ಗೋಣಿಕೊಪ್ಪ ದಸರಾ- ‘ಟೈಮ್ ಅಟೆಕ್ 2023’ ಆಟೋಕ್ರಾಸ್ ಕಾರ್ ರ‍್ಯಾಲಿಗೆ ಚಾಲನೆ
KannadaprabhaNewsNetwork | Published : Oct 08 2023, 12:01 AM IST
ಗೋಣಿಕೊಪ್ಪ ದಸರಾ- ‘ಟೈಮ್ ಅಟೆಕ್ 2023’ ಆಟೋಕ್ರಾಸ್ ಕಾರ್ ರ‍್ಯಾಲಿಗೆ ಚಾಲನೆ
ಸಾರಾಂಶ
ಕಾರುಗಳು ದೂಳೆಬ್ಬಿಸುತ್ತ ಸಾಗುತ್ತಿದ್ದಂತೆಯೇ ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಜೋರಾಗಿ ಕೇಳಿ ಬರುತ್ತಿತ್ತು. ಸುಂದರ ಪರಿಸರದ ನಡುವೆ ವರ್ಷಂಪ್ರತಿ ಸೌತ್ ಕೂರ್ಗ್ ಫಾರ್ಮರ್ ಅಸೋಸಿಯೇಷನ್‌ನ ವತಿಯಿಂದ ಯಶಸ್ವಿಯಾಗಿ ರ‍್ಯಾಲಿಗಳನ್ನು ಆಯೋಜಿಸುವ ಮೂಲಕ ಕೊಡಗಿನ ಕ್ರೀಡಾಪಟುಗಳಿಗೆ ಹಾಗೂ ಹೊರ ಜಿಲ್ಲೆಯ, ರಾಜ್ಯದ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ ಗೋಣಿಕೊಪ್ಪ ಕಾವೇರಿ ದಸರಾ ಸಮಿತಿಯ 45ನೇ ದಸರಾ ಜನೋತ್ಸವದ ಅಂಗವಾಗಿ ಗೋಣಿಕೊಪ್ಪಲುವಿನ ಹರೀಶ್ಚಂದ್ರಪುರದ ಮನೆಯಪಂಡ ಕುಟುಂಬಸ್ಥರ ಮೈದಾನದಲ್ಲಿ ಸೌತ್ ಕೂರ್ಗ್ ಫಾರ್ಮರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಟೈಮ್ ಅಟೆಕ್ 2023’ ಆಟೋಕ್ರಾಸ್ ಕಾರ್ ರ‍್ಯಾಲಿಯಲ್ಲಿ ಜಿಲ್ಲೆಯಲ್ಲಿ ಹಲವು ಕ್ರೀಡಾ ಪಟುಗಳು ಪ್ರದರ್ಶನ ನೀಡಿದರು. ಈ ಮೂಲಕ ಗೋಣಿಕೊಪ್ಪ ದಸರಾಕ್ಕೆ ಚಾಲನೆ ಸಿಕ್ಕಿದಂತಾಗಿದೆ. ಕಾರುಗಳು ದೂಳೆಬ್ಬಿಸುತ್ತ ಸಾಗುತ್ತಿದ್ದಂತೆಯೇ ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಜೋರಾಗಿ ಕೇಳಿ ಬರುತ್ತಿತ್ತು. ಸುಂದರ ಪರಿಸರದ ನಡುವೆ ವರ್ಷಂಪ್ರತಿ ಸೌತ್ ಕೂರ್ಗ್ ಫಾರ್ಮರ್ ಅಸೋಸಿಯೇಷನ್‌ನ ವತಿಯಿಂದ ಯಶಸ್ವಿಯಾಗಿ ರ‍್ಯಾಲಿಗಳನ್ನು ಆಯೋಜಿಸುವ ಮೂಲಕ ಕೊಡಗಿನ ಕ್ರೀಡಾಪಟುಗಳಿಗೆ ಹಾಗೂ ಹೊರ ಜಿಲ್ಲೆಯ, ರಾಜ್ಯದ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ. ಕೊಡಗಿನ ಕ್ರೀಡಾಪಟುಗಳು ವಿಶೇಷವಾಗಿ ಯುವಕರು ರೋಮಾಂಚನಕಾರಿ ಪ್ರದರ್ಶನ ನೀಡಿದರು. ಮೈದಾನದ ಟ್ರ‍್ಯಾಕ್‌ನ ಸುತ್ತಲು ಬಿಸಿಲನ್ನು ಲೆಕ್ಕಿಸದೆ ಕ್ರೀಡಾಪ್ರಿಯರು ತಂಡೋಪತಂಡವಾಗಿ ಆಗಮಿಸಿ ರ‍್ಯಾಲಿಯನ್ನು ಕಣ್ತುಂಬ ವೀಕ್ಷಿಸಿ ರೋಮಾಂಚಕಾರಿ ಕ್ಷಣಗಳನ್ನು ಅನುಭವಿಸಿದರು. ಗೋಣಿಕೊಪ್ಪಲಿನ ಪ್ರತಿಷ್ಠಿತ ಸ್ಪೋರ್ಟ್ಸ್ ಸೌತ್ ಕೂರ್ಗ್ ಫಾರ್ಮರ್ ಅಸೋಸಿಯೇಷನ್ ಹಾಗೂ ಕಾವೇರಿ ದಸರಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಮೋದ್ ಗಣಪತಿ, ವರ್ಷಂಪ್ರತಿ ಆಯೋಜಕರು ಉತ್ತಮ ರೀತಿಯಲ್ಲಿ ರ‍್ಯಾಲಿಯನ್ನು ಆಯೋಜಿಸುತ್ತಿದ್ದಾರೆ. ಇದರಿಂದ ದಸರಾ ಜನೋತ್ಸವದ ಮೆರಗು ಹೆಚ್ಚಾಗುವಂತಾಗಿದೆ. ಕೊಡಗಿನ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಲಭಿಸುತ್ತಿದೆ. ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುವಂತಾಗಲಿ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮನ್ನಕ್ಕಮನೆ ಸೌಮ್ಯಬಾಲು ಮಾತನಾಡಿ ಕ್ರೀಡೆಗೆ ಹೆಚ್ಚಿನ ಆದ್ಯತೆಯನ್ನು ಆಯೋಜಕರು ನೀಡುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ರ‍್ಯಾಲಿಯನ್ನು ನೋಡಲು ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸೌತ್ ಕೂರ್ಗ್ ಫಾರ್ಮರ್ ಅಸೋಸಿಯೇಷನ್ ಅಧ್ಯಕ್ಷರಾದ ಸಿ.ಡಿ.ಮಾದಪ್ಪ ಕಳೆದ 23 ವರ್ಷಗಳಿಂದ ಸಂಸ್ಥೆಯು ಉತ್ತಮ ರೀತಿಯಲ್ಲಿ ಸಮಾಜ ಸೇವೆಯೊಂದಿಗೆ ಕ್ರೀಡೆಯನ್ನು ನಡೆಸುತ್ತ ಬಂದಿದೆ. ವರ್ಷಂಪ್ರತಿ ದಸರಾ ಜನೋತ್ಸವದ ಅಂಗವಾಗಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಮೂರು ದಿನಾಂಕಗಳಂದು ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಸಾಕಷ್ಟು ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಅಯ್ಯಪ್ಪ ಪ್ರಾರ್ಥಿಸಿ ಸೌತ್ ಕೂರ್ಗ್ ಫಾರ್ಮರ್ ಅಸೋಸಿಯೇಷನ್ ನಿರ್ದೇಶಕರಾದ ಗುಮ್ಮಟ್ಟಿರ ಕಿಲನ್ ಗಣಪತಿ ಸ್ವಾಗತಿಸಿ ವಂದಿಸಿದರು. ನಿರ್ದೇಶಕ ಚೆಪ್ಪುಡೀರ ಮಾಚಯ್ಯ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಅನುಭವಿ ರೈಡರ್‌ಗಳು ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರ ಮನಸೊರೆಗೊಂಡರು. ಈ ಬಾರಿ ದಸರಾ ಪ್ರಯುಕ್ತ ಆಯೋಜಿಸಿದ್ದ ಮೊದಲ ದಿನದ ಕಾರ್ ರ‍್ಯಾಲಿ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ದಸರಾ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್, ಆಯೋಜಕರಾದ ಗುಮ್ಮಟ್ಟಿರ ದರ್ಶನ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.