ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ಗೋಣಿಕೊಪ್ಪ ಅಮ್ಮ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಪುತ್ತರಿ ನಮ್ಮೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ತಂಡ ದುಡಿಕೊಟ್ ಪಾಟ್ ಮೂಲಕ ಅತಿಥಿಗಳನ್ನು ಬರಮಾಡಿಕೊಂಡರು. ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಬೆಂಗಳೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷೆ ಡಾ. ಸರಸ್ವತಿ ಸೋಮೇಶ್, ಹುಣಸೂರು ವಿಭಾಗದ ಡಿಎಫ್‌ಒ ಪುತ್ತಾಮನೆ ಸೀಮಾ ರಂಜನ್, ವಕೀಲರು ಹಾಗೂ ಮೈಸೂರು ಅಮ್ಮ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚಮ್ಮಣಮಾಡ ಬಿ. ಗಿರೀಶ್ ಅವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅತಿಥಿಗಳು ಅಮ್ಮ ಕೊಡವ ಜನಾಂಗದ ಸಂಸ್ಕೃತಿ ಆಚಾರ ವಿಚಾರಗಳ ಉಳಿವಿಗೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ. ಸಮಾಜದ ವತಿಯಿಂದ ಪುತ್ತರಿ ನಮ್ಮೆ ಆಯೋಜಿಸುವ ಮೂಲಕ ಅಮ್ಮ ಕೊಡವ ಜನಾಂಗ ಒಟ್ಟಿಗೆ ಸೇರಲು ಅವಕಾಶ ಮಾಡಿಕೊಟ್ಟ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು ಅವರ ಕಾರ್ಯ ಶ್ಲಾಘನೀಯ ಎಂದರು.ಅಮ್ಮಕೊಡವ ಸಮಾಜದ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ ವಿಶೇಷ ಸಂಸ್ಕೃತಿ, ವಿಶಿಷ್ಟ ಪರಂಪರೆಯನ್ನು ಹೊಂದಿರುವ ಅಮ್ಮ ಕೊಡವ ಜನಾಂಗದ ಇತಿಹಾಸವನ್ನು ತಿಳಿದುಕೊಳ್ಳುವ ಮೂಲಕ ಯುವ ಜನತೆ ಹಬ್ಬ ಆಚರಣೆಗಳಲ್ಲಿ ಪಾಲ್ಗೊಂಡು ಜನಾಂಗ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಹಿರಿಯರಾದ ಬಾನಂಡ ರಮೇಶ್, ನೆರೆಯಂಡಮ್ಮಂಡ ಪ್ರಭು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು ಮಾತನಾಡಿ ನಮ್ಮ ಸಮಾಜವು ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಹತ್ತಾರು ಜನರ ಶ್ರಮದಿಂದ ಸಮಾಜ ಮುಂದುವರಿಯಲು ಸಾಧ್ಯ. ಅಮ್ಮ ಕೊಡವ ಸಮಾಜದಿಂದ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೂ ಇದೇ ರೀತಿ ಹೆಚ್ಚಿನ ಜನ ಸೇರಿದರೆ ಕಾರ್ಯಕ್ರಮ ಯಶಸ್ವಿಗೊಳ್ಳುತ್ತದೆ ಎಂದರು. ಅಮ್ಮ ಕೊಡವ ಸಮಾಜದ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಶಿಫಾರಸ್ಸಿನ ಮೇರೆಗೆ ಸರ್ಕಾರದಿಂದ 5 ಲಕ್ಷ ರುಪಾಯಿ ಅನುದಾನ ಸಿಕ್ಕಿರುವ ಬಗ್ಗೆ ತಿಳಿಸಿ, ಅವರಿಗೆ ಧನ್ಯವಾದ ಸಲ್ಲಿಸಿದರು. ಇದೇ ಸಂದರ್ಭ ಸಮಾಜದ ಅಭಿವೃದ್ಧಿಗಾಗಿ ಪುತ್ತಾಮನೆ ಪ್ರಸಾದ್ ಅವರು 1 ಲಕ್ಷ ರು. ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ವಾಯ್ಸ್ ಆಫ್ ಅಮ್ಮ ಕೊಡವ ತಂಡದ ಪುತ್ತಾಮನೆ ವಿದ್ಯಾ ಜಗದೀಶ್ ಮತ್ತು ನಾಳಿಯಮ್ಮಂಡ ವೀಣಾ ಅವರ ಹಾಡುಗಾರಿಕೆ ಕೇಳುಗರಿಗೆ ಮುದ ನೀಡಿತು.ಬಲ್ಯoಡ ದೀಪ್ತಿ, ಆಂಡಮಾಡ ಪವನ್, ಅಚ್ಚಿಯಂಡ ರಿಯಾ ಮತ್ತು ದಿಯಾ, ಪುತ್ತಾಮನೆ ಪ್ರೀತಿ ಮತ್ತು ಭವ್ಯ, ಬಾಚಮಾಡ ದಿವ್ಯ ಮತ್ತು ಶೈನಿ, ಹೆಮ್ಮಚ್ಚಿಮನೆ ಲಹರಿ, ಬಲ್ಯಂಡ ತವನ್, ನೃತ್ಯದ ಮೂಲಕ ರಂಜಿಸಿದರು.
