ಸಾರಾಂಶ
ಇಂದು ಇತಿಹಾಸ ಪ್ರಸಿದ್ಧ, ವಿಶಿಷ್ಟ ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ
ಬಿ.ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ 16ನೇ ಶತಮಾನದಲ್ಲಿ ಪಂಚಗಣಾಧೀಶರೆಂದು ಖ್ಯಾತರಾಗಿದ್ದವರು ಕೊಟ್ಟೂರು ಗುರುಬಸವೇಶ್ವರರು, ನಾಯಕನಹಟ್ಟಿ ತಿಪ್ಪೇರುದ್ರೇಶ್ವರರು, ಕೂಲಹಳ್ಳಿ ಮದ್ದಾನೇಶ್ವರರು, ಹರಪನಹಳ್ಳಿ ಕೆಂಪೇಶ್ವರರು ಹಾಗೂ ಅರಸೀಕೆರೆ ಕೋಲಶಾಂತೇಶ್ವರರು.
ಇವರಲ್ಲಿ ಒಬ್ಬರಾದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಮದ್ದಾನೇಶ್ವರರ ಪುತ್ರ ಪವಾಡ ಪುರುಷ ಗೋಣಿಬಸವೇಶ್ವರರು. ಮದ್ದಾನೇಶ್ವರರು ನೆಲೆಸಿದ ಕರ್ಮ ಭೂಮಿಯಾಯಿತು. ತಾಯಿ ಕನಕಮ್ಮ, ಪತ್ನಿ ವಡ್ಡಟ್ಟಮ್ಮ ಎಂದು ಇತಿಹಾಸ ತಿಳಿಸುತ್ತದೆ.ಗೋಣಿ ಬಸವೇಶ್ವವರು 16ನೇ ಶತಮಾನದಲ್ಲಿ ನಾಡಿನಾದ್ಯಂತ ಸಂಚಾರ ಮಾಡಿ ಅನ್ಯಾಯ, ಅತ್ಯಾಚಾರ, ಅಧರ್ಮ ಮೌಡ್ಯತನ ಇವುಗಳನ್ನು ತನ್ನ ಪವಾಡಗಳ ಮೂಲಕ ಹೋಗಲಾಡಿಸಿದ್ದಕ್ಕೆ ವಿವಿಧೆಡೆ 777 ಮಠಗಳು ಸ್ಥಾಪನೆಯಾಗಿವೆ. ಅದರಲ್ಲಿ 145 ಮಠಗಳು ಗುರುತಿಸಲಾಗಿದ್ದು, ಉಳಿದವುಗಳ ಬಗ್ಗೆ ಸಂಶೋಧನಾ ಕಾರ್ಯ ನಡೆದಿದೆ. ಗೋಣಿಬಸವೇಶ್ವರರಿಗೆ 72 ಬಿರುದಾವಳಿಗಳು ಇವೆ.
ಜಾತ್ರೆಯ ವೈಶಿಷ್ಟ್ಯ:ಮೈಲಾರ ಜಾತ್ರೆಗೆ ಹೋಗುವ ಪರ್ಸಿಯನ್ನು ನೋಡಿ ಬಸವೇಶ್ವರರ ರಥದ ಕಣಗದ ಪೂಜೆ ಆರಂಭಿಸುವರು. ಮೈಲಾರದಿಂದ ಬರುವ ಪರ್ಸಿಯನ್ನು ನೋಡಿ ಗೋಣಿಬಸವೇಶ್ವರರ ರಥದ ನಾಲ್ಕು ಗಾಲಿಗೆ ನೀರು ಹಾಕಿ ಪೂಜಿಸುವುದರೊಂದಿಗೆ ಕೂಲಹಳ್ಳಿ ಗೋಣಿಬಸಪ್ಪನ ಜಾತ್ರೆ, ಪೂಜೆ ಪುನಸ್ಕಾರ ಆರಂಭವಾಗುತ್ತವೆ.
