ತಾಲೂಕಿನಾದ್ಯಂತ ಬಿತ್ತನೆಗೆ ಅಗತ್ಯಕ್ಕೆ ತಕ್ಕ ಮಳೆಯಾಗದ ಕಾರಣ ಕೃಷಿ ಚಟುವಟಿಕೆ ಸ್ಥಗಿತವಾಗಿದ್ದವು. ಕಳೆದ 15 ದಿನಗಳಿಂದ ಉತ್ತಮ ಮಳೆ ಆಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿ ಕೃಷಿ ಚಟುವಟಿಕೆಗೆ ಜೀವಕಳೆ ಬಂದಿದೆ.

ರೈತರ ಮೊಗದಲ್ಲಿ ಮಂದಹಾಸ । ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಶಂಕರ ಜಿ. ಜಾವೂರ

ಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನಾದ್ಯಂತ ಬಿತ್ತನೆಗೆ ಅಗತ್ಯಕ್ಕೆ ತಕ್ಕ ಮಳೆಯಾಗದ ಕಾರಣ ಕೃಷಿ ಚಟುವಟಿಕೆ ಸ್ಥಗಿತವಾಗಿದ್ದವು. ಕಳೆದ 15 ದಿನಗಳಿಂದ ಉತ್ತಮ ಮಳೆ ಆಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿ ಕೃಷಿ ಚಟುವಟಿಕೆಗೆ ಜೀವಕಳೆ ಬಂದಿದೆ.

ಆ. 1ರಿಂದ 9ರ ತನಕ 216.9 ಮಿಮೀ ವಾಡಿಕೆ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಈ ಅವಧಿಯಲ್ಲಿ 372.1 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದೆ.

ಈಗಾಗಲೇ ಸುಮಾರು 800ರಿಂದ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸದ್ಯ ಈಗ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಅಗೆ ಮಡಿ ಕಾರ್ಯ ನಡೆಯುತ್ತಿದೆ. ಇನ್ನು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಗೆ ಮಡಿ ಕಾರ್ಯ ಪ್ರಾರಂಭವಾಗಬೇಕಿದೆ. ಅದಕ್ಕೆ ರೈತರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ರೈತರು ಅಗೆ ಮಡಿ ಕಾರ್ಯ ಪ್ರಾರಂಭಿಸಿದ್ದಾರೆ.

ಇನ್ನೂ ಹಲವಾರು ರೈತರು ತಮ್ಮ ಜಮೀನಿನಲ್ಲಿ ಬತ್ತದ ಗದ್ದೆಗಳನ್ನು ಸ್ವಚ್ಛಗೊಳಿಸಿ ಬತ್ತದ ಅಗೆ ಮಡಿ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ.

ಇನ್ನೊಂದು 15 ದಿನದೊಳಗಾಗಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದ ಬತ್ತದ ಗದ್ದೆಯಲ್ಲಿ ಅಗೆ ಮಡಿ ಕಾರ್ಯ ಪ್ರಾರಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಕಳೆದ 15 ದಿನಗಳಿಂದ ತಾಲೂಕಿನಾದ್ಯಾಂತ ಎಡೆಬಿಡದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಜೀವಬಂದಂತಾಗಿದೆ. ಎಲ್ಲೆಡೆ ಗರಿಗೆದರಿದ ಅಗೆ ಮಡಿ ಕಾರ್ಯ ಒಳ್ಳೆಯ ಇಳುವರಿ ಪಡೆಯುವ ನಿರೀಕ್ಷೆಯಲ್ಲಿ ರೈತ ಸಮುದಾಯ ಆಶಾಭಾವನೆ ಹೊಂದಿದೆ.

ಪ್ರತಿವರ್ಷ ಶಿರಸಿ ಸೇರಿದಂತೆ ತಾಲೂಕಿನ ಪೂರ್ವಭಾಗದ ಬನವಾಸಿ ವ್ಯಾಪ್ತಿಯ ಗ್ರಾಮಗಳಾದ ಬಾಳಂಜೆ, ಹೊಸಕೊಪ್ಪ, ಕುಪಗಡ್ಡೆ, ವದ್ದಲಾ, ಸಂತೋಳ್ಳಿ, ಅಂಡಗಿ, ಬಾಶಿಮೂಗವಳ್ಳಿ, ಬನವಾಸಿ, ದಾಸನಕೊಪ್ಪ, ದನಗನಹಳ್ಳಿ‌, ಗುಡ್ನಾಪುರ, ಸುಗಾವಿ, ಮುಂತಾದ ಗ್ರಾಮಾಂತರ ಪ್ರದೇಶದಲ್ಲಿ ಬತ್ತದ ಅಗೆ ಮಾಡಿ ಅದನ್ನು ಗದ್ದೆಗೆ ನಾಟಿ ಮಾಡುವ ಕಾರ್ಯ ಈಗ ಬರದಿಂದ ಸಾಗಿದೆ.

ವಾಡಿಕೆಯಂತೆ ಜುಲೈ ತಿಂಗಳಲ್ಲಿ ಬತ್ತದ ಅಗೆ ಮಡಿ ಕಾರ್ಯ ಚುರುಕಿನಿಂದ ಸಾಗುತ್ತಿತ್ತು. ಆದರೆ, ಈ ವರ್ಷ ಮಳೆಯ ಕೊರತೆಯಿಂದ ಅಗೆ ಮಡಿ ಕಾರ್ಯಕ್ಕೆ ಕೊಂಚ ಹಿನ್ನಡೆಯಾಗಿದೆ. ಇಷ್ಟೊತ್ತಿಗಾಗಿ ಸುಮಾರು 7 ಸಾವಿರ ಹೆಕ್ಟೇ‌ರ್ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಳಿಸಲಾಗುತ್ತಿತ್ತು. ಈಗ ಇನ್ನುಳಿದ ಶೇ. 70ರಿಂದ 80 ಹೆಕ್ಟೇರ್ ಭೂಮಿಯಲ್ಲಿ ಅಗೆ ಮಡಿ ಮಾಡುವುದಕ್ಕೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕಾಗಿ‌ ರೈತರು ರಸಗೊಬ್ಬರಗಳನ್ನು ಖರೀದಿ ಮಾಡುವ ಭರಾಟೆಯಲ್ಲಿದ್ದಾರೆ.

ರೈತರಿಗೆ ಕೃಷಿ ಚಟುವಟಿಕೆಗೆ ಬೇಕಾದ ರಸಗೊಬ್ಬರ ಪೂರೈಕೆ ಮಾಡುವುದಕ್ಕೆ ಕೃಷಿ ಇಲಾಖೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಮ್ಮಲ್ಲಿ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಲಭ್ಯವಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.