ಕರ್ತoಗಡ ವಿಶ್ವನಾಥ್, ನಾಳಿಯಮ್ಮಂಡ ಪ್ರೇಮ ಅಮ್ಮತೀರ ಧನ್ಯ ಸುನೀಲ್, ನೆರೆಯನಮ್ಮಂಡ ಗೀತಾ, ಬಲ್ಯಂಡ ನಿಶಾಂತ್, ಆಂಡಮಾಡ ಜಶಿಕ ಪವನ್, ಹೆಮ್ಮಚ್ಚಿಮನೆ ಲತಾ, ಬಲ್ಯಂಡ ಪ್ರತೀಕ್ಷ, ಅಚ್ಚಿಯಂಡ ಧೃತಿ ಹಾಡು ಹಾಡುವ ಮೂಲಕ ರಂಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹಕ ನಗದು ಬಹುಮಾನ ನೀಡಲಾಯಿತು.ಸ್ಪರ್ಧೆಯ ವಿಜೇತರು: ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಅಮ್ಮತೀರ ಡೀನಾ ಪ್ರಥಮ, ಪುತ್ತಾಮನೆ ಪೂಜಾ ದ್ವಿತೀಯ, ಆಂಡಮಾಡ ಚೈತ್ರ ತೃತೀಯ ಬಹುಮಾನ ಪಡೆದುಕೊಂಡರು.
ಪುರುಷರಿಗಾಗಿ ಏರ್ಪಡಿಸಲಾಗಿದ್ದ ಪ್ಲಾಸ್ಟಿಕ್ ಚೆಂಡಿಗೆ ಏರ್ ಗನ್‌ನಿಂದ ಶೂಟ್ ಮಾಡುವ ಸ್ಪರ್ಧೆಯಲ್ಲಿ ಅಮ್ಮತೀರ ಪ್ರಸಾದ್ ಪ್ರಥಮ, ಪುತ್ತಾಮನೆ ಅನಿಲ್ ದ್ವಿತೀಯ, ಅಮ್ಮತೀರ ಜೀವನ್ ತೃತೀಯ ಬಹುಮಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪುತ್ತಾ ಮನೆ ಅನಿಲ್ ಪ್ರಸಾದ್, ಜಂಟಿ ಕಾರ್ಯದರ್ಶಿ ಅಮ್ಮತೀರ ಸುರೇಶ್, ಖಜಾಂಚಿ ಅಮ್ಮತೀರ ಗಣೇಶ್, ನಿರ್ದೇಶಕರಾದ ನೆರೆಯಂಡಮ್ಮಂಡ ಉಮಾ ಪ್ರಭು, ಬಾನಂಡ ಅಶೋಕ್, ನೆರೆಯಂಡಮ್ಮಂಡ ಜನಾರ್ದನ ಹಾಗೂ ಗುಂಭೀರ ವಿನಾಯಕ್, ಸಮಾಜದ ಪ್ರಮುಖರು ಇದ್ದರು. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಪಾಡಿಯಮಂಡ ಮುರುಳಿ ಸ್ವಾಗತಿಸಿದರು. ನೆರಯಂಡಮ್ಮಂಡ ಸುಬ್ರಮಣಿ ವಂದಿಸಿದರು. ಹೆಮ್ಮಚ್ಚಿಮನೆ ಕಾವ್ಯ ಅಶ್ವತ್ ನಿರೂಪಿಸಿದರು.