ಸಾರಾಂಶ
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಸರ್ಕಾರಿ ಶಾಲೆಗಳೆಂದರೆ ಸಾಕು ಮೂಗು ಮುರಿಯುವವರ ಸಂಖ್ಯೆಯೇ ಹೆಚ್ಚು. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಖಾಸಗಿ ಶಾಲೆಗಳಲ್ಲಿ ಓದಿಸಲಾಗದ ಪರಿಸ್ಥಿತಿ ಇದ್ದರೂ ಅನೇಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಅಸ್ತು ಎಂದಿದೆ. ಇದಕ್ಕೆ ಜಿಲ್ಲೆಯಲ್ಲೂ ಸಕ್ಕತ್ ರೆಸ್ಪಾನ್ಸ್ ಸಿಕ್ಕಿದೆ.
ಭವಿಷ್ಯದಲ್ಲಿ ನಮ್ಮ ಮಕ್ಕಳು ಚೆನ್ನಾಗಿ ಓದಬೇಕು. ಮುಂದೆ ದೊಡ್ಡ ನೌಕರಿ ಹಿಡಿಯಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಬಯಕೆ. ಇದಕ್ಕಾಗಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಹಿನ್ನೆಲೆ ಅದೆಷ್ಟೋ ಪೋಷಕರು ಪೂರ್ವ ಶಾಲಾ ತರಗತಿಗಳಾದ ಎಲ್‌ಕೆಜಿ-ಯುಜಿಕೆಗೆ ಲಕ್ಞಾಂತರ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ಎಲ್‌ಕೆಜಿ, ಯುಕೆಜಿಗೆ ಲಕ್ಷಾಂತರ ಹಣವನ್ನೂ ಪೀಕುತ್ತಿವೆ.ಹೀಗಾಗಿ ಸರ್ಕಾರಿ ಶಾಲೆಗಳಲ್ಲೇ ಎಲ್‌ಕೆಜಿ-ಯುಕೆಜಿ ಆರಂಭಿಸಬೇಕು ಎಂಬ ಕೂಗು ಎಲ್ಲಡೆ ಜೋರಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿಯನ್ನು ಆರಂಭಿಸಿದೆ. ಇದಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆಯೇ ದೊರಕಿದೆ.
ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಪಿಎಂಶ್ರೀ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿಗೆ ಮಕ್ಕಳ ದಾಖಲೆ ಸಂಖ್ಯೆ ನಿಧಾನವಾಗಿ ಹೆಚ್ಚತೊಡಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಏನಿದೆ ಜಿಲ್ಲೆಯ ಸ್ಥಿತಿಗತಿ?:ಸರ್ಕಾರಿ ಶಾಲೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳು ಏಕಕಾಲಕ್ಕೆ ವಿದ್ಯಾರ್ಥಿಗಳ ತೀವ್ರ ಕೊರತೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ಎದುರಿಸುತ್ತಿರುವ ಸಂದರ್ಭದಲ್ಲಿ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಎಲ್‌ಕೆಜಿ-ಯುಕೆಜಿಯನ್ನು ಆರಂಭಿಸಿದೆ.
ನಾಲ್ಕು ವರ್ಷದ ಹಿಂದೆ ಕರ್ನಾಟಕ ಪಬ್ಲಿಕ್ ಶಾಲೆ, ಎರಡು ವರ್ಷದಿಂದ ಪಿಎಂಶ್ರೀ ಶಾಲೆ ಹಾಗೂ ಕೆಲ ವರ್ಷಗಳಿಂದ ಕೆಲವೊಂದು ಎಸ್ಡಿಎಂಸಿ ಮೂಲಕ ನಿರ್ವಹಿಸುತ್ತಿರುವ ಎಲ್‌ಕೆಜಿ-ಯುಕೆಜಿಯ ಸಾಲಿಗೆ ಇದೀಗ ಹೊಸದಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಗೊಂಡಿದೆ.2023-24ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 8 ಸರ್ಕಾರಿ ಎಲ್‌ಕೆಜಿ-ಯುಕೆಜಿ ಮಂಜೂರಾಗಿತ್ತು. ಇದೀಗ 2024-25ನೇ ಸಾಲಿಗೆ ಮತ್ತೆ ಹೊಸದಾಗಿ 5 ಶಾಲೆಗಳು ಮಂಜೂರಾಗಿದ್ದು, ಈಗಾಗಲೇ ಕಾರ್ಯಾರಂಭ ಮಾಡಿವೆ. ಇದರ ಪರಿಣಾಮವಾಗಿ ಹೊಸನಗರ ತಾಲೂಕಿನಲ್ಲಿ ಮೂರು, ಶಿಕಾರಿಪುರ, ಭದ್ರಾವತಿ, ಸಾಗರ, ಶಿವಮೊಗ್ಗ ಮತ್ತು ಸೊರಬ ತಾಲೂಕಿನಲ್ಲಿ ತಲಾ ಎರಡು ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ತಲಾ ಒಂದು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 14 ಸರ್ಕಾರಿ ಶಾಲೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.
