ಸಾರಾಂಶ
ದಿ. ಗೋವಿಂದರಾವ್ ವಿಶ್ವನಾಥರಾವ್ ದೇಶಪಾಂಡೆ ಮತ್ತು ಗೋಪಿಕಾಬಾಯಿ ಗೋವಿಂದರಾವ್ ದೇಶಪಾಂಡೆ ಶಿಕ್ಷಣ ಟ್ರಸ್ಟ್ ಮೂಲಕ ಜಿಎಸ್‌ಬಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಶಿಷ್ಯವೇತನ ವಿತರಣಾ ಕಾರ್ಯಕ್ರಮ ನಡೆಯಿತು.
ಹಳಿಯಾಳ: ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಚಾರಿತ್ರ್ಯ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ದೇವರ ಹಾಗೂ ಹಿರಿಯರ ಬಗೆ ಭಯ, ಭಕ್ತಿ ಗೌರವದ ಭಾವನೆ ಬೆಳೆಯುವಂತಾಗಲಿ ಎಂದು ವಿಆರ್‌ಡಿಎಂ ಟ್ರಸ್ಟ್ ಧರ್ಮದರ್ಶಿ ರಾಧಾ ಆರ್. ದೇಶಪಾಂಡೆ ತಿಳಿಸಿದರು.
ಪಟ್ಟಣದ ತುಳಜಾಭವಾನಿ ದೇವಸ್ಥಾನದಲ್ಲಿ ಆಯೋಜಿಸಿದ್ದ ದಿ. ಗೋವಿಂದರಾವ್ ವಿಶ್ವನಾಥರಾವ್ ದೇಶಪಾಂಡೆ ಮತ್ತು ಗೋಪಿಕಾಬಾಯಿ ಗೋವಿಂದರಾವ್ ದೇಶಪಾಂಡೆ ಶಿಕ್ಷಣ ಟ್ರಸ್ಟ್ ಮೂಲಕ ಜಿಎಸ್‌ಬಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಶಿಷ್ಯವೇತನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಜಿಎಸ್‌ಬಿ ಸಮಾಜದ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಸದುದ್ದೇಶದಿಂದ ನಮ್ಮ ಕುಟುಂಬದ ಹಿರಿಯರು ಹಾಗೂ ಆರ್.ವಿ. ದೇಶಪಾಂಡೆಯವರ ಅಜ್ಜಿಯವರಾದ ಗೋಪಿಕಾಬಾಯಿಯವರು 66 ವರ್ಷಗಳ ಹಿಂದೆಯೇ ಶಿಷ್ಯವೇತನ ವಿತರಿಸುವ ಯೋಜನೆಗೆ ಮುಂದಾಗಿರುವುದು ಇದೊಂದು ಮಾದರಿ ಹೆಜ್ಜೆಯಾಗಿದೆ ಎಂದರು.
ಆರು ದಶಕಗಳ ಹಿಂದೆಯೇ ಅವರಿಗೆ ಶಿಷ್ಯವೇತನ ವಿತರಿಸುವ ಕಲ್ಪನೆ ಬಂದಿದೆ. ಅಂದರೆ ಅವರಲ್ಲಿರುವ ಸಹಾಯ ಮಾಡುವ ಮನಸ್ಸು, ತುಡಿತವನ್ನು ಕಲ್ಪಿಸಲು ಅಸಾಧ್ಯವಾಗಿದೆ ಎಂದರು. ಆಧುನಿಕ ಜಗತ್ತು ಬುದ್ಧಿಮತ್ತೆಯ ಹಾಗೂ ಕೌಶಲ್ಯಗಳ ಯುಗವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ಬುದ್ಧಿಮತ್ತೆ, ಜಾಣ್ಮೆ, ಕೌಶಲ್ಯ ಇದ್ದವರು ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.ಡಾ. ಸುನಿಧಿ ಎಸ್. ಬೆಂಡೆ ಮಾತನಾಡಿ, ನನ್ನ ವಿದ್ಯಾರ್ಥಿ ಜೀವನದಲ್ಲಿ ದಿ. ಗೋವಿಂದರಾವ್ ವಿಶ್ವನಾಥರಾವ್ ದೇಶಪಾಂಡೆ ಮತ್ತು ಗೋಪಿಕಾಬಾಯಿ ಗೋವಿಂದರಾವ್ ದೇಶಪಾಂಡೆ ಶಿಕ್ಷಣ ಟ್ರಸ್ಟ್ ನೀಡುವ ವಿದ್ಯಾರ್ಥಿವೇತನದ ಫಲಾನುಭವಿಯಾಗಿದ್ದು, ಈ ವಿದ್ಯಾರ್ಥಿ ವೇತನವನ್ನು ಸದುಪಯೋಗಪಡೆದುಕೊಂಡಿದ್ದು, ವಿದ್ಯಾರ್ಥಿಗಳು ಸಹ ಈ ವೇತನದ ಸದುಪಯೋಗಪಡಿಸಿಕೊಂಡು, ವಿದ್ಯಾರ್ಜನೆಯ ಸಮಯದಲ್ಲಿ ಸಹಾಯ, ಸಹಕಾರ ನೀಡಿದವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದರು.ತಾಲೂಕು ಜಿಎಸ್‌ಬಿ ಸಮಾಜದ ಅಧ್ಯಕ್ಷ ನಿತೀನ ದೇಶಪಾಂಡೆ ಮಾತನಾಡಿ, ಶ್ರದ್ಧೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸನ್ನು ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಜಿಎಸ್‌ಬಿ ಸಮಾಜದ 40 ವಿದ್ಯಾರ್ಥಿಗಳಿಗೆ ₹54500 ವಿದ್ಯಾರ್ಥಿವೇತನ ವಿತರಿಸಲಾಯಿತು. ಜಿಎಸ್‌ಬಿ ಸಮಾಜದ ಮುಖಂಡರಾದ ಉದಯ ಮಾನಗೆ, ಸುರೇಶ ಮಾನಗೆ, ದಿಲೀಪ ಫಡ್ನೀಸ್ ಉಪಸ್ಥಿತರಿದ್ದರು. ವಿಆರ್‌ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಎಲ್. ಪ್ರಭು ನಿರೂಪಿಸಿದರು.