ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿದ್ಯಾರ್ಥಿ ದಿಸೆಯಿಂದಲೇ ಕಠಿಣ ಪರಿಶ್ರಮದ ಮೂಲಕ ಉತ್ತಮ ಜ್ಞಾನ ಪಡೆದರೆ ಭವಿಷ್ಯದಲ್ಲಿ ಯಶಸ್ವಿ ಜೀವನ ನಡೆಸಬಹುದು ಎಂದು ರಾಜ್ಯ ಪತ್ರಗಾರ ಇಲಾಖೆ ನಿರ್ದೇಶಕ ಗವಿಸಿದ್ದಯ್ಯ ತಿಳಿಸಿದರು.ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ನಡೆದ 2025- 26ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ, ಡಾ.ಎ.ಪಿ.ಜೆ. ಅಬ್ದಲ್ ಕಲಾಂ ಸೇರಿದಂತೆ ಅನೇಕರು ತಮ್ಮ ಕಷ್ಟದ ಜೀವನದಲ್ಲೂ ಕಠಿಣ ಪರಿಶ್ರಮದೊಂದಿಗೆ ಓದಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ಹಲವು ಮಹಾನ್ ವ್ಯಕ್ತಿಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಬಾಲ್ಯದಿಂದಲೇ ಉನ್ನತ ಸ್ಥಾನಕ್ಕೇರುವ ಗುರಿ ಹೊಂದಬೇಕು. ಎಲ್ಲರಲ್ಲೂ ಸಾಧನೆ ಮಾಡಲು ಛಲವಿದೆ. ಆದರೆ, ಅದಕ್ಕೆ ಶಿಕ್ಷಣ ಎಂಬ ನೆರವು ಅಗತ್ಯ ಎಂದು ಹೇಳಿದರು.ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಪ್ರಸ್ತುತ ಶಾಲಾ ಕಾಲೇಜು ವಿದ್ಯಾರ್ಥಿಗಳು ಓದಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು. ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ನಾನಾ ವಿಷಯಗಳಿವೆ. ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿಕೊಂಡು ಜ್ಞಾನ ಹಾಗೂ ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ಜ್ಞಾನ ದೇಗುಲದಲ್ಲಿ ವಿದ್ಯೆಯನ್ನು ಪಡೆಯಬೇಕಾದರೆ ಹೇಗೆ ಇರಬೇಕು ಎನ್ನುವುದನ್ನು ಕಲಿತುಕೊಳ್ಳಬೇಕು ಎಂದರು.
ಜೀವನದಲ್ಲಿ ಯಾವುದು ಕೂಡ ಅಸಾಧ್ಯವಲ್ಲ, ಸಾಧನೆಯನ್ನು ಮಾಡಿದರೆ ಮಾತ್ರ ನೀವು ಅಂದುಕೊಂಡಂತೆ ಆಗಬಹುದು. ಇಲ್ಲಿನ ಉತ್ತಮ ಉಪನ್ಯಾಸಕ ವರ್ಗದಿಂದ ಗುಣಮಟ್ಟದ ಫಲಿತಾಂಶ ಬರುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಒಳ್ಳೆಯ ಹೆಸರು ತರಲು ಮುಂದಾಗಬೇಕು ಎಂದರು.ಹಿರಿಯ ಉಪನ್ಯಾಸಕ ಎಚ್.ವಿ.ನಿಂಗರಾಜು ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಶ್ರಮದ ಫಲದಿಂದ ಉತ್ತಮ ಕಟ್ಟಡ ನಿರ್ಮಾಣವಾಗಿ ವಿದ್ಯಾರ್ಥಿಗಳ ಬದುಕಿಗೆ ಕಾಲೇಜು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪಿ.ಕಾವೇರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದೊಡ್ಡಯ್ಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪುರಸಭೆ ಸದಸ್ಯ ಎಂ.ಎನ್.ಶಿವಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಆರ್.ಪರಶಿವಮೂರ್ತಿ, ಶಿವಲಿಂಗು, ಉಪನ್ಯಾಸಕರಾದ ಮಲ್ಲಿಕಾರ್ಜುನಸ್ವಾಮಿ, ಬಸವರಾಜು, ಶಿವಣ್ಣ, ಹರೀಶ್, ಸೌಭಾಗ್ಯ, ನಾಗರತ್ನ, ದೇವಿಕಾ, ಪ್ರೌಢಶಾಲೆ ಮುಖ್ಯಶಿಕ್ಷಕ ಕುಮಾರಸ್ವಾಮಿ ಪಾಲ್ಗೊಂಡಿದ್ದರು.