ಉತ್ತಮ ಮಳೆ: ಸುರಪುರದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

| Published : May 19 2024, 01:50 AM IST

ಸಾರಾಂಶ

ಪ್ರಸ್ತುತ ಸಾಲಿನ ಆರಂಭದಲ್ಲೇ ವರುಣ ಕೃಪೆ ತೋರಿದ್ದರಿಂದ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ವಾಡಿಕೆಗಿಂತ 119 ಮಿಮೀ ಮಳೆ ಹೆಚ್ಚಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ಪ್ರಸ್ತುತ ಸಾಲಿನ ಆರಂಭದಲ್ಲೇ ವರುಣ ಕೃಪೆ ತೋರಿದ್ದರಿಂದ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ವಾಡಿಕೆಗಿಂತ 119 ಮಿಮೀ ಮಳೆ ಹೆಚ್ಚಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಹವಾಮಾನ ಇಲಾಖೆಯೂ ಏಪ್ರಿಲ್ ಕೊನೆಯ ವಾರದಿಂದಲೇ ಮಳೆ ಸಂಭವ ಎಂಬುದಾಗಿ ವರದಿ ನೀಡಿತ್ತು. ಮೇನಲ್ಲೂ ಉತ್ತಮ ಮಳೆಯಾಗುತ್ತದೆ ಎಂಬುದನ್ನು ಈ ಮೊದಲೇ ತಿಳಿಸಿತ್ತು. ಅದರಂತೆ ನಿಗಿನಿಗಿ ಕೆಂಡದಂತ ಬಿಸಿಲಿಗೆ ಬಸವಳಿದಿದ್ದ ಜನತೆ ಕಳೆದ ಕೆಲ ದಿನಗಳಿಂದ ಸಂಜೆಯಾಗುತ್ತಲೇ ವರುಣ ಧರೆಗೆ ಇಳಿಯುತ್ತಿದ್ದಾನೆ. ಕಾದು ಕಬ್ಬಿಣವಾಗಿದ್ದ ಇಳೆಯೂ ತಂಪಾಗುತ್ತಿದೆ. ಇದರಿಂದ ರೈತರು ಕೈಗೆ ಕೆಲಸವಿಲ್ಲದೆ ಕುಳಿತಿದ್ದ ರೈತರು ರೆಕ್ಕೆಗಳನ್ನು ಅಗಲಿಸಿಕೊಂಡಿದ್ದು, ತಮ್ಮ ಕೃಷಿಯ ಉಪಕರಣಗಳನ್ನು ದುರಸ್ತಿಯಲ್ಲಿ ತೊಡಗಿದ್ದಾರೆ.

ಉತ್ತಮ ಮಳೆ: ಮುಂಗಾರು ಸಾಧಾರಣ (ವಾಡಿಕೆ) ಮಳೆಗಿಂತ ಈ ಬಾರಿ ಹೆಚ್ಚಾಗಿದೆ. ಜನವರಿ ತಿಂಗಳ ಮೊದಲ ವಾರದಿಂದ ಮೇ 15ರವರೆಗೆ ವಾರದವರೆಗೆ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ವಾಡಿಕೆ ಮಳೆ 109.2 ಮಿಮೀ ಮಳೆಯಾಗಬೇಕಿತ್ತು. 137.1 ಮಿ.ಮೀ. ಅಂದರೆ 28 ಮೀಮೀ ಅಧಿಕವಾಗಿದೆ.

ಬಿತ್ತನೆ ಕ್ಷೇತ್ರ: ಅವಳಿ ತಾಲೂಕಿನಲ್ಲಿ ಕೃಷಿ ಭೂಮಿ 1,44,790.2 ಹೆಕ್ಟೇರನಲ್ಲಿ 1,43,845 ಹೆಕ್ಟೇರನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಸುರಪುರ ತಾಲೂಕಿನಲ್ಲಿ ನೀರಾವರಿ- 61,304 ಹೆಕ್ಟೇರ್, ಖುಷ್ಕಿ-30,557 ಹೆಕ್ಟೇರ್, ಹುಣಸಗಿ ತಾಲೂಕಿನಲ್ಲಿ ನೀರಾವರಿ-46,497, ಹೆಕ್ಟೇರ್, ಖುಷ್ಕಿ 17,010 ಹೆಕ್ಟೇರ್ ಬಿತ್ತನೆ ಕ್ಷೇತ್ರ ಗುರುತಿಸಲಾಗಿದೆ.

ಮುಂಗಾರು ಬಿತ್ತನೆ ಗುರಿ: ತೊಗರಿ-57,400 ಹೆಕ್ಟೇರ್, ಹತ್ತಿ 24,500 ಹೆಕ್ಟೇರ್, ಸಜ್ಜೆ-6600 ಹೆಕ್ಟೇರ್, ಹೆಸರು-300 ಹೆಕ್ಟೇರ್, ಭತ್ತ-55,145 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.

ಬಿತ್ತನೆ ಬೀಜ ಬೇಡಿಕೆ: ತೊಗರಿ-550 ಕ್ವಿಂಟಲ್, ಹೆಸರು-50 ಕ್ವಿಂಟಲ್, ಸಜ್ಜೆ-20 ಕ್ವಿಂಟಲ್, ಸೂರ್ಯಕಾಂತಿ-10 ಕ್ವಿಂಟಲ್ ದಾಸ್ತಾನಿಗೆ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಇನ್ನೊಂದು ವಾರದೊಳಗೆ ರೈತ ಸಂಪರ್ಕ ಕೇಂದ್ರಗಳಿಗೆ ರವಾನಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಗೊಬ್ಬರದ ಗುರಿ: ಪ್ರಸಕ್ತ ಸಾಲಿಗೆ 31,000 ಮೆಟ್ರಿಕ್ ಟನ್ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಡಿಎಪಿ-6833, ಎಂಒಪಿ-1.185, ಯೂರಿಯಾ-13435, ಎನ್‌ಪಿಕೆ-10,317, ಎಸ್‌ಎಸ್‌ಪಿ-86 ಮೆ.ಟನ್ ಬೇಡಿಕೆ ಇಡಲಾಗಿದೆ.

