡ್ಯ ಜಿಲ್ಲೆಯ ಸುಧಾಕರ್ ಮತ್ತು ತಂಡ ಹುಲಿ ವೇಷ, ಹಾಸನ ಜಿಲ್ಲೆಯ ಯಶಸ್ವಿನಿ ಮತ್ತು ತಂಡ ಜಡೆ ಕೋಲಾಟ, ದಾವಣಗೆರೆ ಜಿಲ್ಲೆಯ ಗೀತಾಬಾಯಿ ಮತ್ತು ತಂಡ ಲಂಬಾಣಿ ನೃತ್ಯ, ಮೈಸೂರು ಜಿಲ್ಲೆಯ ಮಲ್ಲೇಶ್ ಮತ್ತು ತಂಡ ವೀರಭದ್ರನ ಕುಣಿತ ಹಾಗೂ ನಾಡೋಜ ಎಚ್ .ಎಲ್ .ನಾಗೇಗೌಡ ಕಲಾ ಶಾಲೆ ವಿದ್ಯಾರ್ಥಿಗಳು ಪಟ ಕುಣಿತ ಪ್ರದರ್ಶಿಸಲಿದ್ದಾರೆ.

ಫೆ.11ರಂದು ಬೆಳಿಗ್ಗೆ 10ಕ್ಕೆ ಕನ್ನಡ ಜಾನಪದ - ಪುನರಾವಲೋಕನ ವಿಚಾರ ಕುರಿತ ಸಂವಾದ ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಜಾನಪದ ಸಂಶೋಧಕಿ ಡಾ.ಗಾಯತ್ರಿ ನಾವಡರವರುಜಾನಪದ ಸಾಹಿತ್ಯ - ಪುನರಾವಲೋಕನ, ಜಾನಪದ ದಾಖಲೀಕರಣ ತಜ್ಞರಾದ ಡಾ.ಸಿರಿಗಂಧ ಶ್ರೀನಿವಾಸಮೂರ್ತಿರವರು ಜಾನಪದ ಪ್ರದರ್ಶನ ಕಲೆ - ಪುನರಾವಲೋಕನ ಕುರಿತು ವಿಷಯ ಮಂಡಿಸುವರು. ಇದರಲ್ಲಿ 62 ಮಂದಿ ಅತಿಥಿ ಸಂವಾದಕರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಬೋರಲಿಂಗಯ್ಯ ತಿಳಿಸಿದರು.

ಮಧ್ಯಾಹ್ನ 2.30ಕ್ಕೆ ಆಹ್ವಾನಿತ ಗ್ರಾಮೀಣ ಗಾಯಕರಿಂದ ಸೋಬಾನೆ ಪದ ಹಾಡಲಿದ್ದು, ಈ ವೇಳೆ ಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ನಾಡೋಜ ಎಚ್ .ಎಲ್ .ನಾಗೇಗೌಡ ಜಾನಪದ ಸಂಶೋಧನಾ ಕೇಂದ್ರ ಉದ್ಘಾಟಿಸುವುದರ ಜೊತೆಗೆ ಸಂಶೋಧನಾ ಫಲಿತಗಳನ್ನು ಬಿಡುಗಡೆ ಮಾಡಲಿದ್ದಾರೆ.