ಪೂರ್ವ ಪ್ರಾಥಮಿಕ ಅಂದರೆ ಇಸಿಸಿಇ(ಅರ್ಲಿ ಚೈಲ್ಡ್ ಕೇರ್ ಎಜುಕೇಷನ್) ಎಂದು ಕರೆಯಲಾಗುವ ಈ ಎಲ್‌ಕೆಜಿ-ಯುಕೆಜಿಗೆ ಸರಾಸರಿ 15 ರಿಂದ 30 ಮಕ್ಕಳು ದಾಖಲಾಗಿದ್ದಾರೆ. ಅಂದರೆ 14 ಶಾಲೆಗಳಲ್ಲಿ ಸುಮಾರು 200 ರಿಂದ 300 ಚಿಣ್ಣರು ತರಗತಿಗೆ ಹಾಜರಾಗುತ್ತಿದ್ದಾರೆ.ಇನ್ನು ಖಾಸಗಿ ವ್ಯವಸ್ಥೆಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಇಸಿಸಿಇ ಅಡಿ ನುರಿತ ಬೋಧಕ ವರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪಿಯುಸಿ, ಪೂರ್ವ ಪ್ರಾಥಮಿಕ ತರಬೇತಿ ಹಾಗೂ ಡಿ ಎಡ್ ಅರ್ಹತೆ ಹೊಂದಿರುವ ಮಹಿಳೆಯರನ್ನು ಬೋಧಕ ಹಾಗೂ ಎಸ್ಸೆಸ್ಸೆಲ್ಸಿ ಪೂರೈಸಿರುವ ಮಹಿಳೆಗೆ ಆಯಾ ಹುದ್ದೆಗೆ ಗೌರವ ಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದ್ದು ಬಹುತೇಕ ಕಡೆ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ.ಕಲಿಕಾ ವಾತಾವರಣ:
ಇನ್ನು ಮಕ್ಕಳನ್ನು ಆಕರ್ಷಿಸಲು ಖಾಸಗಿಯವರು ಅನುಸರಿಸುವಷ್ಟೇ ರೀತಿಯಲ್ಲೇ ಸರ್ಕಾರಿ ಶಾಲೆಯಲ್ಲೂ ಕಲಿಕಾ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳನ್ನು ಸೆಳೆಯಲಾಗುತ್ತಿದೆ. ಎಲ್‌ಕೆಜಿ-ಯುಕೆಜಿಗೆ ನೂತನ ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ. ಕನ್ನಡದ ಜೊತೆಗೆ ಇಂಗ್ಲೀಷ್, ಗಣಿತ, ಸೋಷಿಯಲ್ ಸೈನ್ಸ್ ಸೇರಿದಂತೆ ರಚನಾತ್ಮಕ ಚಟುವಟಿಕೆಗೂ ಆದ್ಯತೆ ನೀಡಲಾಗಿದೆ. ಕೆಲವೆಡೆ ಮಕ್ಕಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಆಯಾ ಎಸ್ಡಿಎಂಸಿ ವತಿಯಿಂದ ಕಲ್ಪಿಸಲಾಗಿದೆ. ಇದು ನಗರ ಮತ್ತು ಗ್ರಾಮೀಣ ಭಾಗದ ಮಧ್ಯಮ ಹಾಗೂ ಬಡ ಕುಟುಂಬದ ಹಿನ್ನೆಲೆಯ ಪೋಷಕರ ಮನಗೆದ್ದಿದೆ.