ಸಾರಾಂಶ
ಗಾಳಿಯ ರಭಸಕ್ಕೆ ಗುಡಿಸಲು, ಶೆಡ್‌ಗಳ ಛಾವಣಿಗಳು ಕಿತ್ತು ಹಾರಿ ಹೋಗಿವೆ. ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿ ತೆಂಗಿನಮರಕ್ಕೆ ಸಿಡಿಲು ಬಡಿದು ಮರ ಸುಟ್ಟು ಹೋಗಿದೆ.
ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ನಗರದಲ್ಲಿ ತಡರಾತ್ರಿ ಸುರಿದ ಮಳೆ ಹಾಗೂ ಬಿರುಗಾಳಿಯಿಂದ ಹತ್ತಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಗಾಳಿಯ ರಭಸಕ್ಕೆ ಗುಡಿಸಲು, ಶೆಡ್‌ಗಳ ಛಾವಣಿಗಳು ಕಿತ್ತು ಹಾರಿ ಹೋಗಿವೆ. ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿ ತೆಂಗಿನಮರಕ್ಕೆ ಸಿಡಿಲು ಬಡಿದು ಮರ ಸುಟ್ಟು ಹೋಗಿದೆ. ವಿಶಾಲನಗರ, ಕೌಲ್ ಬಜಾರ್, ರೇಡಿಯೋ ಪಾರ್ಕ್, ರೇಣುಕಾನಗರ, ಎಸ್.ಎನ್.ಪೇಟೆ ಮತ್ತಿತರ ಕಡೆಗಳಲ್ಲಿ ಮರಗಳು ನೆಲಕ್ಕುರುಳಿರುವ ದೃಶ್ಯಗಳು ಕಂಡು ಬಂದವು. ಮರದ ರೆಂಬೆ-ಕೊಂಬೆಗಳು ರಸ್ತೆಯಲ್ಲಿ ಬಿದ್ದು ಜನರ ಓಡಾಟಕ್ಕೆ ಅಡಚಣೆಯಾಗಿತ್ತು. ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸ ಸೋಮವಾರ ಬೆಳಿಗ್ಗೆ ಕಂಡು ಬಂತು. ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಸರಿಪಡಿಸಿದರು. ದುರಸ್ತಿ ಕಾರ್ಯ ನಡೆದಿದ್ದರಿಂದ ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸ್ಥಗಿತವಾಗಿತ್ತು.ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಜನರ ಪರದಾಟ ಕಂಡು ಬಂತು. ಮಳೆಯ ನೀರಿನಿಂದ ಕೆಲವೆಡೆ ದ್ವಿಚಕ್ರ ವಾಹನಗಳ ಓಡಾಟಕ್ಕೂ ಅಡ್ಡಿಯಾಯಿತು.
36 ಮಿ.ಮೀ. ಮಳೆ: ತಡರಾತ್ರಿ ಜಿಲ್ಲೆಯಲ್ಲಿ 36 ಮಿ.ಮೀ. ಮಳೆಯಾಗಿದೆ. ಬಳ್ಳಾರಿ ನಗರ ಸೇರಿದಂತೆ ತಾಲೂಕಿನಲ್ಲಿ 27.3 ಮಿ.ಮೀ. ಮಳೆಯಾದ ವರದಿಯಾಗಿದೆ. ಜಿಲ್ಲೆಯ ನಾನಾ ಕಡೆ ತಡರಾತ್ರಿ ಧಾರಾಕಾರ ಮಳೆ ಸುರಿದು ಗಣಿ ಜಿಲ್ಲೆಯನ್ನು ತಣ್ಣಗಾಗಿಸಿದೆ.ಗಾಳಿ-ಮಳೆಯಿಂದಾಗಿ ಜಿಲ್ಲೆಯ 15 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬಳ್ಳಾರಿ 9, ಸಂಡೂರು 5, ಕುರುಗೋಡಿನಲ್ಲಿ ಒಂದು ಮನೆಗೆ ಹಾನಿಯಾಗಿದೆ. ಮಳೆ ಶುರುಗೊಂಡ ಬಳಿಕ ಜಿಲ್ಲೆಯಲ್ಲಿ 35 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 15 ಮನೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲಾದ್ಯಂತ ಸುರಿದ ಮಳೆ: ಭಾನುವಾರ ರಾತ್ರಿ ಜಿಲ್ಲೆಯ ಪೈಕಿ ಸಂಡೂರು ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗಿದೆ. ಕಂಪ್ಲಿ ತಾಲೂಕಿನಲ್ಲಿ ಕಡಿಮೆ ಮಳೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸತತ ಮಳೆ ಸುರಿದು ಹೊಲಗದ್ದೆಗಳಲ್ಲಿ ನೀರು ಸಂಗ್ರಹಗೊಂಡಿದೆ. ಬಳ್ಳಾರಿ ತಾಲೂಕಿನ ಮೋಕಾ ಹೋಬಳಿಯಲ್ಲಿ ಅತಿಹೆಚ್ಚು ಮಳೆ ದಾಖಲಾಗಿದೆ. ಬಳ್ಳಾರಿ ತಾಲೂಕಿನಲ್ಲಿ 27.2 ಮಿ.ಮೀ. ಮಳೆಯಾಗಿದೆ. ಸಂಡೂರು 57.6 ಮಿ.ಮೀ., ಸಿರುಗುಪ್ಪ 25.9 ಮಿ.ಮೀ., ಕಂಪ್ಲಿ 23.5 ಮಿ.ಮೀ. ಹಾಗೂ ಕುರುಗೋಡು ತಾಲೂಕಿನಲ್ಲಿ 39 ಮಿ.ಮೀ. ಮಳೆಯಾಗಿದೆ. ಕಳೆದ ವಾರ ಸುರಿದ ಮಳೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಕ್ಕಿದೆ.ಬಿತ್ತನೆ ಕಾರ್ಯಕ್ಕಾಗಿ ರೈತರು ಹೊಲಗಳನ್ನು ಹದಗೊಳಿಸಿಕೊಂಡಿದ್ದರು. ರೈತ ಸಂಪರ್ಕ ಕೇಂದ್ರಗಳು ಹಾಗೂ ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜ ಖರೀದಿಸಿದ್ದ ರೈತರು ಮತ್ತೊಂದು ಮಳೆಗಾಗಿ ಎದುರು ನೋಡುತ್ತಿದ್ದರು.