ಸಾರಾಂಶ
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹಲವು ಕಡೆಗಳಲ್ಲಿ ಸೋಮವಾರ ಅಪರಾಹ್ನ ಉತ್ತಮ ಮಳೆಯಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹಲವು ಕಡೆಗಳಲ್ಲಿ ಸೋಮವಾರ ಅಪರಾಹ್ನ ಉತ್ತಮ ಮಳೆಯಾಗಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.ತಾಲೂಕಿನ ಬೆಸಗೂರು, ನಾಲ್ಕೇರಿ, ತಿತಿಮತಿ, ಬೀರುಗ, ತಾವಳಗೇರಿ, ಬಾಡಗರಕೇರಿ, ಕಾನೂರು, ಕೋತೂರು, ಕೊಟಗೇರಿ, ಬೆಕ್ಕೆಸೊಡ್ಲೂರು, ಶ್ರೀಮಂಗಲ, ಬೇಗೂರು, ಮಾಪಿಳ್ಳೆತೋಡು, ಕುಮಟೂರು, ಬಾಳೆಲೆ, ನಲ್ಲೂರು ಸೇರಿದಂತೆ ಹಲವು ಕಡೆಯಲ್ಲಿ ಮಳೆಯಾಗಿದೆ.
ಕಾಫಿ ಹೂವು ಅರಳಲು ಮಳೆ ಅತಿ ಅವಶ್ಯಕವಾಗಿದ್ದು, ಮಳೆಯಿಂದಾಗಿ ಪೊನ್ನಂಪೇಟೆ ಭಾಗದ ಹಲವು ರೈತರಲ್ಲಿ ಸಂತಸ ಮನೆ ಮಾಡಿದೆ.ಪೊನ್ನಂಪೇಟೆಯ ಹಲವು ಕಡೆ ಮಳೆಯಾಗಿದ್ದು, ಕಾಫಿ ತೋಟಗಳಿಗೆ ಈ ಅವಧಿಯಲ್ಲಿ ಸಿಕ್ಕಿರುವ ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಅನುಕೂಲವಾಗಿದೆ. ಮುಂಬರುವ ಎರಡು ದಿನಗಳಲ್ಲಿಯೂ ಮಳೆ ನಿರೀಕ್ಷಿಸಬಹುದಾಗಿದ್ದು, ಕಾಫಿ ಬೆಳೆಗಾರರ ಖರ್ಚು ವೆಚ್ಚಗಳು ಅಲ್ಪ ಪ್ರಮಾಣದಲ್ಲಿ ತಗ್ಗಬಹುದೆಂದು ಗೊಣಿಕೊಪ್ಪ ಕಾಫಿ ಮಂಡಳಿಯ ಸಂಪರ್ಕಧಿಕಾರಿ ಡಾ. ಮುಖಾರೀಬ್ ಹರ್ಷ ವ್ಯಕ್ತಪಡಿಸಿದ್ದಾರೆ.