ಸಾರಾಂಶ
ಶಿವಮೊಗ್ಗ ನಗರದ ಓಟಿ ರಸ್ತೆಯಲ್ಲಿರುವ ಮಲ್ನಾಡ್ ಅಂಜನಾ ಪಟೇಲ್ ಸಮಾಜದ ಆವರಣದಲ್ಲಿರುವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ದಂತ ಹಾಗೂ ಕಣ್ಣಿನ ಆರೋಗ್ಯ ಶಿಬಿರದಲ್ಲಿ ಕೆ.ಎಸ್. ಈಶ್ವರಪ್ಪ ಅವರಿಗೆ ಕಣ್ಣಿನ ತಪಾಸಣೆ ನಡೆಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜೀವನೋಪಾಯಕ್ಕಾಗಿ ಬಹುತೇಕವಾಗಿ ವ್ಯಾಪಾರ, ವಹಿವಾಟು ನೆಚ್ಚಿಕೊಂಡಿರುವ ವಿಷ್ಣು ಸಮಾಜದವರು ತಾವು ವ್ಯಾಪಾರದ ಮೂಲಕ ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನಾದರೂ ಸಾಮಾಜಿಕ, ಧಾರ್ಮಿಕ ಕಾರ್ಯ ಸೇರಿದಂತೆ ಸತ್ಕಾರ್ಯಗಳಿಗೆ ಬಳಸುತ್ತಾರೆ. ಈ ಮೂಲಕ ಸಾಮಾಜಿಕ ಕಾಳಜಿ, ಕಳಕಳಿ, ದಾನ-ಧರ್ಮದ ಬಗ್ಗೆ ಬದ್ಧತೆ ವ್ಯಕ್ತಪಡಿಸುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.ವಿಷ್ಣು ಸಮಾಜದ ಸಹಯೋಗದಲ್ಲಿ ದಿನೇಶ್ ದಾಸ್ ವೈಷ್ಣವ್ (ಚಾಯ್‍ವಾಲಾ)ರ ತಾಯಿ ಪಂಖೀದೇವಿ ಇವರ ಪುಣ್ಯ ಸ್ಮರಣಾರ್ಥ ನಗರದ ಓಟಿ ರಸ್ತೆಯಲ್ಲಿರುವ ಮಲ್ನಾಡ್ ಅಂಜನಾ ಪಟೇಲ್ ಸಮಾಜದ ಆವರಣದಲ್ಲಿರುವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ದಂತ ಹಾಗೂ ಕಣ್ಣಿನ ಆರೋಗ್ಯ ಶಿಬಿರದಲ್ಲಿ ಮಾತನಾಡಿ, ಸಮಾಜದ ಋಣ ಪ್ರತಿಯೊಬ್ಬ ವ್ಯಕ್ತಿ ಮೇಲಿದೆ. ನಾನು ಮತ್ತು ನನ್ನ ಕುಟುಂಬ ಎಂಬ ಸ್ವಾರ್ಥ ಭಾವನೆಗೆ ಒಳಗಾಗಬಾರದು. ದಾನ- ಧರ್ಮ ಮಾಡುವಾಗಲೂ ಸಹ ನಿಸ್ವಾರ್ಥ ಮನೋಭಾವ ಇರಬೇಕು. ಆಗ ನಾವು ಮಾಡುವ ಸತ್ಕಾರ್ಯದ ಫಲ ನಮಗೆ ದೊರೆಯುತ್ತದೆ ಎಂದರು.
ಜಮ್ಮುವಿನ ಅಖಿಲ ಭಾರತೀಯ ವೇದಿಕ್ ಧರ್ಮ ಪ್ರಸಾರ ಆಶ್ರಮದ ಶ್ರೀ ನಿರ್ಮಲ್ ಸ್ವರೂಪ್ ಜಿ ಮಹರಾಜ್ ಮಾತನಾಡಿ, ಪರೋಪಕಾರವೇ ಪುಣ್ಯ. ಪರರ ಪೀಡನೆಯೇ ಪಾಪ. ಕಲಿಯುಗದಲ್ಲಿ ಪರೋಪಕಾರದ ಮೂಲಕ ಸುಲಭ ಮಾರ್ಗದಿಂದ ಪುಣ್ಯ ಗಳಿಸಬಹುದೆಂದು ತಿಳಿಸಿದರು.ಉಚಿತ ದಂತ ಚಿಕಿತ್ಸೆಯು ಶರಾವತಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ. ಮೇಘಶ್ಯಾಮ ಭಟ್, ಡಾ. ಆಲ್ವಿನ್ ಅಂಟೋನಿ ಹಾಗೂ ವಾಸನ್ ಐ ಕೇರ್ ಸೆಂಟರ್‍ನ ವೈದ್ಯೆ ಡಾ. ಶೃತಿ ಬಿದರೆ, ಮಾರ್ಕೆಂಟಿಂಗ್ ಎಕ್ಸಿಕ್ಯೂಟಿವ್ ಎ.ಸಿ. ಸಂಜಯ್ ಇವರ ಮಾರ್ಗದರ್ಶನದಲ್ಲಿ ಕಣ್ಣಿನ ಆರೋಗ್ಯ ತಪಾಸಣೆ ನಡೆಯಿತು. ಕೆ.ಎಸ್. ಈಶ್ವರಪ್ಪನವರೂ ಸಹ ಕಣ್ಣಿನ ತಪಾಸಣೆಗೆ ಒಳಗಾಗಿ ಸಲಹೆ ಪಡೆದರು.
ವಿಷ್ಣು ಸಮಾಜದ ಅಧ್ಯಕ್ಷ ಜವರ್‍ಲಾಲ್ ಬಾಟಿ, ಮಲ್ನಾಡ್ ಅಂಜನಾ ಪಟೇಲ್ ಸಮಾಜ ಟ್ರಸ್ಟ್‍ನ ಚಂದಾರಾಮ್ ಪಟೇಲ್, ವಿಷ್ಣು ಸಮಾಜದ ಪ್ರಮುಖರುಗಳಾದ ದಿನೇಶ್ ದಾಸ್ ವೈಷ್ಣವ್, ರಾಜೇಂದ್ರ ಸೀರ್ವಿ, ಸೃಜರಾಂ ಪಟೇಲ್, ಸಾವಲ್‍ರಾಂ ಪಟೇಲ್, ಕೇವಲ್‍ರಾಂ ಪಟೇಲ್, ನಾರಾಯಣರಾಂ, ಬಿಕಾರಾಂ, ಬೊಮ್ಮರಾಮ್ ಜಿ. ಜಾಟ್, ಓಕರಾಂಜಿ ಪಟೇಲ್, ಪೂಜಾರಿ ಕೇವಲ್ ದಾಸ್ ವೈಷ್ಣವ್. ಮೋಟರಾಂಜಿ ಪಟೇಲ್, ನರಪತ್ ಪಟೇಲ್ ಮುಂತಾದವರು ಉಪಸ್ಥಿತರಿದ್ದರು.