ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದ ಉಳುವರೆ ಜನರನ್ನು ಶಿರೂರು ಗುಡ್ಡ ಅಸಹಾಯಕರನ್ನಾಗಿಸಿದೆ. ಆರು ಮನೆಗಳಿಗೆ ಅಡಿಪಾಯದ ಕುರುಹು ಬಿಟ್ಟರೆ ಬೇರೇನೂ ಇಲ್ಲ. ಉಳಿದ 20ರಷ್ಟು ಮನೆಗಳು ಅರೆಬರೆ ಕುಸಿದು, ಇಡಿ ಊರು ರಣಾಂಗಣದಂತೆ ಕಾಣಿಸುತ್ತಿದೆ. ದುರಂತ ನಡೆದು ಒಂದು ತಿಂಗಳಾಗಿದ್ದು, ಸಂತ್ರಸ್ತರ ಬದುಕು ಅಯೋಮಯವಾಗಿದೆ.
ಪೂರ್ತಿ ಮನೆಯನ್ನು ಕಳೆದುಕೊಂಡ ನಾಲ್ಕು ಕುಟುಂಬಗಳು ಬಾಡಿಗೆ ಮನೆಯಲ್ಲಿವೆ. ₹5-6 ಸಾವಿರ ಬಾಡಿಗೆ ಹಣ ನೀಡಬೇಕಾಗಿದೆ. ಕೆಲವು ಕುಟುಂಬಗಳು ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದರೆ, ಹಲವು ಕುಟುಂಬದವರು ಅರೆಬರೆ ಬಿದ್ದುಹೋದ ಮನೆಯನ್ನೇ ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಂಡರೂ ಮತ್ತೆ ಮನೆ ಕುಸಿದರೆ ಏನು ಎಂಬ ಆತಂಕದ ನಡುವೆಯೂ ಆ ಮನೆಗಳಲ್ಲೇ ವಾಸವಾಗಿದ್ದಾರೆ.
ಕುಸಿದ ಮನೆಗಳೆಲ್ಲ ಹಾಲಕ್ಕಿ ಒಕ್ಕಲಿಗರು ಹಾಗೂ ಮೀನುಗಾರರದ್ದು. ಹಾಲಕ್ಕಿ ಒಕ್ಕಲಿಗರದ್ದು ಚೂರು ಪಾರು ಗದ್ದೆ ಇದ್ದರೆ, ಮೀನುಗಾರರಿಗೆ ಮೀನುಗಾರಿಕೆಯೇ ಜೀವನವಾಗಿತ್ತು. ಇದರ ಜತೆ ಚಿಕ್ಕಪುಟ್ಟ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಶ್ರೀಮಂತಿಕೆ ಇಲ್ಲದಿದ್ದರೂ ಹೃದಯ ಶ್ರೀಮಂತಿಕೆಯಿಂದ ಸ್ವಾವಲಂಬಿಗಳಾಗಿ ಜೀವಿಸುತ್ತಿದ್ದರು. ಆದರೆ, ಈಗ ಇವರ ಬದುಕು ಅಸಹನೀಯವಾಗಿದೆ. ಚೂರು ಪಾರು ಗದ್ದೆಯೂ ನಾಶವಾಗಿದೆ. ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿ ಇನ್ನೂ ಕೆಲವರು ಚೇತರಿಸಿಕೊಂಡಿಲ್ಲ. ಚಿಕ್ಕಪುಟ್ಟ ಕೆಲಸಕ್ಕೂ ಹೋಗಲಾಗುತ್ತಿಲ್ಲ. ಅವರಿವರು ದಾನಿಗಳು ತಂದುಕೊಡುವ ವಸ್ತುಗಳಿಗಾಗಿ ಕೈಒಡ್ಡುವ ದಯನೀಯ ಪರಿಸ್ಥಿತಿ ಬಂದಿದೆ ಎಂದು ಸಂತ್ರಸ್ತರು ನೋವಿನಿಂದ ನುಡಿಯುತ್ತಾರೆ.
