ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬದುಕಿನಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಚಿಕ್ಕಸ್ವಾಮಿ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಚಿಕ್ಕಸ್ವಾಮಿಯವರು ಶಿಕ್ಷಣ ಕ್ಷೇತ್ರಕ್ಕೆ ಸೀಮಿತವಾಗದೇ ಹತ್ತು ಹಲವು ಹವ್ಯಾಸಗಳನ್ನು ರೂಢಿಸಿಕೊಂಡು ಲೇಖಕರಾಗಿ, ಕವಿಯಾಗಿ, ಪರಿಸರವಾದಿಯಾಗಿ ಜೊತೆಗೆ ಲಯನ್ಸ್ ಸಂಸ್ಥೆ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಾ ಉತ್ತಮ ಆರೋಗ್ಯವನ್ನು ಉಳಿಸಿಕೊಂಡಿದ್ದಾರೆ ಎಂದರು.ಚಿಕ್ಕಸ್ವಾಮಿ ಅವರದು ರೋಚಕ ಬದುಕು. ಅವರು ಸುಮ್ಮನೇ ಕೂತವರಲ್ಲ. ಮತ್ತೆ ಮತ್ತೆ ಪರೀಕ್ಷೆ ಬರೆದರು. ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಾ ಜಿಲ್ಲಾ ಉದ್ಯೋಗ ಅಧಿಕಾರಿಯಾಗಬೇಕಿದ್ದರೂ ಶಿಕ್ಷಣ ಇಲಾಖೆಯ ಮೇಲೆ ಬಹಳ ಪ್ರೀತಿ ಇಟ್ಟುಕೊಂಡು ಮತ್ತೆ ಕೆಇಎಸ್ ಪರೀಕ್ಷೆ ಬರೆದು ಶಿಕ್ಷಣಾಧಿಕಾರಿಯಾದರು ಎಂದು ತಿಳಿಸಿದರು.
ಏನಾದರೂ ಸಾಧಿಸಬೇಕು ಎಂಬ ಛಲ ಚಿಕ್ಕಸ್ವಾಮಿ ಅವರಲ್ಲಿತ್ತು. ತಮ್ಮ ನಿರಂತರ ಚಟುವಟಿಕೆಗಳ ಮೂಲಕ ತಮ್ಮ ವ್ಯಕ್ತಿತ್ವ ಗಟ್ಟಿ ಮಾಡಿಕೊಂಡು ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. 33 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸಾರ್ಥಕ ಜೀವನ ನಡೆಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಬೀಳ್ಕೊಡುಗೆ ನೀಡುತ್ತಿರುವುದು ಅಭಿನಂದನೀಯ ಎಂದರು.ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ರೈತ ಕುಟುಂಬದ ಗ್ರಾಮಾಂತರ ಪ್ರದೇಶದಿಂದ ಬಂದು ತಾವು ಮಾಡಿದ ಸಾಧನೆ, ಕೊಟ್ಟಂತ ಸೇವೆ ಅಪಾರವಾಗಿದೆ. ಸಮಾಜಮುಖಿಯಾಗಿ ದೊಡ್ಡ ವ್ಯಕ್ತಿತ್ವ ಬೆಳೆಸಿಕೊಂಡು ಕೊಡುಗೆ ನೀಡಿದ್ದೀರಿ. ಸಾಮಾಜಿಕ ಸಂಘ- ಸಂಸ್ಥೆಗಳಲ್ಲಿ ನಿಮ್ಮ ಸೇವೆ ನಿರಂತರವಾಗಿಲಿ ಎಂದು ಹಾರೈಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಮಕ್ಕಳ ಜೊತೆ ಕಾಲ ಕಳೆಯುವುದು ಶ್ರೇಷ್ಠ ಕೆಲಸ. ಶಿಕ್ಷಣ ಕ್ಷೇತ್ರವನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕು. ಚಿಕ್ಕಸ್ವಾಮಿಯವರು ಆಡಳಿತ ಸೇವೆಯ ಹುದ್ದೆ ತಿರಸ್ಕರಿಸಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇರಿ ಶಿಕ್ಷಣ ಕ್ಷೇತ್ರವನ್ನು ಅಪ್ಪಿಕೊಂಡರು ಎಂದರು.ಡಿವಿಜಿಯವರ ‘ಧಾರುಣಿಯ ನಡಿಗೆಯಲಿ ಮೇರುವಿನ ಗುರಿ ಇರಲಿ’ ಎಂಬಂತೆ ಇನ್ನೂ ಎತ್ತರಕ್ಕೆ ಹೋಗುವ ಛಲದಿಂದ ಅದಕ್ಕೆ ಪೂರಕವಾದ ಕೆಲಸ ಮಾಡಿ ಶಿಕ್ಷಕ ಕ್ಷೇತ್ರದಲ್ಲೇ ಶಿಕ್ಷಣಾಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಅಬಕಾರಿ ಇಲಾಖೆ ಜಂಟಿ ಆಯುಕ್ತ ಎ.ಎಲ್. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನೆ ಸ್ವೀಕರಿಸಿ ನಿವೃತ್ತ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಕೃತಜ್ಞತಾ ನುಡಿಗಳನ್ನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ಶ್ವೇತಾ ಹಾಗೂ ಅಭಿನಂದನಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.