ಮಠಗಳು ಹಾಗೂ ಮಠಾಧೀಶರು ಧರ್ಮ, ಸಂಸ್ಕೃತಿ ಧಾರೆ, ವೈಚಾರಿಕತೆ ಮೂಲಕ ಮಾರ್ಗದರ್ಶನ ಮಾಡುತ್ತಾರೆ. ಮಾರ್ಗದರ್ಶನ ಪಡೆದು ನಾವು ಒಳ್ಳೆಯರಾಗಬೇಕು ಎಂದು ಶಂಕರ ಬಿದರಿ ಹೇಳಿದರು.
ಧಾರವಾಡ:
ಗುರುಗಳ ಮಾರ್ಗದರ್ಶನ ನಮ್ಮನ್ನು ಸನ್ಮಾರ್ಗಕ್ಕೆ ತೆಗೆದುಕೊಂಡು ಹೋಗುತ್ತದೆ. ನಡೆ-ನುಡಿಗಳು ಒಂದಾಗಬೇಕು ಅಂದರೆ ಮಾತ್ರ ನಮ್ಮಿಂದ ಸತ್ಕಾರ್ಯ ಸಾಧ್ಯವಾಗುತ್ತದೆ. ಅಂಥ ಸತ್ಕಾರ್ಯ ಮಾಡಲು ಗುರುಗಳ ಉಪದೇಶ, ಮಾರ್ಗದರ್ಶನ ಸಹಕಾರಿ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಅಭಿಪ್ರಾಯಪಟ್ಟರು.ನಗರದ ಮುರುಘಾಮಠದ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಠಗಳು ಹಾಗೂ ಮಠಾಧೀಶರು ಧರ್ಮ, ಸಂಸ್ಕೃತಿ ಧಾರೆ, ವೈಚಾರಿಕತೆ ಮೂಲಕ ಮಾರ್ಗದರ್ಶನ ಮಾಡುತ್ತಾರೆ. ಮಾರ್ಗದರ್ಶನ ಪಡೆದು ನಾವು ಒಳ್ಳೆಯರಾಗಬೇಕು ಎಂದರು.
ಮನುಷ್ಯ ಅಂತರಂಗದಲ್ಲಿ ಸಾಕಷ್ಟು ಜ್ಞಾನ ಉಂಟು ಮಾಡಿಕೊಳ್ಳುತ್ತಾನೆ. ಮನಸ್ಸಿನಲ್ಲಿ ಬಹಳ ತಿಳಿದುಕೊಳ್ಳುತ್ತಾನೆ. ಆದರೆ, ಆ ಜ್ಞಾನವು ಬಹಿರಂಗದಲ್ಲಿ ಕ್ರಿಯಾರೂಪದಲ್ಲಿ ಉಪಯೋಗವಾದರೆ ಮನಸ್ಸು ಕಲ್ಮಷಗೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಕ್ರಿಯಾ ಮತ್ತು ಜ್ಞಾನಗಳ ಸಮನ್ವಯವಾಗಬೇಕು ಎಂದು ಹೇಳಿದರು.ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಮುರಘಾಮಠದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಸಂಸ್ಕಾರ ನೀಡಲಾಗುತ್ತಿದೆ. ಈ ಪರಂಪರೆ ಎಲ್ಲ ಲಿಂಗಾಯತ ಮಠಗಳಲ್ಲಿ ನಡೆಯುತ್ತಿದೆ ಎಂದರು. ಮೂರಸಾವಿರಮಠದ ಶ್ರೀಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇಳಕಲ್ ಶ್ರೀಗುರುಮಹಾಂತ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅದ್ಯಕ್ಷತೆ ವಹಿಸಿದ್ದರು. ಡಾ. ವೀರಣ್ಣ ರಾಜೂರ ಪ್ರಾಸ್ತಾವಿಕ ಮಾತನಾಡಿದರು. ಕವಿವಿ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ. ಆಡಳಿತ ಮಂಡಳಿ ಉಪಾಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ. ಡಿ.ಬಿ. ಲಕಮನಹಳ್ಳಿ ಇದ್ದರು. ಮಲ್ಲು ಗಾಣಗೇರ ನಿರೂಪಿಸಿ ಸ್ವಾಗತಿಸಿದರು.
ವಿನಾಯಕ ಹಾಗೂ ವಿಜಯಲಕ್ಷ್ಮಿ ಸರೇಬಾನ ವಚನ ಸಂಗೀತ ಹಾಗೂ ಗಣೇಶ ನ್ರತ್ಯ ಶಾಲೆ ವಿದ್ಯಾರ್ಥಿಗಳಿಂದ ವಚನ ನೃತ್ಯ ಜರುಗಿತು.