ಸಾರಾಂಶ
ಜಗಜೀವನ ರಾಂ ಜನ್ಮದಿನ
ಕನ್ನಡಪ್ರಭ ವಾರ್ತೆ ಅರಸೀಕೆರೆಡಾ.ಬಾಬು ಜಗಜೀವನ ರಾಂ ಹಸಿರು ಕ್ರಾಂತಿಯ ಹರಿಕಾರ, ದಲಿತರ ಮೇಲಿನ ದೌರ್ಜನ್ಯ ತಡೆಯಲು ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ಅವರ ಮೌಲ್ಯಧಾರಿತ ಜೀವನ ಶೈಲಿ, ಅವರ ಆದರ್ಶ ಗುಣಗಳು ಇತರರಿಗೂ ಅನುಕರಣೀಯವಾಗಿದೆ. ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ರುಕಿಯಾ ಬೇಗಂ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಡಾ.ಬಾಬು ಜಗಜೀವನ ರಾಂ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತ ಜನಾಂಗಕ್ಕೆ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ಜಗಜೀವನ ರಾಂ ಹಾಗೂ ಡಾ.ಅಂಬೇಡ್ಕರ್ ತಮ್ಮ ಹೋರಾಟದ ಮೂಲಕ ತಮ್ಮದೇ ಆದ ಸಿದ್ಧಾಂತಗಳನ್ನು ಬಿಟ್ಟುಹೋಗಿದ್ದಾರೆ ಎಂದು ಹೇಳಿದರು.ಇಂದಿರಾ ಗಾಂಧಿಯವರ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದಾಗ ಈ ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರದ ಪರಿಸ್ಥಿತಿ ಎದುರಾಗಿದ್ದು ಅಂತಹ ಸಂದರ್ಭದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಾನ ವ್ಯವಸಾಯ ಪದ್ಧತಿಯನ್ನು ಅನುಷ್ಠಾನಕ್ಕೆ ತಂದು ಹಸಿರು ಕ್ರಾಂತಿಯ ಹರಿಕಾರರೆಂದು ಹೆಸರಾದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಅಧಿಕಾರ ತ್ಯಾಗ ಮಾಡಿ ಜೈಲು ಸೇರಿದರು. ಮೊರಾರ್ಜಿ ದೇಸಾಯಿ ಸಚಿವ ಸಂಪುಟದಲ್ಲಿ ಉಪ ಪ್ರಧಾನಿಯಾಗಿ ಈ ದೇಶದ ಉನ್ನತ ಹುದ್ದೆಯನ್ನೇರಿದರು ಎಂದರು.
ಇದಕ್ಕೂ ಮುನ್ನ ಗಣ್ಯರು ಹಾಗೂ ದಲಿತ ಮುಖಂಡರು ಜಗಜೀವನ ರಾಂರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.ಸಮಾಜ ಕಲ್ಯಾಣಾಧಿಕಾರಿ ಪರಶಿವಮೂರ್ತಿ, ಗ್ರೇಡ್ ೨ ತಹಸೀಲ್ದಾರ್ ಪಾಲಾಕ್ಷ, ಜಿಲ್ಲಾ ಕಾಂಗ್ರೆಸ್ ನ್ಯಾಯ ಸಮಿತಿಯ ಅಧ್ಯಕ್ಷ ವೆಂಕಟೇಶ್, ತಾಲೂಕ್ ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ದಲಿತ ಮುಖಂಡರಾದ ಎ.ಪಿ.ಚಂದ್ರಯ್ಯ, ಬಾಣಾವರ ವೆಂಕಟೇಶ್, ಕೆ.ಆನಂದ್, ವಸಂತ್ ಕುಮಾರ್, ಗೋವಿಂದರಾಜ್, ನರಸಿಂಹಮೂರ್ತಿ, ನಾಗವೇದಿ ಕರಿಯಪ್ಪ, ಮಲ್ದೇವರಹಳ್ಳಿ ಮಂಜು, ಇದ್ದರು.
ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಡಾ. ಬಾಬು ಜಗಜೀವನ ರಾಂರವರ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ತಹಸೀಲ್ದಾರ್ ರುಕಿಯಾ ಬೇಗಂ ಮಾತನಾಡಿದರು.