ಭಗವದ್ಗೀತೆಯ ಓದಿನಿಂದ ಜೀವನದ ದೃಷ್ಟಿಕೋನ ಸುಧಾರಣೆ: ಗುಣಾಕರ ರಾಮದಾಸ

| Published : Aug 17 2024, 12:53 AM IST

ಭಗವದ್ಗೀತೆಯ ಓದಿನಿಂದ ಜೀವನದ ದೃಷ್ಟಿಕೋನ ಸುಧಾರಣೆ: ಗುಣಾಕರ ರಾಮದಾಸ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವೇಕ ವಿಧಾತ ಭಗವದ್ಗೀತಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಂದು ಮಂಗಳೂರು ಇಸ್ಕಾನ್ ಎಚ್‌ಕೆಎಂ ಅಧ್ಯಕ್ಷ ಹಾಗೂ ಅಕ್ಷಯ ಪಾತ್ರೆ ಫೌಂಡೇಶನ್ ವಲಯ ಅಧ್ಯಕ್ಷ ಗುಣಾಕರ ರಾಮದಾಸ ಮಾತನಾಡಿ, ಭಗವದ್ಗೀತೆಯ ಓದುವಿಕೆಯಿಂದ ಜೀವನದ ದೃಷ್ಟಿಕೋನ ಉತ್ತಮವಾಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಅನೇಕರು, ಸಮಾಜದ ಉನ್ನತ ಸ್ಥಾನದಲ್ಲಿರುವವರು ಸೇರಿದಂತೆ ಜೀವನದ ಉತ್ತುಂಗಕ್ಕೆ ತಲುಪಿದ ಮೇಲೆ ಖಿನ್ನತೆಗೊಳಗಾಗಿ ಜೀವನವನ್ನು ತಾವೇ ಅಂತ್ಯಗೊಳಿಸುತ್ತಾರೆ. ಆದುದರಿಂದ ಜೀವನದ ಶೋಕ, ಸಂದಿಗ್ಧ ಪರಿಸ್ಥಿತಿಗಳಲ್ಲಿ ಭಗವದ್ಗೀತೆ ಓದಿ, ಜೀವನದ ಸಾರ ಅರ್ಥೈಸಿಕೊಂಡು ಲಭ್ಯವಿರುವ ಅಲ್ಪ ಸಮಯವನ್ನು ಭಗವದ್ಗೀತೆಯ ಓದುವಿಕೆಗೆ ಮೀಸಲಿಡಬೇಕು ಎಂದು ಮಂಗಳೂರು ಇಸ್ಕಾನ್ ಎಚ್‌ಕೆಎಂ ಅಧ್ಯಕ್ಷ ಹಾಗೂ ಅಕ್ಷಯ ಪಾತ್ರೆ ಫೌಂಡೇಶನ್ ವಲಯ ಅಧ್ಯಕ್ಷ ಗುಣಾಕರ ರಾಮದಾಸ ಹೇಳಿದ್ದಾರೆ.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವೇಕ ವಿಧಾತ ಭಗವದ್ಗೀತಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಗತ್ತಿನಲ್ಲಿ ವಿದ್ಯೆ, ತಾಂತ್ರಿಕ ಕೌಶಲ್ಯವನ್ನು ಹೊಂದಿದವರು ಇದ್ದಾರೆ. ಆದರೆ ಜ್ಞಾನವನ್ನು ಜೀವನದಲ್ಲಿ ಅನ್ವಯಿಸುವುದರಲ್ಲಿ ಎಡವುತ್ತಾರೆ. ಭಗವದ್ಗೀತೆಯ ಓದುವಿಕೆಯಿಂದ ಜೀವನದ ದೃಷ್ಟಿಕೋನ ಉತ್ತಮವಾಗಲಿದೆ ಎಂದರು.