ಪೂರ್ತಿ ಮನೆಯನ್ನು ಕಳೆದುಕೊಂಡವರಿಗೆ ಕೇವಲ ₹1.20 ಲಕ್ಷ ನೀಡಲಾಗಿದೆ. ಜತೆಗೆ ಸರ್ಕಾರದ ಆಶ್ರಯ ಮನೆ ಮಂಜೂರು ಮಾಡುವ ಭರವಸೆ ನೀಡಲಾಗಿದೆ. ಆದರೆ, ಈ ಹಣದಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ ಎನ್ನುವುದು ಸಂತ್ರಸ್ತರ ಅಂಬೋಣ. ಇನ್ನು ಭಾಗಶಃ ಮನೆ ಕುಸಿದವರಿಗೆ ₹10 ಸಾವಿರ ನೀಡಿದ್ದರೂ ಅದೂ ಏತಕ್ಕೂ ಸಾಲದು ಎನ್ನುತ್ತಿದ್ದಾರೆ. ಇನ್ನು ಬಾಡಿಗೆ ಮನೆಯಲ್ಲಿದ್ದರೆ ಬಾಡಿಗೆ ಪಾವತಿಸುವುದಾಗಿ ಭರವಸೆ ನೀಡಲಾಗಿದೆ. ಆದರೂ ಬಾಡಿಗೆ ಹಣ ಬರಲಿದೆಯೇ ಇಲ್ಲವೇ ಎನ್ನುವ ಆತಂಕವೂ ಅವರನ್ನು ಕಾಡುತ್ತಿದೆ.
ಉಳುವರೆಯ ಅರ್ಧ ಊರು ನಾಶವಾಗಿದೆ. 27 ಕುಟುಂಬಗಳಿಗೆ ದೇವಿಗದ್ದೆಯಲ್ಲಿ ನಿವೇಶನ ನೀಡುವುದಾಗಿ ಸರ್ಕಾರ ಹೇಳಿದೆ. ಅದು ಕಾರ್ಯರೂಪಕ್ಕೆ ಬರುವ ತನಕ ಇವರ ಬದುಕು ಇದೆ ರೀತಿ ಅಸಹಾಯಕತೆಯಲ್ಲೇ ಮುಂದುವರಿಯಲಿದೆ.
8 ದೇಹ ಪತ್ತೆ
ದುರಂತದಲ್ಲಿ ಕಣ್ಮರೆಯಾದ 11 ಜನರಲ್ಲಿ 8 ಜನರ ಮೃತದೇಹ ಪತ್ತೆಯಾಗಿದೆ. ಇನ್ನೂ ಮೂವರ ದೇಹಕ್ಕಾಗಿ ಹುಡುಕಾಟ ನಡೆದಿದೆ. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳದ ಅರ್ಜುನ್ ಕುಟುಂಬದವರು ಮೃತದೇಹವೂ ದೊರಕದೆ, ಪರಿಹಾರವೂ ಇಲ್ಲದೆ ಸಂಕಟದಲ್ಲಿದ್ದಾರೆ. ಉಳುವರೆಯ ಸಣ್ಣು ಗೌಡ ಎಂಬಾಕೆ ದುರಂತದಲ್ಲಿ ಮೃತಪಟ್ಟಿದ್ದು ಆಕೆಯ ಕುಟುಂಬದವರು ಇನ್ನೂ ಕಣ್ಣೀರು ಹಾಕುತ್ತಿದ್ದಾರೆ.
ಪರಿಹಾರವೇ ಆಸರೆ
ನನ್ನ ಮನೆ ಸಂಪೂರ್ಣ ಕುಸಿದಿದೆ. ಬಾಡಿಗೆ ಮನೆಯಲ್ಲಿದ್ದೇವೆ. ದಾನಿಗಳು ಕೊಡುವ ಪರಿಹಾರವೇ ಈಗ ನಮ್ಮ ಬದುಕಿಗೆ ಆಸರೆಯಾಗಿದೆ. ಮುಂದೇನು ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ದೊರೆಯುತ್ತಿಲ್ಲ.
ವಿನಾಯಕ ಗೌಡ- ಸಂತ್ರಸ್ತ