ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸ್ಥಳೀಯ ಆಡಳಿತದಲ್ಲಿ ಮಹಿಳೆಯರು ಭಾಗವಹಿಸಿ ಅಭಿಪ್ರಾಯ ನೀಡುವ ಮೂಲಕ ಮಹಿಳಾ ಸಬಲೀಕರಣದ ಆಶಯಕ್ಕೆ ಬಲ ತುಂಬಬೇಕು ಎಂದು ಪಿಡಿಒ ಅಶ್ವಿನಿ ತಿಳಿಸಿದರು.ಅಣ್ಣೂರು ಗ್ರಾಪಂನಲ್ಲಿ ಏರ್ಪಡಿಸಿದ್ದ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನದಲ್ಲಿ ಮಾತನಾಡಿ, ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಇರುವ ತೊಡಕುಗಳನ್ನು ಗುರುತಿಸಿ ಹೊಗಲಾಡಿಸಲು ವಾರ್ಡ್ ಮತ್ತು ಗ್ರಾಮಸಭೆಗಳಲ್ಲಿ ಮಹಿಳೆಯರು ಭಾಗವಹಿಸಬೇಕು ಎಂದರು.
ಮಹಿಳಾ ಸ್ನೇಹಿ ಗ್ರಾಪಂ ಅಭಿಯಾನವು 16 ವಾರಗಳ ಕಾಲ ನಡೆದು ವಿವಿಧ ದಿನಾಚರಣೆಗಳು ಹಾಗು ಆರೋಗ್ಯ ತಪಾಸಣಾ ಮತ್ತು ಯೋಗ ಶಿಬಿರಗಳು ನಡೆಯಲಿದೆ. ಮಹಿಳೆಯರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಕೋರಿದರು.ಸರ್ಕಾರದ ಯೊಜನೆಗಳ ಕುರಿತು ಮಾಹಿತಿ ನೀಡುವ ಜತೆಗೆ ಆರ್ಹಫಲಾನುಭವಿಗಳಿಗೆ ತಕ್ಕ ಯೋಜನೆ ಫಲ ವಿತರಿಸಲು ಅಭಿಯಾನದಲ್ಲಿ ಕ್ರಮ ವಹಿಸಲಾಗುವುದು. ಸ್ಥಳೀಯ ಆಡಳಿದಲ್ಲಿ ಜನಸಂಖ್ಯೆ ಅರ್ಧದಷ್ಟಿರುವ ಮಹಿಳೆಯರ ಅಭಿಪ್ರಾಯ ದಾಖಲಾದಾಗ ಮಾತ್ರ ಮಹಿಳೆಯರು ಸಬಲೀಕರಣವಾಗಲಿದೆ ಎಂದರು.
ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಉಪ ಸಮಿತಿಗಳ ಸಭೆಗಳನ್ನು ನಡೆಸಲಾಗುವುದು. ಗ್ರಾಮದ ಮಹಿಳೆಯರ ಅಂಕಿ-ಸಂಖ್ಯೆಯ ವಿವರ ಸಂಗ್ರಹಿಸಿ ಮಹಿಳಾ ಗ್ರಾಮ ಸಭೆಯಲ್ಲಿ ಮಂಡಿಸಬೇಕು. ಎಲ್ಲಾ ಸ್ವಸಹಾಯ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಸ್ವ-ಸಹಾಯ ಸಂಘಗಳ ಎಲ್ಲಾ ಸದಸ್ಯರು ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಖಾತರಿ ಪಡಿಸಿಕೊಳ್ಳಲಾಗುವುದು ಎಂದರು.ಅಭಿಯಾನದ ಅವಧಿಯಲ್ಲಿ ವಾರಕ್ಕೊಂದರಂತೆ ಸಾಂಸ್ಕೃತಿಕ, ಮನರಂಜನೆ, ಕ್ರೀಡೆ, ಆರೋಗ್ಯ, ಪೌಷ್ಟಿಕಾಂಶ, ನೈರ್ಮಲ್ಯ, ಮಹಿಳಾ ಕಾನೂನುಗಳು ಮುಂತಾದ ವಿಷಯಗಳನ್ನು ಕಾರ್ಯಕ್ರಮ ಆಯೋಜನೆ. ಗ್ರಾಮಸಭೆ ನಡೆಸುವ ಸಮಯದಲ್ಲಿ ಆರೋಗ್ಯ ಶಿಬಿರ, ವಸ್ತು ಪ್ರದರ್ಶನ, ಸಸಿ ನೆಡುವ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಮದ್ದೂರಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ ಮಾತನಾಡಿ, ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು. ತಮ್ಮಲ್ಲಿನ ಹಿಂಜರಿಕೆ ಬಿಟ್ಟು ಗ್ರಾಮಸಭೆಯಲ್ಲಿ ಭಾಗವಹಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶಿವಮ್ಮ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಹಿಳೆಯರಿಗೆ ಕೊಟ್ಟಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಅಭಿವೃದ್ಧಿಗೆ ಸಹಕಾರಿಯಾಗೋಣ ಎಂದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಚಂದ್ರಶೇಖರ್ , ಭಾಗ್ಯಮ್ಮ, ನಾಗಮಣಿ ಮಹೇಂದ್ರ, ಹೋಂಡಾ ಸಿದ್ದೇಗೌಡ, ಸತೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.