ಕಡೂರುರೈತರು ಕೃಷಿ ಜೊತೆಗೆ ಉಪ ವೃತ್ತಿಯಾಗಿರುವ ಜೇನು ಸಾಕಾಣೆಕೆ ಮಾಡುವುದರಿಂದ ರೈತರು ಉತ್ತಮ ಆದಾಯ ಗಳಿಸಲು ಸಹಕಾರಿಯಾಗಲಿದೆ ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಲ್.ರುದ್ರೇಗೌಡ ತಿಳಿಸಿದರು.

ರುದ್ರೇಗೌಡ ಅಭಿಪ್ರಾಯ । ವಿಶ್ವ ಜೇನು ದಿನ । ಕೃಷಿಯಲ್ಲಿ ಜೇನು ಪಾತ್ರ ಬಗ್ಗೆ ವಿಚಾರ ಸಂಕಿರಣಕನ್ನಡಪ್ರಭ ವಾರ್ತೆ ಕಡೂರು

ರೈತರು ಕೃಷಿ ಜೊತೆಗೆ ಉಪ ವೃತ್ತಿಯಾಗಿರುವ ಜೇನು ಸಾಕಾಣೆಕೆ ಮಾಡುವುದರಿಂದ ರೈತರು ಉತ್ತಮ ಆದಾಯ ಗಳಿಸಲು ಸಹಕಾರಿಯಾಗಲಿದೆ ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಲ್.ರುದ್ರೇಗೌಡ ತಿಳಿಸಿದರು.

ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ವಿಶ್ವ ಜೇನು ದಿನದ ಅಂಗವಾಗಿ ಸಾವಯವ ಕೃಷಿಯಲ್ಲಿ ಜೇನಿನ ಪಾತ್ರದ ಕುರಿತು ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಕೃಷಿ ಬದುಕಿನೊಂದಿಗೆ ಉಪ ಕಸುಬಾಗಿರುವ ಜೇನು ಕೃಷಿಯಲ್ಲಿ ಹೆಚ್ಚಿನ ಅಸಕ್ತಿ ವಹಿಸಿದರೆ ಕೃಷಿಯಲ್ಲಿ ಸಾಕಷ್ಟು ಇಳುವರಿ ಪಡೆಯಬಹುದು ಎಂದು ಹೇಳಿದರು.

ಇದಕ್ಕೆ ಇಲಾಖೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ರೈತರೊಂದಿಗೆ ಮುಕ್ತ ಸಂವಾದದಲ್ಲಿ ಕಾಲ ಕಾಲಕ್ಕೆ ವಿಚಾರ ಸಂಕಿರಣ ನಡೆಸಿದರೆ ರೈತರಿಗೆ ಹೆಚ್ಚು ವರದಾನವಾಗಲಿದೆ. ಜೇನು ಕೃಷಿ ಮಾನವ ಸಂಕುಲಕ್ಕೆ ಪ್ರಕೃತಿ ದತ್ತ ಕೊಡುಗೆ ನೀಡಿದೆ. ದೈನಂದಿನ ಬದುಕಿನಲ್ಲಿ ಜೇನಿನ ಬಳಕೆ ಮತ್ತು ಅದರ ಮಹತ್ವ ಹೆಚ್ಚಾಗುತ್ತಿದೆ ಎಂದರು.

ಹಿರಿಯ ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶಕ ಎಚ್.ಕೆ.ಜಯದೇವಪ್ಪ ಮಾತನಾಡಿ, ರೈತರು ರಸಗೊಬ್ಬರ ಗಳನ್ನು ಅತಿಯಾಗಿ ಬಳಕೆ ಮಾಡುವುದನ್ನು ಬಿಟ್ಟು ಸಮತೋಲಿತ ಬಳಕೆಗೆ ಆದ್ಯತೆ ನೀಡಬೇಕು. ಅದರಲ್ಲೂ ಸಾವಯುವ ಗೊಬ್ಬರ ಬಳಕೆಗೆ ಪ್ರಾಮುಖ್ಯತೆ ನೀಡಬೇಕಿದೆ. ಬೇಸಾಯಕ್ಕೂ ಮೊದಲು ತಮ್ಮ ಜಮೀನಿನ ಮಣ್ಣಿನ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ತಪ್ಪದೇ ಮಣ್ಣಿನ ಪರೀಕ್ಷೆ ಮಾಡಿಸುವುದು ಅನಿವಾರ್ಯ. ಇದರಿಂದ ಯಾವ ಪೋಷಕಾಂಶದ ಗೊಬ್ಬರ ಬಳಸಬೇಕೆಂದು ತಿಳಿಯುತ್ತದೆ ಎಂದರು.

ಬಯಲುಸೀಮೆ ಪ್ರದೇಶದಲ್ಲಿರುವ ತೆಂಗಿಗೆ ಕಪ್ಪು ತಲೆ ಹುಳು ಬಾಧೆ ನಿಯಂತ್ರಿಸಲು ಸಾಕಷ್ಟು ಪರಿಹಾರ ಮಾರ್ಗಗಳಿವೆ ಅವುಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ರೋಗ ಬಾಧೆ ಹತೋಟಿಗೆ ತರಲು ಸಾಧ್ಯವಿದೆ. ಇದಕ್ಕೆ ಇಲಾಖೆ ಮೂಲಕ ಪರಿಪೂರ್ಣ ಮಾಹಿತಿ ಒದಗಿಸಲಾಗುವುದು ಎಂದರು.

ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ್ ಮಾತನಾಡಿ, ಜೇನು ಕೃಷಿಯಲ್ಲಿ ಬೆರಳೆಣಿಕೆಯಷ್ಟು ಜನರು ತೊಡಗಿಸಿ ಕೊಂಡಿದ್ದಾರೆ. ರೈತರು ಜೇನುಕೃಷಿ ಮಾಡಲು ಹೆಚ್ಚು ಆಸಕ್ತಿಯಿಂದ ಮುಂದೆ ಬರಬೇಕು. ಭೂಮಿ ಮೇಲೆ ಜೇನಿನ ಸಂತತಿ ಇಲ್ಲದೇ ಹೋದರೆ ಇಡೀ ಮನು ಕುಲವೇ ನಾಶವಾಗುತ್ತದೆ. ನಿಸರ್ಗ ಮಡಿಲಿನ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ್, ರೈತ ವರ್ಗದವರು ಭಾಗವಹಿಸಿದ್ದರು.27ಕೆಕೆಡಿಯು2: ಕಡೂರಿನ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ವಿಶ್ವ ಜೇನು ದಿನದ ಅಂಗವಾಗಿ ಸಾವಯುವ ಕೃಷಿಯಲ್ಲಿ ಜೇನಿನ ಪಾತ್ರದ ಕುರಿತು ವಿಚಾರ ಸಂಕಿರಣ ನಡೆಯಿತು.