ಕರಾವಳಿಯಲ್ಲಿ ಧ್ಯಾನ, ಪ್ರಾರ್ಥನೆಯೊಂದಿಗೆ ಗುಡ್‌ ಫ್ರೈಡೇ ಆಚರಣೆ

| Published : Mar 30 2024, 12:45 AM IST

ಸಾರಾಂಶ

ಸಮಾಜದ ನಾನಾ 10 ವಿಚಾರಗಳ ಕುರಿತು ವಿಶೇಷ ಪ್ರಾರ್ಥನೆ ಸಾಗಿತು. ಇದರ ಜತೆಯಲ್ಲಿ ಶಿಲುಬೆಗೆ ನಮನ, ಶಿಲುಬೆಯ ಆರಾಧನೆಯ ಕಾರ್ಯಕ್ರಮಗಳು ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯ ಚರ್ಚ್‌ಗಳಲ್ಲಿ ಕ್ರೈಸ್ತರು ಪವಿತ್ರ ದಿನವಾದ ಶುಭ ಶುಕ್ರವಾರ ಧ್ಯಾನ, ಪ್ರಾರ್ಥನೆಯೊಂದಿಗೆ ಗುಡ್‌ ಫ್ರೈಡೇ ಆಚರಿಸಿದರು. ಎಲ್ಲ ಚರ್ಚ್‍ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ಧಾರ್ಮಿಕ ವಿಧಿಗಳು ನಡೆಯಿತು. ಮಂಗಳೂರಿನ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನಗರದ ಕೊಡಿಯಾಲ್ ಬೈಲ್‍ನ ಚಾಪೆಲ್‍ನಲ್ಲಿ ನಡೆದ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.

ಕೆಲವು ಚರ್ಚ್‍ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸಲಾಯಿತು. ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥಿಸಿದರು. ಸಂಜೆ ಚರ್ಚ್‍ಗಳಲ್ಲಿ ನಡೆದ ಪ್ರಾರ್ಥನಾ ವಿಧಿಗಳಲ್ಲಿ ಬೈಬಲ್ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತರ ಕೊನೆಯ ಗಳಿಗೆಗಳ ಕಥನವನ್ನು ಓದಿದರು. ಬಳಿಕ ಪ್ರವಚನ ನೀಡಿದರು. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ, ಶಿಲುಬೆಯ ಆರಾಧನೆ ಕಾರ್ಯಕ್ರಮ ನಡೆಯಿತು.

ಸಮಾಜದ ನಾನಾ 10 ವಿಚಾರಗಳ ಕುರಿತು ವಿಶೇಷ ಪ್ರಾರ್ಥನೆ ಸಾಗಿತು. ಇದರ ಜತೆಯಲ್ಲಿ ಶಿಲುಬೆಗೆ ನಮನ, ಶಿಲುಬೆಯ ಆರಾಧನೆಯ ಕಾರ್ಯಕ್ರಮಗಳು ನೆರವೇರಿತು.