ಪುತ್ತೂರು ನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಆಂಜನೇಯ ರೆಡ್ಡಿ ಮಾತನಾಡಿ ಭಾರತ ಅತ್ಯಂತ ವಿಶಿಷ್ಟವಾದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಹಿರಿಮೆಯುಳ್ಳ ದೇಶವಾಗಿದೆ. ಜಗತ್ತಿನ ಬೇರೆ ಯಾವ ರಾಷ್ಟ್ರವೂ ಇಂತಹ ಪಾರಂಪರಿಕ ಹಿನ್ನೆಲೆಯನ್ನು ಹೊಂದಿಲ್ಲದ ಕಾರಣ ಈ ನೆಲದಲ್ಲಿ ಜನಿಸಿದ ನಾವು ಭಾಗ್ಯಶಾಲಿಗಳು. ಶಂಕರಾಚಾರ್ಯರು, ಬಸವಣ್ಣ, ಸ್ವಾಮಿ ವಿವೇಕಾನಂದ ಮುಂತಾದ ಮಹನೀಯರು ಅವರ ಪರಮೋಚ್ಛ ಸಾಧನೆಗಳಿಂದ ಇಂದು ಜನಮಾನಸದಲ್ಲಿ ಅಚ್ಚಳಿಯದೆ

ಉಳಿದಿದ್ದಾರೆ. ಆದುದರಿಂದ ನಾವು ಎಷ್ಟು ವರ್ಷಗಳ ಕಾಲ ಜೀವಿಸಿದ್ದೆವು ಅನ್ನುವುದಕ್ಕಿಂತ ಜೀವಿಸಿದ ಅವಧಿಗಳಲ್ಲಿ ನಾವು ಗೈದ ಸಾಧನೆಗಳು ನಮ್ಮನ್ನು ನೂರು ಕಾಲ ಜೀವಂತವಾಗಿರಿಸುತ್ತವೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ. ಶಿಕ್ಷಣದ ಮೂಲ ಉದ್ದೇಶ ನಮ್ಮೊಳಗೆ ಅಂತರ್ಗತವಾಗಿರುವ ಅರಿವಿನ ಬೆಳಕಿನ ಪ್ರಕಟೀಕರಣ. ಜಗತ್ತಿಗೆ ಭಾರತವು ನೀಡಿದ ಆಧ್ಯಾತ್ಮಿಕ ದೇಣಿಗೆ ಅಪಾರವಾದುದು. ಈ ನೆಲದ ಅಸ್ಮಿತೆ ಆಗಿರುವ ಭಗವದ್ಗೀತೆಯ ಜ್ಞಾನ, ಇಂದು ಜಗತ್ತಿಗೆ ಬೆಳಕು ನೀಡುವ ಶಕ್ತಿಪುಂಜವನ್ನು ಧ್ವಂಸ ಮಾಡುವ ನೀಚ ಶಕ್ತಿಗಳನ್ನು ಧಮನ ಮಾಡುವಲ್ಲಿ ಆವಶ್ಯಕವಾಗಿದೆ. ಇಸ್ಕಾನ್ ನಂತಹ ಬಹುದೊಡ್ಡ ಆಧ್ಯಾತ್ಮಿಕ ಕೇಂದ್ರ ಭಗವದ್ಗೀತೆಯ ಸಂದೇಶವನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸುವ ಮೂಲಕ ಸೇವೆಯೆಂಬ ಶಬ್ದಕ್ಕೆ ಹೊಸರೂಪವನ್ನು ನೀಡುತ್ತಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಸತೀಶ್ ರಾವ್, ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಇದ್ದರು.

ಬಳಿಕ ಪ್ರಥಮ ಪಿಯುಸಿಯ ೧೬೦೦ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಭಗವದ್ಗೀತೆ ಪುಸ್ತಕಗಳನ್ನು ವಿತರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಡಾ. ಕೃಷ್ಣ ಪ್ರಸನ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ದಿವ್ಯಾ ಕೆ. ಸ್ವಾಗತಿಸಿ, ನಿರೂಪಿಸಿದರು. ಉಪ ಪ್ರಾಂಶುಪಾಲ ದೇವಿಚರಣ್ ರೈ ವಂದಿಸಿದರು.