ಸಂಜೆ 5.30ಕ್ಕೆ ಚುಂಚನಗಿರಿ ಶ್ರೀಗಳ ಸಾನಿಧ್ಯ ವಹಿಸುವ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ಡಾ.ಸಂತೋಷ ಹೆಗ್ಗಡೆ ಮತ್ತು ಸಂಗೀತ ನಿರ್ದೇಶಕ ಡಾ.ಹಂಸಲೇಖರವರು ಜೀವನಮಾನ ಸಾಧನೆಗಾಗಿ 19 ಜನ ವಿದ್ವಾಂಸರು ಮತ್ತು ಕಲಾವಿದರಿಗೆ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 7 ಗಂಟೆಗೆ ಕೋಲಾರದ ವೈ.ಜಿ.ಉಮಾ ಮತ್ತು ತಂಡ ಜನಪದ ಗೀತ ವೈವಿಧ್ಯ, ಶಿವಮೊಗ್ಗ ಜಿಲ್ಲೆಯ ಗುಡ್ಡಪ್ಪ ಜೋಗಿ ಮತ್ತು ತಂಡ ಕಿನ್ನರಿ ಜೋಗಿ ಪದಗಳು, ರಾಮನಗರ ಜಿಲ್ಲೆಯ ಶಿವಪ್ಪ ಮತ್ತು ತಂಡ ಏಕತಾರಿ ಪದಗಳು, ಧಾರವಾಡ ಜಿಲ್ಲೆಯ ಲಕ್ಷ್ಮಿ ಬಾಯಿ ಹರಿಜನ ಮತ್ತು ತಂಡ ಗೀಗಿ ಪದ, ಬೀದರ್ ಜಿಲ್ಲೆಯ ನಾಗಮ್ಮ ಮರಖಲ ಮತ್ತು ತಂಡ ಬುಲಾಯಿ ಪದಗಳು, ಶಿವಮೊಗ್ಗ ಜಿಲ್ಲೆಯ ಬೆಳಿಯಪ್ಪ ಮತ್ತು ತಂಡ ಡೊಳ್ಳು ಕುಣಿತ, ಹಾಸನ ಜಿಲ್ಲೆಯ ದ್ಯಾವೇಗೌಡ ಮತ್ತು ತಂಡ ಸೋಮನ ಕುಣಿತ, ಚಾಮರಾಜನಗರ ಜಿಲ್ಲೆಯ ಮಹದೇವೇಗೌಡ ಮತ್ತು ತಂಡ ಗೊರವರ ಕುಣಿತ, ಕುಮಾರ್ ನಾಯ್ಕ ಮತ್ತು ತಂಡ ಕಂಸಾಳೆ, ಮಳವಳ್ಳಿ ಎಂ.ನಾಗೇಂದ್ರ ತಂಬೂರಿ ಪದ ಹಾಡಲಿದ್ದಾರೆ ಎಂದು ಬೋರಲಿಂಗಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ, ಜಾನಪದ ಲೋಕ ಆಡಳಿತಾಧಿಕಾರಿ ಯು.ಎಂ.ರವಿ ಇತರರಿದ್ದರು.

ಬಾಕ್ಸ್‌........

ಪ್ರಶಸ್ತಿ ಪುರಸ್ಕೃತರು :

ಮೈಸೂರು ಜಿಲ್ಲೆ ಜಾನಪದ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರರವರು ನಾಡೋಜ ಎಚ್ .ಎಲ್ .ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ, ಜಾನಪದ ವಿದ್ವಾಂಸ ಡಾ.ಕಾಳೇಗೌಡ ನಾಗವಾರ ಅವರು ಡಾ.ಜೀ.ಶಂ.ಪರಮಶಿವಯ್ಯ ಜಾನಪದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರು ಜಿಲ್ಲೆ ಸಹಜ ಸಮೃದ್ಧ ಸಾವಯವ ಮತ್ತು ಕೃಷಿ ಬಳಗ ನಾಡೋಜ ಡಾ.ಜಿ.ನಾರಾಯಣ ಜಾನಪದ ಲೋಕ ಪ್ರಶಸ್ತಿ, ಯಾದಗಿರಿ ಜಿಲ್ಲೆಯ ಕೌದಿ ಕಲಾವಿದೆ ಭಾಗೀರತಿ ಸಂಗಣ್ಣ ಮಲಗೊಂಡರವರು ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ, ರಾಮನಗರ ಜಿಲ್ಲೆಯ ಪೂಜಾ ಕುಣಿತ ಕಲಾವಿದ ಜಯರಾಮಯ್ಯ, ಏಕತಾರಿ ಕಲಾವಿದ ಶಿವಪ್ಪ ಅವರಿಗೆ ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.