ರಥ ಏರುವ ಕೊಟ್ಟೂರೇಶ:ನಾಡಿನಾದ್ಯಂತಹ ವಿವಿಧ ದೇವರುಗಳ ರಥೋತ್ಸವ ನಡೆಯುವುದು ಸಾಮಾನ್ಯ. ಆ ರೀತಿ ನಡೆಯುವ ರಥೋತ್ಸವಗಳಲ್ಲಿ ಆ ಸ್ಥಳದ ದೇವರ ಉತ್ಸವ ಮೂರ್ತಿ ರಥ ಏರುವುದು ಸಹಜ, ಆದರೆ ಈ ಕೂಲಹಳ್ಳಿಯ ಪವಾಡ ಪುರುಷ ಗೋಣಿಬಸವೇಶ್ವರ ರಥೋತ್ಸವದಲ್ಲಿ ರಥ ಏರುವುದು ಕೊಟ್ಟೂರು ಗುರುಬಸವೇಶ್ವರರು. ಇದು ಇಲ್ಲಿಯ ವೈಶಿಷ್ಟ್ಯ.
ಹೆಸರು ಗೋಣಿಬಸಪ್ಪನ ಜಾತ್ರೆ, ಗೋಣಿ ಬಸವೇಶ್ವರರ ತೇರು ಎಂದು ಭಕ್ತರು ಕರೆಯುತ್ತಾರೆ, ಆದರೆ ತೇರು ಏರುವುದು ಕೊಟ್ಟೂರು ಗುರುಬಸವೇಶ್ವರ ಉತ್ಸವ ಮೂರ್ತಿ.ಕೂಲಹಳ್ಳಿ ಗ್ರಾಮದಲ್ಲಿ ರಥೋತ್ಸವ ಮಾಡಬೇಕೆಂದು ತನ್ನ ದೊಡ್ಡಪ್ಪ ಕೊಟ್ಟೂರು ಗುರುಬಸವೇಶ್ವರ ಅಪ್ಪಣೆ ಪಡೆದು ಪಂಚಗಣಾಧೀಶರಲ್ಲಿ ಹಿರಿಯರಾದ ನೀವೆ ನಮ್ಮ ರಥವನ್ನು ಏರಬೇಕು, ನೀವಿಲ್ಲದೆ ರಥದ ಕಾರ್ಯ ನಡೆಯುವುದಿಲ್ಲ ಎಂದು ಗೋಣಿಬಸವೇಶ್ವರರು ವಿನಂತಿಸಿದಾಗ ಕೊಟ್ಟೂರು ಗುರುಬಸವೇಶ್ವರರು ಒಪ್ಪಿ ಪ್ರತಿ ವರ್ಷ ರಥ ಏರುತ್ತಾರೆ ಎಂದು ಗೋಣಿಬಸವೇಶ್ವರ ಮಠದ ಪಟ್ಟದ ಚಿನ್ಮಯ ಸ್ವಾಮಿಗಳು ತಿಳಿಸುತ್ತಾರೆ.
ಗೋಣಿಬಸವೇಶ್ವರರನ್ನು ಜರಿದು ತೊಂದರೆ ಕೊಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ವಿವಿಧ ಸಮುದಾಯದವರು ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ವಿವಿಧ ರೀತಿಯ ಸೇವೆಯನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ.ಹರಪನಹಳ್ಳಿ ಉಪ್ಪಾರ ಸಮುದಾಯದವರು ಪ್ರತಿ ವರ್ಷ ಮನೆಗೊಬ್ಬರಂತೆ ಬಂದು ಗೋಣಿಬಸವೇಶ್ವರರ ದೇವಸ್ಥಾನಕ್ಕೆ ಸುಣ್ಣ ಬಳಿಯುತ್ತಾರೆ, ಒಬಳಾಪುರ ಗ್ರಾಮಸ್ಥರು ರಥಕ್ಕೆ ಹಗ್ಗ ನೀಡುತ್ತಾರೆ. ಹುಲಿಯ ಬೇಸಾಯ ಸೇರಿದಂತೆ ಗೋಣಿಬಸಪ್ಪ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಪವಾಡಗಳನ್ನು ಮಾಡಿ ಕೂಲಹಳ್ಳಿಯಲ್ಲಿ ಜೀವ ಸಮಾದಿ ಆಗುತ್ತಾನೆ. ಹೀಗೆ ನಾಡಿನ ಜನರ ಆರಾಧ್ಯ ದೈವನಾಗಿ ಬೆಳೆದು ಅನೇಕರ ಮನೆದೇವರಾಗಿ ಪೂಜಿಸಲ್ಪಡುತ್ತಾನೆ.
