ನಿತ್ಯ ಸೈಕಲ್ ಬಳಕೆಯಿಂದ ಉತ್ತಮ ಆರೋಗ್ಯ

| Published : Sep 01 2025, 01:03 AM IST

ಸಾರಾಂಶ

ನಿತ್ಯ ಯೋಗ, ಧ್ಯಾನದ ಜೊತೆಗೆ ಬೈಸಿಕಲ್ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ವಿದ್ಯಾರ್ಥಿಗಳು, ಯುವಜನತೆ ಓದಿನ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೈಕಲ್ ಬಳಕೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠಲ್ ರಾವ್ ಹೇಳಿದ್ದಾರೆ.

- ಬೈಸಿಕಲ್ ರ‍್ಯಾಲಿಗೆ ಚಾಲನೆ ನೀಡಿ ಜಿಪಂ ಸಿಇಒ ಗಿಟ್ಟೆ ಮಾಧವ ವಿಠಲ್ ರಾವ್ । ಕೆ.ಎಸ್. ಮಹೇಶ್‌ಗೆ ಸನ್ಮಾನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ನಿತ್ಯ ಯೋಗ, ಧ್ಯಾನದ ಜೊತೆಗೆ ಬೈಸಿಕಲ್ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ವಿದ್ಯಾರ್ಥಿಗಳು, ಯುವಜನತೆ ಓದಿನ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೈಕಲ್ ಬಳಕೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠಲ್ ರಾವ್ ಹೇಳಿದರು.

ವಿಶ್ವ ಬೈಸಿಕಲ್ ದಿನಾಚರಣೆ ಹಾಗೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಭಾನುವಾರ ಬೆಳಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಬೈಸಿಕಲ್ ಕ್ಲಬ್ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಿಂದ ನಡೆದ ಬೈಸಿಕಲ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸೈಕಲ್ ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯ ತಡೆಯಬಹುದಾಗಿದೆ. ಇಂದಿನ ಸೈಕಲ್ ರ‍್ಯಾಲಿಯಲ್ಲಿ ನಮ್ಮ ದಾವಣಗೆರೆಯ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರು ಭಾಗವಹಿಸಬೇಕಾಗಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭ ಯುವಜನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ, ಬೈಸಿಕಲ್ ಕ್ಲಬ್ ಕಾರ್ಯದರ್ಶಿ ಕೆ.ಎಸ್.ಮಹೇಶ, ಸದಸ್ಯರಾದ ಡಾ. ಎಲ್.ಎಸ್. ಪಾಟೀಲ್, ಡಾ.ರಾಘವೇಂದ್ರ, ಅರುಣ, ವೀರೇಶ, ಸಂತೋಷ, ನಾಗರಾಜ, ಶಶಾಂಕ, ನಂದು, ಸಂಚಾರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಖೋ ಖೋ ತರಬೇತುದಾರರಾದ ರಾಮಲಿಂಗಪ್ಪ, ಸುನೀತಾ, ಹಿಮಾಲಯನ್ ಅಡ್ವೆಂಚರ್ ನೇಚರ್ ಅಕಾಡೆಮಿ ಕಾರ್ಯದರ್ಶಿ ಎನ್.ಕೆ. ಕೊಟ್ರೇಶ, ಚಂದ್ರಮೌಳಿ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ 1 ಲಕ್ಷ ಕಿಲೋಮೀಟರ್ ಸೈಕಲ್ ಸವಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ದಾವಣಗೆರೆ ಬೈಸಿಕಲ್ ಕ್ಲಬ್ ಕಾರ್ಯದರ್ಶಿ ಕೆ.ಎಸ್. ಮಹೇಶ್ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ರ‍್ಯಾಲಿಯು ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡು ವಿದ್ಯಾರ್ಥಿ ಭವನ, ಡಾ.ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಗಾಂಧಿ ಸರ್ಕಲ್, ಪಿ.ಬಿ.ರಸ್ತೆ ಮೂಲಕ ಮಹಾನಗರ ಪಾಲಿಕೆ, ಅರುಣ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಎಸ್.ನಿಜಲಿಂಗಪ್ಪ ಬಡಾವಣೆಯ ಮೇಜರ್ ಕರ್ನಲ್ ರವಿಂದ್ರನಾಥ ಸರ್ಕಲ್, ಲಕ್ಷ್ಮೀ ಫ್ಲೋರ್ ಮಿಲ್, ಗುಂಡಿ ಮಹಾದೇವಪ್ಪ ಸರ್ಕಲ್ ಮುಖಾಂತರ ಜಿಲ್ಲಾ ಕ್ರೀಡಾಂಗಣ ತಲುಪಿತು.

- - -

-31ಕೆಡಿವಿಜಿ31:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಬೈಸಿಕಲ್‌ ರ್ಯಾಲಿಗೆ ಜಿಪಂ ಸಿಇಒ ಗಿಟ್ಟೆ ಮಾಧವ ವಿಠಲ್‌ ರಾವ್‌ ಚಾಲನೆ ನೀಡಿ, ರ್ಯಾಲಿಯಲ್ಲಿ ಪಾಲ್ಗೊಂಡರು.