ಯಲಬುರ್ಗಾ: ಪಂಚಭೂತಗಳಲ್ಲಿ ನೀರು ಪ್ರಮುಖವಾಗಿದೆ. ಪ್ರತಿಯೊಬ್ಬರೂ ಶುದ್ಧ ನೀರು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ವಿಠ್ಠಲ ಪೂಜಾರ ಹೇಳಿದರು.

ತಾಲೂಕಿನ ಬೇವೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 620ನೇ ಶುದ್ಧಗಂಗಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ನೀರಿಲ್ಲದೆ ಜೀವನ ನಡೆಸುವುದು ಕಷ್ಟ. ಗ್ರಾಮದ ನಿವಾಸಿಗಳು ಶುದ್ಧಗಂಗಾ ಘಟಕದ ನೀರನ್ನು ಬಳಸಬೇಕು. ಈ ಘಟಕ ನಮ್ಮೆಲ್ಲರ ಆಸ್ತಿಯಾಗಿದ್ದು, ಅದನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಗ್ರಾಪಂ ಪಿಡಿಒ ಅಬ್ದುಲ್ ಗಫರ್ ಮಾತನಾಡಿ, ಶುದ್ಧ ನೀರು ಸೇವನೆ ನಮ್ಮೆಲ್ಲರ ಆದ್ಯ ಕರ್ತವ್ಯ. ಅಶುದ್ಧ ನೀರಿನ ಸೇವನೆಯಿಂದ ಹಲವಾರು ಕಾಯಿಲೆ ಉಂಟಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಶುದ್ಧಗಂಗಾ ಘಟಕದ ನೀರನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮಕ್ಕೂ ಮುಂಚೆ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು.

ಮುಖಂಡ ಶಂಕರಗೌಡ ಪೊಲೀಸ್ ಪಾಟೀಲ್ ಮಾತನಾಡಿದರು. ಈ ಸಂದರ್ಭ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಗಣೇಶ ಎನ್., ವಲಯ ಮೇಲ್ವಿಚಾರಕಿ ಹೇಮಲತಾ, ಸೇವಾ ಪ್ರತಿನಿಧಿ ಸಂಗೀತ, ರೇಖಾ, ರೇಖಾ ಜಿ., ಶುದ್ಧಗಂಗಾ ಮೇಲ್ವಿಚಾರಕ ಶಿವಾನಂದ ಅಕ್ಕಿ ಹಾಗೂ ಗ್ರಾಮಸ್ಥರು, ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.