ಮರಳಿ ತವರಿಗೆ: ಅವಳಿ ತಾಲೂಕಿನಲ್ಲಿ ಮಳೆಯಾಗುತ್ತಿದ್ದರೂ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಅರಸಿ ನಗರಗಳತ್ತ ಹೋದವರು ಮರಳಿ ಗ್ರಾಮಗಳಿಗೆ ಬಂದಿಲ್ಲ. ಇದರಿಂದ ಮಳೆ ಬಂದಿರುವ ವಿಚಾರ ತಿಳಿದಿದ್ದು, ಮೇ ತಿಂಗಳ ಕೊನೆಯ ತವರಿಗೆ ಮರಳ ಬಹುದು ಎಂಬುದಾಗಿ ವಾಗಣಗೇರಾದ ಹಿರಿಯ ರೈತ ಬೈಲಪ್ಪಗೌಡ ತಿಳಿಸಿದ್ದಾರೆ.

ವಾಡಿಕೆ ಮಳೆ: ಸುರಪುರ ಹೋಬಳಿಯಲ್ಲಿ ವಾಡಿಕೆ ಮಳೆ 44.9 ಮಿಮೀ ಆಗಬೇಕಿದ್ದು, 53.6 ಮಳೆ ಅಂದರೆ 19 ಮಿ.ಮೀ. ಮಳೆ ಹೆಚ್ಚಾಗಿದೆ. ಕಕ್ಕೇರಾ ಹೋಬಳಿಯಲ್ಲಿ ವಾಡಿಕೆ ಮಳೆ 37.7 ಮಿಮೀ ಮಳೆ ಆಗಬೇಕಿದ್ದು, 44.674ಮಿಮೀ, ಹೆಚ್ಚು-18 ಮಿಮೀ ಆಗಿದೆ. ಕೆಂಭಾವಿ ಹೋಬಳಿಯಲ್ಲಿ 36.8 ಮಿಮೀ ವಾಡಿಕೆ ಮಳೆ, 38.9 ಮಿಮೀ. ಆಗಿದ್ದು, 6 ಮಿಮೀ ಹೆಚ್ಚಾಗಿದೆ.

ಹುಣಸಗಿ: ಹುಣಸಗಿ ಹೋಬಳಿಯಲ್ಲಿ ವಾಡಿಕೆ ಮಳೆ 30.8 ಮಿಮೀ, ಆಗಿದ್ದು 27.0 ಮಳೆ, ಕೊರತೆ 12 ಮಿ.ಮೀ. ಆಗಿದೆ. ಕೊಡೇಕಲ್ ಹೋಬಳಿಯಲ್ಲಿ 40.2 ಮಿಮೀ ವಾಡಿಕೆ ಮಳೆ ಆಗಿದ್ದು 41.4 ಮಿಮೀ, ಹೆಚ್ಚಾಗಿದ್ದು, 3ಮಿಮೀ ಆಗಿದೆ. ಕಕ್ಕೇರಾ ಹೋಬಳಿಯಲ್ಲಿ 37.9ಮಿಮೀ ವಾಡಿಕೆ ಮಳೆ, ಆಗಿದ್ದು 45.3ಮಿಮೀ, ಹೆಚ್ಚಾಗಿ 19 ಮಿಮೀ ಆಗಿದೆ. ಹುಣಸಗಿಯಲ್ಲಿ 12 ಮಿ.ಮೀ. ಕಡಿಮೆಯಾದರೆ ಕಕ್ಕೇರಾ ಹೋಬಳಿಯಲ್ಲಿ 19 ಮಿ.ಮೀ. ಹೆಚ್ಚಾಗಿದೆ.ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. ಇದನ್ನು ಮೇ ಮೊದಲ ವಾರದಲ್ಲೇ ಮಳೆಯನ್ನು ಕಂಡಿದ್ದೇವೆ. ಈಗಾಗಲೇ ಭೂಮಿಯನ್ನು ಕೃಷಿಗೆ ಭೂಮಿಯನ್ನು ಹದಗೊಳಿಸುತ್ತಿದ್ದೇವೆ. ಇನ್ನೊಂದು 15 ದಿನ ಮಳೆ ಬಂದರೆ ಬಿತ್ತನೆ ಮಾಡುತ್ತೇವೆ.

- ವೆಂಕಟೇಶ ಕುಪಗಲ್, ರೈತ.

ರೈತರು ಪರವಾನಗಿ ಪಡೆದ ಅಂಗಡಿಗಳಲ್ಲೇ ಬಿತ್ತನೆ ಬೀಜಗಳನ್ನು ಖರೀದಿಸಬೇಕು. ಬಿಲ್‌ಗಳನ್ನು ಕಡ್ಡಾಯ ಪಡೆಯಬೇಕು. ಯಾವುದಾದರೂ ತೊಂದರೆ ಆದಲ್ಲಿ ಉಪಯೋಗಕ್ಕೆ ಬರುತ್ತವೆ. ಕಳಪೆ ಬೀಜ ಮಾರಾಟ ಮಾಡುವುದು ಕಂಡು ಕೃಷಿ ಇಲಾಖೆಗೆ ತಿಳಿಸಬೇಕು.

- ಭೀಮರಾಯ ಹವಾಲ್ದಾರ, ಕೃಷಿ ಸಹಾಯಕ ನಿರ್ದೇಶಕ, ಸುರಪುರ.