ಸಾರಾಂಶ
ರೋಟರಿ ಕ್ಲಬ್ ಬೇಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಮೇದೂರು ಹಾಗೂ ಸರ್ಕಾರಿ ಪ್ರೌಢಶಾಲೆ ಗಬ್ಬಲಗೋಡು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಬಿ.ಶಿವರಾಜು, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಡೆಂಘೀ ಬಗ್ಗೆ ಭಯಪಡಬೇಕಾದ ಅವಶ್ಯಕತೆ ಇಲ್ಲ. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಡೆಂಘೀ ಬಗ್ಗೆ ಭಯಪಡಬೇಕಾದ ಅವಶ್ಯಕತೆ ಇಲ್ಲ. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ ಎಂದು ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಬಿ.ಶಿವರಾಜು ಹೇಳಿದರು.ರೋಟರಿ ಕ್ಲಬ್ ಬೇಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಮೇದೂರು ಹಾಗೂ ಸರ್ಕಾರಿ ಪ್ರೌಢಶಾಲೆ ಗಬ್ಬಲಗೋಡು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪ್ರದೇಶ ಹಾಗೂ ಮನೆಯ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಬೆಳಗ್ಗಿನ ಅವಧಿಯಲ್ಲಿ ಕಚ್ಚುವಂತಹ ಈ ಸೊಳ್ಳೆಗಳಿಂದ ಡೆಂಘೀ ಜ್ವರ ಹರಡುತ್ತಿದೆ. ಆದ್ದರಿಂದ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಸೊಳ್ಳೆಗಳ ಮೇಲೆ ವಿಶೇಷ ನಿಗಾ ವಹಿಸಿ ಡೆಂಘೀ ಮುಕ್ತವಾಗಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.ರೋಟರಿ ಮಾಜಿ ಅಧ್ಯಕ್ಷ ಜಿ.ಎಲ್.ಮುರುಳಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸ ಯಾವುದೇ ಕಾರಣಕ್ಕೂ ಯಾರೂ ಮಾಡಬಾರದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯ, ಸಂಘಸಂಸ್ಥೆಗಳು ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆ ಇರುತ್ತದೆ. ಇಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಶಾಸಕರು ಹಾಗೂ ಶಿಕ್ಷಕರು ಮತ್ತು ಗ್ರಾಮದ ಸಾರ್ವಜನಿಕರ ಸಹಕಾರದಿಂದ ಯಾವುದೇ ಖಾಸಗಿ ಶಾಲೆಗಳಿಗಿಂತ ಸಕಲ ಸೌಲಭ್ಯಗಳುಳ್ಳ ಸುಸಜ್ಜಿತ ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಕೂಡ ನಿರೀಕ್ಷೆಗೂ ಮೀರಿ ಸಾಧನೆ ಮಾಡುತ್ತಿದ್ದಾರೆ ಎಂದರು.ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ ಮಾತನಾಡಿ, ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಇಲ್ಲಿನ ಸರ್ಕಾರಿ ಶಾಲೆ ಇದೆ. ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವವರ ಪೈಕಿ ಬಡಮಕ್ಕಳೇ ಹೆಚ್ಚಿರುತ್ತಾರೆ. ಅವರಿಗೆ ಖಾಸಗಿ ಶಾಲೆಗಳ ರೀತಿಯ ಸಮವಸ್ತ್ರ, ಶೈಕ್ಷಣಿಕ ಪರಿಕರಗಳನ್ನು ಒದಗಿಸುವುದು ಕಷ್ಟ. ಹಾಗಾಗಿ ದಾನಿಗಳು ತಮ್ಮ ಕೈಲಾದ ಸಹಕಾರ ನೀಡುವ ಮೂಲಕ ಗ್ರಾಮದಲ್ಲಿನ ಶಾಲೆ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರುದ್ರೇಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಜಿ.ನಿತಿನ್ ಮಾತನಾಡಿದರು. ಈ ವೇಳೆ ಗ್ರಾಮದ ಹಿರಿಯರಾದ ಈರೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ನಂಜೇಗೌಡ, ಮುಖೋಪಾಧ್ಯಾಯ ರೆಹಮತ್, ಹ.ವಿ.ಸಂಘದ ವ್ಯಯ ಪುಟ್ಟೇಗೌಡ, ಜಿ.ವಿ. ಪ್ರಸಾದ್, ಎಸ್‌ಡಿಎಂಸಿಯ ಎಲ್ಲಾ ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಎಲ್ಲಾ ನಿರ್ದೇಶಕರು, ಶಿಕ್ಷಕರು ಇದ್ದರು.