ಸಾರಾಂಶ
ಹಾವೇರಿ: ತಾಲೂಕು ಸುವರ್ಣಕಾರರ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘದ 159 ಸದಸ್ಯರಿಗೆ ಹಂಚಿಕೆಯಾಗಿರುವ ನಿವೇಶನಗಳ ದಾಖಲಾತಿಗಳನ್ನು ನಗರಸಭೆಯವರು ಪರಿಶೀಲಿಸಿ ಹೈಕೋರ್ಟ್ ಆದೇಶದಂತೆ ಆದಷ್ಟು ಬೇಗ ಇ ಸ್ವತ್ತು ಮಾಡಿಕೊಡಬೇಕು ಎಂದು ಸಂಘದ ಅಧ್ಯಕ್ಷ ಮಂಜುನಾಥ ಪುತಳೇಕರ ಮನವಿ ಮಾಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘವು 1964ರಲ್ಲಿ ನೋಂದಣಿಯಾಗಿದ್ದು, ಸಂಘದ ಸದಸ್ಯರಿಗೆ ನಿವೇಶನ ನೀಡುವ ಸಲುವಾಗಿ ಇಜಾರಿಲಕ್ಮಾಪುರದ ಸರ್ವೇ ನಂಬರ್ 29 ಬ ಮತ್ತು 30ರಲ್ಲಿ 19 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿತ್ತು. 1980ರಲ್ಲಿ ಸಹಾಯಕ ಆಯುಕ್ತರು ಈ ಜಮೀನನ್ನು ಅವಾರ್ಡ್ ಮಾಡಿದ್ದಾರೆ.1968ರಿಂದ ನಂತರದ 16 ವರ್ಷಗಳ ಕಾಲ ನಿವೇಶನ ಅಭಿವೃದ್ಧಿ, ಕೆಜೆಪಿ, ನಿವೇಶನ ನೋಂದು ಮಾಡುವುದು ಆಗಿರಲಿಲ್ಲ. 1985ರಲ್ಲಿ ಸಂಘದ ಹೆಸರಿಗೆ ಜಮೀನನ್ನು ಗ್ರಾಮ ಪಂಚಾಯಿತಿಯಿಂದ ಹಸ್ತಾಂತರಿಸಿಕೊಂಡು ಅದೇ ವರ್ಷ ಪ್ಲಾಟ್‌ವಾರು ಕೆಜೆಪಿ ಮಾಡಿಸಲು 166 ಪ್ಲಾಟ್‌ಗಳನ್ನು ಮಾಡಲಾಯಿತು. ಆದರೆ, ಸಹಕಾರಿ ಸಂಘಗಳ ನ್ಯಾಯಾಲಯದ ಆದೇಶದಲ್ಲಿ ಕೇವಲ 62 ಜನರು ಮಾತ್ರ ನಿವೇಶನ ಹೊಂದಲು ಅರ್ಹರು ಎಂಬ ನಿರ್ಣಯವಾಯಿತು. ನಂತರ ಅದರ ವಿರುದ್ಧ ಮೇಲ್ಮನವಿ ಹೋದಾಗ ಮುಂದೆ ಬಂದಂತಹ ಸದಸ್ಯರಿಗೂ ನಿವೇಶನ ನೀಡಲು ಆದೇಶವಾಯಿತು. ಅದರ ಪ್ರಕಾರ 159 ಪ್ಲಾಟುಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸದಸ್ಯರಿಗೆ ನೋಂದು ಮಾಡಿಕೊಡಲಾಗಿದೆ. ಇನ್ನುಳಿದ 7 ಪ್ಲಾಟುಗಳು ಸಂಘದ ಹೆಸರಿನಲ್ಲಿದೆ.
ಈಗ ಹೈಕೋರ್ಟ್ ಆದೇಶ ನಮ್ಮ ಪರವಾಗಿದೆ. 159 ಖರೀದಿದಾರ ಸದಸ್ಯರ ದಾಖಲಾತಿಗಳನ್ನು ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ತಕ್ಷಣ ಪರಿಶೀಲಿಸಿ ಸೂಕ್ತ ಅನುಮೋದನೆಯನ್ನು ನಿವೇಶನ ಖರೀದಿದಾರರಿಗೆ ಇ ಸ್ವತ್ತು ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ನಿವೇಶನ ಖರೀದಿಸಿರುವ ಸದಸ್ಯರು ಈ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಸಂಘಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ವೆಂಟಕೇಶ ಪುತಳೇಕರ, ಮೋಹನ ರಾಯ್ಕರ್, ವಿರುಪಾಕ್ಷ ಹಾವನೂರ, ಉದಯ ಕುರ್ಡೇಕರ, ಆರ್.ಟಿ. ಸಾನು, ಸಚಿನ್ ಮಡ್ಡಿ, ಆನಂದ ಪತ್ತಾರ, ಮಾನಪ್ಪ ಪತ್ತಾರ, ನಾಗೇಶ ವೆರ್ಣೇಕರ ಇತರರು ಇದ್ದರು.