ಶಿವರಾತ್ರಿ ಅಮವಾಸ್ಯೆ ಆದ ಮೂರು ದಿನಕ್ಕೆ ಗೋಣಿಬಸವೇಶ್ವರರಿಗೆ ಕಂಕಣ ಕಟ್ಟಿ ಅಲ್ಲಿಂದ ತೇರಿನವರೆಗೆ ಪ್ರತಿ ದಿನ ಮೂರು ಬಾರಿ ಗೋಣಿಬಸವೇಶ್ವರರಿಗೆ ಪೂಜೆ, ಎಡೆ ಮಾಡುವ ಕಾರ್ಯಕ್ರಮ. ಕಂಕಣ ಕಟ್ಟಿದಾಗಿನಿಂದ ಜಾತ್ರೆ ಮುಗಿಯುವ ವರೆಗೂ ಪೂಜಾರಿ ಮದುಮಗನಾಗಿರುತ್ತಾನೆ. ಕಂಕಣ ಕಟ್ಟಿದಾಗಿನಿಂದ ದಿನ ನಿತ್ಯ ರಾತ್ರಿ ಗೋಣಿಬಸವನ ಉಚ್ಚಾಯ ಎಂಟು ದಿನ ಎಳೆಯುತ್ತಾರೆ. ನಂತರ ಒಂಬತ್ತನೇ ದಿನಕ್ಕೆ ರಥೋತ್ಸವ ಜರುಗುತ್ತದೆ.ಈ ಗೋಣಿಬಸವೇಶ್ವರರ ಮಠಕ್ಕೆ ಮೊದಲ ಪಟ್ಟಾಧ್ಯಕ್ಷರು ಗೋಣಿಬಸವೇಶ್ವರರೇ ಆಗಿದ್ದು, ನಂತರ ಬಂದವರೆಲ್ಲರೂ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಎಂದೇ ನಾಮಾಂಕಿತರಾಗಿದ್ದು, ಈಗ 8ನೇ ಪಟ್ಟಾಧ್ಯಕ್ಷರಾಗಿ ಪಟ್ಟದ ಚಿನ್ಮಯ ಸ್ವಾಮೀಜಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾನಿದ್ಯದಲ್ಲಿ ಕಾಶಿನಾಥ ಸ್ವಾಮಿಗಳ ಸಮ್ಮುಖದಲ್ಲಿ ಜಾತ್ರೆಯ ಎಲ್ಲಾ ಕಾರ್ಯಕ್ರಮ ಜರುಗಲಿವೆ.
ಸಹಸ್ರಾರು ಬಂಡಿಗಳು, ಲಕ್ಷಾಂತರ ಭಕ್ತರು ಈ ಜಾತ್ರೆಗೆ ಆಗಮಿಸುತ್ತಾರೆ, ವಾರಗಟ್ಟಲೆ ಜಾತ್ರೆ ನಡೆಯುತ್ತದೆ. ಇಂತಹ ಇತಿಹಾಸ ಪ್ರಸಿದ್ಧ ಜಾತ್ರೆಯ ಪ್ರಮುಖ ಘಟ್ಟ ಗೋಣಿಬಸವೇಶ್ವರ ಮಹಾ ರಥೋತ್ಸವ ಮಾ. 10ರಂದು ಸಂಜೆ 4.30ಕ್ಕೆ ಅಪಾರ ಭಕ್ತರ ಮಧ್ಯೆ ಜರುಗುತ್ತದೆ. ಒಟ್ಟಿನಲ್ಲಿ ಕೂಲಹಳ್ಳಿ ಗೋಣಿಬಸವೇಶ್ವರ ಮಠ ಹಾಗೂ ಗೋಣಿಬಸವೇಶ್ವರರ ರಥೋತ್ಸವವು ಸರ್ವ ಧರ್ಮ ಸಮನ್ವಯದ ಸಂಕೇತವಾಗಿವೆ.