ಗೋಣಿಕೊಪ್ಪ: ಹಳೆ ಕಟ್ಟಡ ಕುಸಿತ, ಆರು ಮಂದಿಗೆ ಗಾಯ

| Published : Jun 21 2024, 01:02 AM IST

ಸಾರಾಂಶ

ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಮುಖ್ಯ ರಸ್ತೆಯ ಬಳಿ ಗುರುವಾರ ಮಧ್ಯಾಹ್ನ ಹಳೆಯ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಗ್ರಾಹಕರು ಹಾಗೂ ಕಾರ್ಮಿಕರು ಗಾಯಗೊಂಡ ಘಟನೆನಡೆದಿದೆ. ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕಟ್ಟಡದ ಒಂದು ಭಾಗದಲ್ಲಿ ದಮ್ ಬಿರಿಯಾನಿ ಹಾಗೂ ಮತ್ತೊಂದರಲ್ಲಿ ಸಮೀರ್ ಎಂಬವರ ಮಟನ್ ಅಂಗಡಿ ಇತ್ತು. ಕಟ್ಟಡ ದಿಢೀರ್‌ ಸಂಪೂರ್ಣವಾಗಿ ನೆಲಸಮಗೊಂಡಿದೆ.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಹಳೆಯ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಗ್ರಾಹಕರು ಹಾಗೂ ಕಾರ್ಮಿಕರು ಗಾಯಗೊಂಡ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಮುಖ್ಯ ರಸ್ತೆಯ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.ಘಟನೆಯಲ್ಲಿ ತಿರುಮುಗನ್ (60), ಅಳಮೇಲು (46), ನಾರಾಯಣ(24), ಮಹಾಲಿಂಗಂ(25), ಗ್ರಾಹಕರಾದ ದೇವರಪುರ ಗ್ರಾಮದ ಮಧು(32), ನಾಗರಹೊಳೆ ಹಾಡಿಯ ತಿಮ್ಮ(45) ಎಂಬವರಿಗೆ ಗಾಯಗಳಾಗಿದೆ.

ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕಟ್ಟಡದ ಒಂದು ಭಾಗದಲ್ಲಿ ದಮ್ ಬಿರಿಯಾನಿ ಹಾಗೂ ಮತ್ತೊಂದರಲ್ಲಿ ಸಮೀರ್ ಎಂಬವರ ಮಟನ್ ಅಂಗಡಿ ಇತ್ತು. ಕಟ್ಟಡ ದಿಢೀರ್‌ ಸಂಪೂರ್ಣವಾಗಿ ನೆಲಸಮಗೊಂಡಿದೆ.

ಕಟ್ಟಡ ಕುಸಿತ ಉಂಟಾದ ಶಬ್ಧಕ್ಕೆ ಬಿರಿಯಾನಿ ಹೊಟೇಲ್ ನಡೆಸುತ್ತಿದ್ದ ತಿರುಮುಗನ್ ಹಾಗೂ ಅವರ ಕುಟುಂಬದವರು, ಗ್ರಾಹಕರು ಕಟ್ಟಡದಿಂದ ಓಡಿ ಪಾರಾಗಿದ್ದಾರೆ. ಕೆಲವು ಗ್ರಾಹಕರು ಒಳಗೆ ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು

ಅಗ್ನಿಶಾಮಕ ದಳದ ಸಿಬ್ಬಂದಿ, ಎನ್‌ಡಿಆರ್‌ಎಫ್‌ ಹಾಗೂ ಸಾರ್ವಜನಿಕರು ಸೇರಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಹೊಟೇಲ್ ಗೆ ಊಟಕ್ಕೆ ಬಂದಿದ್ದ ಗ್ರಾಹಕ ಮಧು ಎಂಬವರ ಕಾಲು ಮುರಿದಿದ್ದು, ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗ್ರಾಹಕರ ತಲೆಗೆ ಪೆಟ್ಟಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುರಾತನ ಕಟ್ಟಡ

ಈ ಘಟನೆ ಬಗ್ಗೆ ಮಾತನಾಡಿದ ಸ್ಥಳೀಯರೊಬ್ಬರು, ಈ ಕಟ್ಟಡ ಹಲವು ವರ್ಷಗಳಷ್ಟು ಹಳೆಯದು. ಅಲ್ಲದೇ ಪಟ್ಟಣದಲ್ಲಿ ಇನ್ನಷ್ಟು ಇಂತಹ ಹಳೆಯ ಕಟ್ಟಡಗಳಿವೆ. ಅವನ್ನು ತೆರವು ಮಾಡಬೇಕಿದೆ ಎಂದು ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಸೇರಿದಂತೆ ಗೋಣಿಕೊಪ್ಪ ಠಾಣಾ ಪೊಲೀಸರು, ಎನ್‌ಡಿಆರ್‌ಎಫ್‌ ಸಿಬ್ಬಂದಿ, ಗೋಣಿಕೊಪ್ಪ ಗ್ರಾಪಂ ಪ್ರಮುಖರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನೆಲಸಮಗೊಂಡಿರುವ ಕಟ್ಟಡವನ್ನು 1952ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದ್ದು, 72 ವರ್ಷಗಳಾಗಿವೆ.