ಇಂದು ಅಭಿನಂದನಾ ಸಮಾರಂಭ

| Published : Aug 17 2024, 12:53 AM IST

ಸಾರಾಂಶ

ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಈಗಾಗಲೇ ೭ನೇ ವೇತನ ಆಯೋಗ ಜಾರಿಗೊಳಿಸಿದ್ದು, ಆಯೋಗದಿಂದ ಸಂಬಂಧಿಸಿದ ಕೈಪಿಡಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿ ಶಾಖೆ ಜಿಲ್ಲಾಧ್ಯಕ್ಷರಾದ ಅಮೃತಗೌಡ ಪಾಟೀಲ್ ತಿಳಿಸಿದರು.

ಹಾವೇರಿ: ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಈಗಾಗಲೇ ೭ನೇ ವೇತನ ಆಯೋಗ ಜಾರಿಗೊಳಿಸಿದ್ದು, ಆಯೋಗದಿಂದ ಸಂಬಂಧಿಸಿದ ಕೈಪಿಡಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿ ಶಾಖೆ ಜಿಲ್ಲಾಧ್ಯಕ್ಷರಾದ ಅಮೃತಗೌಡ ಪಾಟೀಲ್ ತಿಳಿಸಿದರು.ರಾಜ್ಯ ನೌಕರರ ಸಂಘ ಜಿಲ್ಲಾ ಶಾಖೆಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ೭ನೇ ವೇತನ ಆಯೋಗ ಜಾರಿ ಹಿನ್ನೆಲೆಯಲ್ಲಿ ಆ. ೧೭ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಮ್ಮಭಿಮಾನದ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಸಮಾರಂಭದ ಜೊತೆಗೆ ಓಪಿಎಸ್ ಯೋಜನೆಯನ್ನು ಪುನರ್ ಸ್ಥಾಪನೆ ಕಾರ್ಯಾಗಾರ ಆರೋಗ್ಯ ಸಂಜೀವಿನಿ ಯೋಜನೆ ಜಾರಿ, ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಿ ಆ್ಯಂಡ್ ಆರ್ ನಿಮಗಳ ತಿದ್ದುಪಡಿ, ಹಳೆ ಪಿಂಚಣಿ ಯೋಜನೆ ಮರು ಜಾರಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲೆಯ ಸರ್ಕಾರಿ ನೌಕರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯಾದ್ಯಂತ ಒಟ್ಟು ೭ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಬಸ್ಸುಗಳ ವ್ಯವಸ್ಥೆ ಮಾಡಲಾಗುವುದು ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ನೌಕರರಿಗೆ ಒಂದು ದಿನ ಓಓಡಿ ಸೌಲಭ್ಯ ನೀಡಲಾಗಿದೆ. ದೈನಂದಿನ ಕಚೇರಿ ಕಾರ್ಯನಿರ್ವಾಹಣೆಗೆ ಯಾವುದೇ ತೊಂದರೆ ಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಹಾವೇರಿ ವತಿಯಿಂದ ಜಿಲ್ಲೆಯಲ್ಲಿ ಸರ್ಕಾರಿ ನೌಕರರಗಾಗಿಯೇ ೨೫ ಹಾಸಿಗೆಯುಳ್ಳ ಸುಸಜ್ಜಿತ ವಸತಿ ಕೊಠಡಿಗಳನ್ನು ಹಾಗೂ ಕಾರ್ಯಕ್ರಮ ಸಭಾ ಭವನವನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಉದ್ದೇಶಗಳಿಗಾಗಿ ಮನೋರಂಜನಾ ಕ್ಲಬ್ ಹಾಗೂ ಕುಟುಂಬ ಸಮೇತರಾಗಿ ಉಳಿದುಕೊಳ್ಳಲು ವಸತಿ ಕೊಠಡಿಗಳ ನಿರ್ಮಾಣ ಮಾಡಲು ಸೂಕ್ತ ಜಾಗದ ಅವಶ್ಯಕತೆ ಇದ್ದು ಜಾಗ ದೊರೆತಲ್ಲಿ ಮುಂದಿನ ಕ್ರಮ ವಹಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ನಮ್ಮಭಿಮಾನದ ಅಭಿನಂದನಾ ಸಮಾರಂಭದ ಭಿತ್ತಿ ಪತ್ರವನ್ನು ಬಿಡುಗಡೆ ಗೊಳಿಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎ.ಎಣ್ಣಿ, ಕಾರ್ಯಾಧ್ಯಕ್ಷ ವಾಚ್ಚಪ್ಪ ಎಸ್ ಲಮಾಣಿ, ಜಿಲ್ಲಾ ಖಜಾಂಚಿ ಸಿದ್ದಪ್ಪ ಯಲಿಗಾರ, ಸದಸ್ಯ ಮೆಹಬೂಬ್ ಹಾಜರಿದ್ದರು.