ಸಾರಾಂಶ
ಜಿಲ್ಲೆಯ ಹಲವೆಡೆ ವರುಣನ ಸಿಂಚನ । ರೈತರ ಮೊಗದಲ್ಲಿ ಮಂದಹಾಸ । ಆಲೂಗಡ್ಡೆ, ಮುಸುಕಿನ ಜೋಳ, ತಂಬಾಕು ನಾಟಿ ಬಿರುಸು
ಕನ್ನಡಪ್ರಭ ವಾರ್ತೆ ಹಾಸನಕಳೆದ ಬಾರಿ ಕೈಕೊಟ್ಟಿದ್ದ ಮುಂಗಾರು ಈ ಬಾರಿ ಉತ್ತಮವಾಗಿ ಆಗುತ್ತಿದ್ದು, ರೈತರ ಮೊಗದಲ್ಲಿ ನಗು ತಂದಿದೆ. ವಾಡಿಕೆ ಪ್ರಕಾರ ಮಾರ್ಚ್ ಅಂತ್ಯ ಹಾಗೂ ಏಪ್ರಿಲ್‌ನಲ್ಲಿ ಬರಬೇಕಾದ ಮಳೆಗಳು ಕೈಕೊಟ್ಟರೂ ಸಹ ಮೇ ಹಾಗೂ ಜೂನ್‌ನಲ್ಲಿ ಆಗುತ್ತಿರುವ ಉತ್ತಮ ಮಳೆಗೆ ರೈತ ಸಮುದಾಯ ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದೆ.
ಈಗಾಗಲೇ ಜಿಲ್ಲೆಯ ಬಹುಪಾಲು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಅದರಲ್ಲೂ ಅರಸೀಕೆರೆ ತಾಲೂಕಿನ ಪೂರ್ವ ಭಾಗಗಳನ್ನು ಹೊರತುಪಡಿಸಿ ಚನ್ನರಾಯಪಟ್ಟಣ, ಹಾಸನ, ಹೊಳೆರನಸೀಪುರ, ಅರಕಲಗೂಡು, ಬೇಲೂರು, ಸಕಲೇಶಪುರ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಆಲೂಗಡ್ಡೆ ಹಾಗೂ ಮುಸುಕಿನ ಜೋಳ ಬಿತ್ತನೆಗೆ ಕೊಂಚ ತಡವಾದರೂ ಕೂಡ ಇದೀಗ ಬಿದ್ದಿರುವ ಹದ ಮಳೆಗೆ ರೈತರು ಆರುರಾತುರವಾಗಿ ಬಿತ್ತನೆ ಮಾಡುತ್ತಿದ್ದಾರೆ. ಈಗಾಗಲೇ ಆಲೂರು, ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲೂಕುಗಳಲ್ಲಿ ಆಲೂಗಡ್ಡೆ ಹಾಗೂ ಮುಸುಕಿನ ಜೋಳದ ಬಿತ್ತನೆ ಭರದಿಂದ ಸಾಗಿದೆ. ರಾಮನಾಥಪುರ ಹೋಬಳಿಯಲ್ಲಿ ತಂಬಾಕು ಸಸಿಗಳ ನಾಟಿ ಕಾರ್ಯ ಕೂಡ ಜೋರಾಗಿದೆ.ದಶಕದ ಹಿಂದೆ ಆಲೂಗಡ್ಡೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಆದರೆ, ಆನಂತರದಿಂದ ಈವರೆಗೆ ಶುಂಠಿ ಬೆಳೆ ಆ ಸ್ಥಾನವನ್ನು ಆವರಿಸಿಕೊಂಡಿದೆ. ಹಾಗಾಗಿ ರೈತ ಸಮುದಾಯ ಶುಂಠಿಯತ್ತ ಗಮನ ಕೊಟ್ಟಿದ್ದು, ಶುಂಠಿ ಬೆಳೆಯ ಆರೈಕೆಯಲ್ಲಿ ತೊಡಗಿದೆ.
ಕೃಷಿ ಇಲಾಖೆ ಸಲಹೆಗಳು:ಹಾಸನ ಜಿಲ್ಲೆಯಲ್ಲಿ ಮುಸುಕಿನ ಜೋಳ, ರಾಗಿ, ಭತ್ತ, ಕಡಲೆ, ಅಲಸಂದೆ ಬೆಳೆಗಳನ್ನು ಮುಂಗಾರು ಹಂಗಾಮಿನಲ್ಲಿ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಬೆಳೆ ಪದ್ಧತಿ ಕ್ರಮಗಳನ್ನು ಆಧರಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ ಎಂದು ಕೃಷಿ ಇಲಾಖೆ ತಿಳಿಸಿದೆ.