ಬಾಕ್ಸ್‌............ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರು:

ಧಾರವಾಡ ಜಿಲ್ಲೆಯ ಡೊಳ್ಳಿನ ಪದ ಕಲಾವಿದ ಇಮಾಮ್ ಸಾಬ್ ಮಾಮು ಸಾಬ್‌ ಮಲ್ಲೇಪ್ಪನವರ್ , ದಕ್ಷಿಣ ಕನ್ನಡ ಜಿಲ್ಲೆಯ ದೈವ ನರ್ತನ ಕಲಾವಿದ ಶೇಖರ ಪಂಬದ, ಯಕ್ಷಗಾನ ಮದ್ದಲೆ ಕಲಾವಿದ ಬನ್ನಂಜೆ ನಾರಾಯಣ, ಹಾಸನ ಜಿಲ್ಲೆಯ ಸೋಮನ ಕುಣಿತ ಕಲಾವಿದ ಎನ್.ಎಂ.ದ್ಯಾವೇಗೌಡ, ಶಿವಮೊಗ್ಗ ಜಿಲ್ಲೆಯ ಡೊಳ್ಳು ಕಲಾವಿದ ಬೆಳಿಯಪ್ಪ, ಚಿತ್ರದುರ್ಗ ಜಿಲ್ಲೆಯ ಸಹಾಸ ಕಲಾವಿದ ಜ್ಯೋತಿ ರಾಜು(ಕೋತಿರಾಜ್), ಮಂಡ್ಯ ಜಿಲ್ಲೆಯ ಜಾನಪದ ಗಾಯಕ ಮೈಸೂರು ಮಹಾದೇವಪ್ಪ, ಕೊಪ್ಪಳ ಜಿಲ್ಲೆಯ ಸೋಬಾನೆ ಪದ ಕಲಾವಿದ ಮಹೇಶಪ್ಪ ಚನ್ನಪ್ಪ ಕಂಬಳಿ, ಚಾಮರಾಜನಗರ ಜಿಲ್ಲೆಯ ಗೊರವ ಕುಣಿತ ಕಲಾವಿದ ಎನ್.ಎಂ.ಮಹದೇವೇಗೌಡ, ಧಾರವಾಡ ಜಿಲ್ಲೆಯ ಗೀಗೀ ಪದ ಕಲಾವಿದ ಲಕ್ಷ್ಮಿ ಬಾಯಿ ಹರಿಜನ, ಬೀದರ್ ಜಿಲ್ಲೆಯ ಬುಲಾಯಿ ಹಾಡು ಕಲಾವಿದ ನಾಗಮ್ಮ ಮರಖಲ, ತುಮಕೂರು ಜಿಲ್ಲೆಯ ಮೂಡಲಪಾಯ ಯಕ್ಷಗಾನ ಭಾಗವತ ಎ.ಎಂ.ಶಿವಶಂಕರಯ್ಯರವರು ಜಾನಪದ ಲೋಕ ಪ್ರಶಸ್ತಿಗೆ ಪಾತ್ರರಾದರೆ, ಬಾಗಲಕೋಟೆ ಜಿಲ್ಲೆ ಲೇಖಕ ಪಿ.ಡಿ.ವಾಲೀಕಾರ ಅವರ ಜನಪದ ಕೆರೆಗಳ ಸಂಸ್ಕೃತಿ ಕೃತಿಗೆ ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ ದೊರಕಿದೆ.(ಮೊದಲ ಫೋಟೊ ಮೈನ್‌ ಸುದ್ದಿಗೆ, ಉಳಿದದ್ದು ಆಯಾ ಫೋಟೋ ಆಯಾ ಬಾಕ್ಸ್‌ಗಳಿಗೆ)

7ಕೆಆರ್ ಎಂಎನ್ 1,2,3,4,5,6.ಜೆಪಿಜಿ

1.ರಾಮನಗರದಲ್ಲಿ ಬುಧವಾರ ಕರ್ನಾಟಕ ಜಾನಪದ ಪರಿಷತ್ತು ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

2.ಜಾನಪದ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರ

3.ಜಾನಪದ ವಿದ್ವಾಂಸ ಡಾ.ಕಾಳೇಗೌಡ ನಾಗವಾರ

4.ಕೌದಿ ಕಲಾವಿದೆ ಭಾಗೀರತಿ ಸಂಗಣ್ಣ ಮಲಗೊಂಡ

5.ಗೀಗೀ ಪದ ಕಲಾವಿದ ಲಕ್ಷ್ಮಿ ಬಾಯಿ ಹರಿಜನ

6.ಸೋಬಾನೆ ಪದ ಕಲಾವಿದ ಮಹೇಶಪ್ಪ ಚನ್ನಪ್ಪ ಕಂಬಳಿ