ಸಾರಾಂಶ
ಮಂಗಳೂರಿನ ದೈವದ ಹಾಗೂ ಅಲ್ಲಿನ ಸಂಸ್ಕೃತಿ ಬಗ್ಗೆ ಭಾರಿ ಕುತೂಹಲ ಕೆರಳಿಸಿರುವ, ಇಡೀ ಕುಟುಂಬ ಕುಳಿತು ವೀಕ್ಷಣೆ ಮಾಡುವ ಚಿತ್ರವಾಗಿರುವ "ಕಲ್ಜಿಗ " ಕನ್ನಡ ಚಲನಚಿತ್ರ ಮೊದಲ ದಿವಸ ಯಶಸ್ವಿ ಪ್ರದರ್ಶನ ಕಂಡಿದೆ. ನಗರದ ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಬಿಡುಗಡೆಗೊಂಡ ಕಲ್ಜಿಗ ಮೊದಲ ಪ್ರದರ್ಶನದ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಚ್.ಎಲ್. ಮಲ್ಲೇಶ್ ಗೌಡ ಅವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಮಂಗಳೂರಿನ ದೈವದ ಹಾಗೂ ಅಲ್ಲಿನ ಸಂಸ್ಕೃತಿ ಬಗ್ಗೆ ಭಾರಿ ಕುತೂಹಲ ಕೆರಳಿಸಿರುವ, ಇಡೀ ಕುಟುಂಬ ಕುಳಿತು ವೀಕ್ಷಣೆ ಮಾಡುವ ಚಿತ್ರವಾಗಿರುವ "ಕಲ್ಜಿಗ " ಕನ್ನಡ ಚಲನಚಿತ್ರ ಮೊದಲ ದಿವಸ ಯಶಸ್ವಿ ಪ್ರದರ್ಶನ ಕಂಡು ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಗೊಂಡಿತು ಎಂದರೇ ತಪ್ಪಾಗಲಾರದು.ನಗರದ ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಬಿಡುಗಡೆಗೊಂಡ ಕಲ್ಜಿಗ ಮೊದಲ ಪ್ರದರ್ಶನದ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಚ್.ಎಲ್. ಮಲ್ಲೇಶ್ ಗೌಡ ಅವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ಉದ್ದೇಶಿಸಿ ಮಾತನಾಡುತ್ತಾ, ಮಂಗಳೂರಿನ ದೇವರ ಕಥೆಯನ್ನಿಟ್ಟುಕೊಂಡು ಮತ್ತು ಜನರ ನಂಬಿಕೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಒಂದು ಚಿತ್ರವನ್ನು ನಿರ್ಮಿಸಿ ಈಗ ಬೆಳ್ಳಿ ತೆರೆಗೆ ತಂದಿದ್ದಾರೆ. ಹಾಸನ ಎಂದರೇ ಎಲ್ಲಾ ರಂಗದಲ್ಲಿ ಕ್ರಿಯಾಶೀಲವಾಗಿದೆ. ಅದರಲ್ಲೂ ಕಲಾ ರಂಗದಲ್ಲಿ ಹೆಚ್ಚಿನ ಆಸಕ್ತಿ ಇದೆ. ಕಲ್ಜಿಗ ಚಿತ್ರದ ನಿರ್ಮಾಪಕರಾಗಿರುವ ಶರತ್ ಕುಮಾರ್ ಕೂಡ ಹಾಸನದವರೇ ಆಗಿದ್ದು, ಚಲನಚಿತ್ರದ ಮೂಲಕ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎಂದರು. ದೇವರ ಮೇಲೆ ಇರುವ ನಂಬಿಕೆ ಉಳ್ಳ ಭಕ್ತ ಪ್ರಧಾನವಾದ ಚಿತ್ರವು ವೀಕ್ಷಣೆ ಮಾಡುವ ಪ್ರೇಕ್ಷಕರಿಗೆ ಯಾವ ಕೊರತೆ ಆಗದಂತೆಕೊನೆಯವರೆಗೂ ಕುತುಹಲದಲ್ಲಿ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಮನುಷ್ಯ ತನ್ನ ಆತ್ಮ ಶುದ್ಧೀಕರಣಕ್ಕಾಗಿ ಕಲೆಯ ಮೊರೆ ಹೋಗಬೇಕು ಎಂದು ಕಿವಿಮಾತು ಹೇಳಿದರು. ಈ ಸಿನಿಮಾದ ಮೂಲಕ ಚಿತ್ರದ ನಿರ್ಮಾಪಕ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡುತ್ತಾ, ಒಂದು ಚಲನಚಿತ್ರದ ನಿರ್ಮಾಪಕರಾಗುವುದು ಸುಲಭದ ಮಾತಲ್ಲ. ಕಲಾವಿದರನ್ನು ಕ್ರೋಢೀಕರಿಸಿ, ಚಿತ್ರೀಕರಿಸಿ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದು ಸಾಮಾನ್ಯದ ಮಾತಲ್ಲ. ಈ ಚಿತ್ರ ಎಲ್ಲರಿಗೂ ಯಶಸ್ಸು ತಂದು ಕೊಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಲ್ಜಿಗ ಕನ್ನಡ ಚಲನಚಿತ್ರದ ನಿರ್ಮಾಪಕ ಹಾಸನದವರೆಯಾದ ಶರತ್ ಕುಮಾರ್, ನಾಯಕ ನಟ ಅರ್ಜುನ್, ಚಿತ್ರದ ನಿರ್ದೇಶಕ ಸುಮಂತ್ ಸುಮನ್, ಲಿಖಿತ ರೈ ಕೂಡ ತಮ್ಮ ಚಿತ್ರದ ಬಗ್ಗೆ ಕೆಲ ಸಮಯ ಮಾತನಾಡಿ ಪ್ರೇಕ್ಷಕರ ಮನ ಸೆಳೆದರು. ಈ ಸಂದರ್ಭದಲ್ಲಿ ಈ ಹಿಂದೆ ನಾಯಕ ನಟನಾಗಿ ನಟಿಸಿ ಗಮನ ಸೆಳೆದಿದ್ದ ಹಿರಿಯ ಪತ್ರಕರ್ತ ಬನವಾಸೆ ಮಂಜು, ಪಿಕ್ಚರ್ ಪ್ಯಾಲೇಸ್‌ನಲ್ಲಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಅರಸು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ, ಮಾಜಿ ಅಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ್, ವೆಂಕಟೇಶ್, ಹಿರಿಯ ಸಾಹಿತಿ ಅನಂತ ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.