ಮುಸುಕಿನ ಜೋಳವನ್ನು ಸುಮಾರು ೧.೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುತ್ತಿದ್ದು, ೧೨೫ ರಿಂದ ೧೩೦ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಮೊದಲಿಗೆ ೨-೩ ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸಿ ನಂತರ ರಸಗೊಬ್ಬರಗಳಾದ ಸಾರಜನಕ ಮತ್ತು ರಂಜಕಗಳನ್ನು ಎಕರೆಗೆ ೫೦ ಕೆಜಿ ಮತ್ತು ೨೫ ಕೆಜಿಗಳಂತೆ ಮಣ್ಣಿಗೆ ಸೇರಿಸಬೇಕು. ಬಿತ್ತನೆ ಬೀಜವನ್ನು ಟ್ರೈಕೊಡರ್ಮಾದಿಂದ (೪-೬ ಗ್ರಾಂ/ಕೆಜಿ) ಬೀಜೋಪಚಾರ ಮಾಡಿ ಬಿತ್ತುವುದರಿಂದ ವಿವಿಧ ರೋಗಗಳನ್ನು ತಡೆಗಟ್ಟಬಹುದು. ತೇವಾಂಶ ಕೊರತೆ ಮತ್ತು ಅತಿ ಬಿಸಿಲು ಇದ್ದಾಗ, ಬೆಳೆಯ ಆರಂಭದಲ್ಲಿ ಕಾಂಡಕೊರಕದ ಬಾಧೆ ಕಾಣಿಸುವುದು. ಇದರಿಂದ ಬೆಳೆಯ ಸುಳಿ ಒಣಗುತ್ತದೆ. ಈ ಬಾಧೆ ತಡೆಯಲು ಬಿತ್ತುವ ಮೊದಲು ಪ್ರತಿ ಕೆಜಿ ಬೀಜಕ್ಕೆ ೩ ಮಿಲಿಯಂತೆ ಕ್ಲೋರೋಫೈರಿಫಾಸ್ ಕೀಟನಾಶಕದಿಂದ ಲೇಪನ ಮಾಡಿ ಬಿತ್ತಬೇಕು. ಉತ್ತಮವಾಗಿ ಕಾಳು ಕಟ್ಟಲು ಸತುವಿನ ಸಲ್ವೇಟ್ ಅನ್ನು ಎಕರೆಗೆ ೫ ಕೆ.ಜಿ. ಯಂತೆ ಉಪಯೋಗಿಸಬೇಕು.ಭತ್ತದಲ್ಲಿ ಬೆಂಕಿರೋಗ ತಡೆಗಟ್ಟಲು, ಕಾರ್ಬನ್ ಡೈಜಿಂ ಅನ್ನು ೪ ಗ್ರಾಂ/ ಕಿಲೋ ಬಿತ್ತನೆ ಬೀಜಕ್ಕೆ ಬೆರೆಸಿ ಬಿತ್ತಬೇಕು. ರಾಗಿಯಲ್ಲಿ ಬುಡಕೊಳೆ ರೋಗ ತಡೆಗಟ್ಟಲು, ಟಕೋಡರ್ಮಾ ವನ್ನು ೪ ಗ್ರಾಂ/ ಕಿಲೋ ಬಿತ್ತನೆ ಬೀಜಕ್ಕೆ ಬೆರೆಸಿ ಬಿತ್ತಬೇಕು. ಅಲಸಂದೆ ಬಿತ್ತನೆ ಮಾಡುವವರು ಪ್ರತೀ ಕಿಲೋ ಬಿತ್ತನೆ ಬೀಜಕ್ಕೆ ೨೦೦ ಗ್ರಾಂ ರೈಜೋಬಿಯಮ್ ಜೀವಾಣುವಿನಿಂದ ಬೀಜೋಪಚಾರ ಮಾಡಬೇಕು. ಶಿಫಾರಸು ಮಾಡಿದ ಪ್ರಮಾಣದಲ್ಲಿ ಜಿಪ್ಸಂ, ಜಿಂಕ್ ಮತ್ತು ಬೋರಾನ್ ಲಘುಪೋಷಕಾಂಶಗಳನ್ನು ಬಳಕೆ ಮಾಡುವುದರಿಂದ ಇಳುವರಿ ಉತ್ತಮಗೊಳ್ಳುವುದು.ಅಲಸಂದೆ ಸಾಲು ಬಿತ್ತನೆ ಮಾಡುವುದರಿಂದ ಸುಲಭವಾಗಿ ಕಳೆ ನಿಯಂತ್ರಿಸಲು ಸಹಕಾರಿಯಾಗುತ್ತದೆ. ಸಾಲುಗಳ ನಡುವೆ ಕುಂಟೆ ಹೊಡೆದು ದಿಂಡು ಏರಿಸಿದಾಗ ತೇವಾಂಶ ಕಾಪಾಡಿಕೊಳ್ಳಲು ಸಹಕಾರಿಯಾಗುವುದು. ಉತ್ತಮವಾಗಿ ಗಾಳಿ ಆಡುವಿಕೆಯಿಂದ ಕೀಟ ಬಾಧೆ ಕಡಿಮೆಯಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.