ಸಾವಿರಾರು ರೂಪಾಯಿ ಕೊಟ್ಟು ಮಕ್ಕಳನ್ನು ಖಾಸಗಿಯ ವ್ಯವಸ್ಥೆಯ ಎಲ್‌ಕೆಜಿ-ಯುಕೆಜಿಗೆ ಸೇರಿಸಬೇಕಾದ ಪರಿಸ್ಥಿತಿ ಇರುವಾಗ ದುಬಾರಿ ಖರ್ಚಿಲ್ಲದ ಹಾಗೂ ಖಾಸಗಿಯಷ್ಟೇ ಸಮರ್ಥವಾಗಿರುವ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಸೇರಿಸುವುದಕ್ಕೆ ಪೋಷಕರು ಮುಂದೆ ಬರುತ್ತಿದ್ದಾರೆ. ಒಮ್ಮೆ ಸರ್ಕಾರಿ ಶಾಲೆಯಲ್ಲಿರುವ ಎಲ್ಕೆಜಿಗೆ ಮಕ್ಕಳನ್ನು ದಾಖಲಿಸಿದರೆ ಅವರು ಅಲ್ಲಿ 10ನೇ ತರಗತಿ ತನಕ ಓದಬಹುದಾಗಿದೆ.ಜಿಲ್ಲೆಯಲ್ಲಿವೆ ಒಟ್ಟು 93 ಶಾಲೆಗಳು
ಮಕ್ಕಳ ಕೊರತೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಆರಂಭದಲ್ಲಿ ಮುಚ್ಚಲಾಯಿತು. ಅವುಗಳಲ್ಲಿದ್ದ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗೆ ಸೇರಿಸಲಾಯಿತು. ಇಷ್ಟಾದರೂ ಮಕ್ಕಳ ಸಂಖ್ಯೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಾಣಲಿಲ್ಲ. ಆಗ ಹೊಳೆದದ್ದೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭದ ಚಿಂತನೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲೀಗ 14 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಇದೆ.ಆದರೆ ಇದಕ್ಕೂ ಮೊದಲೇ ಜಿಲ್ಲೆಯ 10 ಕೆಪಿಎಸ್, 13 ಪಿಎಂಶ್ರೀ ಹಾಗೂ ಸ್ಥಳೀಯ ಎಸ್ಡಿಎಂಸಿಗಳಿಂದ ನಿರ್ವಹಿಸಲ್ಪಡುತ್ತಿರುವ 56 ಎಲ್‌ಕೆಜಿ-ಯುಕೆಜಿಗಳಿದ್ದು ಇವುಗಳಲ್ಲಿ ಸರಾಸರಿ 2 ಸಾವಿರ ಮಕ್ಕಳು ಕಲಿಯುತ್ತಿದ್ದಾರೆ.
ಎಸ್ಡಿಎಂಸಿ ಹೊರತುಪಡಿಸಿ ಉಳಿದೆಡೆ ಶಿಕ್ಷಕಿ ಹಾಗೂ ಆಯಾ ಗೌರವ ಧನವನ್ನು ಶಿಕ್ಷಣ ಇಲಾಖೆ ಭರಿಸುತ್ತಿದೆ. ಎಸ್ಡಿಎಂಸಿಗಳಿಂದ ನಡೆಯುತ್ತಿರುವ ಎಲ್‌ಕೆಜಿ-ಯುಕೆಜಿಗೆ ಅವರದ್ದೇ ನಿಧಿಯಿಂದ ಗೌರವ ಧನ ನೀಡಲಾಗುತ್ತಿದೆ. ಇದರ ಜೊತೆಗೆ ಕಲಿಕೋಪಕರಣ ಖರೀದಿಗೆ ತಲಾ 1,04,100 ರೂಪಾಯಿ ನೆರವು ನೀಡಲಾಗಿದೆ.