ಭದ್ರೆಗಾಗಿ ಚಳ್ಳಕೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

| Published : Feb 10 2024, 01:50 AM IST / Updated: Feb 10 2024, 05:04 PM IST

ಭದ್ರೆಗಾಗಿ ಚಳ್ಳಕೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕರೆ ನೀಡಿದ್ದ ಚಳ್ಳಕೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಶುಕ್ರವಾರ ಕರೆ ನೀಡಿದ್ದ ಚಳ್ಳಕೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 

ನಗರದ ಇಡೀ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ಸೂಚಿಸಿದರು. ಎಪಿಎಂಸಿ ವಹಿವಾಟು ಇರಲಿಲ್ಲ. ಬಂದ್ ಹಿನ್ನೆಲೆ ಬಹುತೇಕ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆ ಅನುಭವಿಸಬೇಕಾಯಿತು. ಬೆಳಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಬಸ್ಸು, ವಾಹನ ಸಂಚಾರವಿರಲಿಲ್ಲ.

ಬಳ್ಳಾರಿಯಿಂದ ಬೆಂಗಳೂರು, ಚಿತ್ರದುರ್ಗದಿಂದ ಪಾವಗಡ, ಅನಂತಪುರ ಕಡೆ ಹೋಗುವ ವಾಹನಗಳು ಚಳ್ಳಕೆರೆ ನೆಹರು ವೃತ್ತ ಬಳಸಿ ಹೋಗಬೇಕಾದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. 

ಊರ ಹೊರಗಡೆಯೇ ತಾತ್ಕಾಲಿಕ ಬಸ್ ನಿಲ್ದಾಣಗಳು ಕಂಡು ಬಂದವು. ಬಳ್ಳಾರಿಯಿಂದ ಬೆಂಗಳೂರು ಕಡೆ ಹೋಗುವ ವಾಹನಗಳು ಸುತ್ತು ಬಳಿ ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿ ಸೇರಿದವು. 52 ಕ್ಕೂ ಹೆಚ್ಚು ಸಂಘ ಸಂಸ್ಧೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬೆಳಗ್ಗೆ 8ಗಂಟೆವರೆಗೆ ಸಹಜ ಸ್ಥಿತಿಯಲ್ಲಿದ್ದ ಚಳ್ಳಕೆರೆ ಪಟ್ಟಣ, ಪ್ರತಿಭಟನಾಕಾರರು ಬೀದಿಗಿಳಿದ ನಂತರ ಸ್ಥಬ್ದವಾಯಿತು. ನಾಲ್ಕು ದಿಕ್ಕಿನಲ್ಲಿ ಮೆರವಣಿಗೆ ನಡೆಸಿದ್ದರಿಂದ ಇದ್ದಕ್ಕಿದ್ದಂತೆ ಬಂದ್ ದೃಶ್ಯಗಳು ಗೋಚರಿಸಿದವು. 

ಏತನ್ಮಧ್ಯೆ ಬೈಕ್ ರ್ಯಾಲಿ ನಡೆಸಿದ ಪ್ರತಿಭಟನಾಕಾರರು ನಗರದ ತುಂಬಾ ಸುತ್ತಾಡಿದರು. ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೂ ನಿರಂತರ ಪ್ರತಿಭನಾ ಸಭೆ ನಡೆಯಿತು. ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡು ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಧಾನಗತಿ ಧೋರಣೆ ಖಂಡಿಸಿದರು.

ದೇಶಕ್ಕಾಗಿ ತ್ಯಾಗ ಮಾಡಿದ ಮಂದಿ: ಪ್ರತಿಭಟನ ಸಭೆ ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರರಿಗೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮನವಿ ಸಲ್ಲಿಸಿದರು. 22 ಸಾವಿರ ಕೋಟಿ ರುಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಇದುವರೆಗೂ ರಾಜ್ಯ ಸರ್ಕಾರ ಮಾಡಿದ ವೆಚ್ಚ ಹತ್ತು ಸಾವಿರ ಕೋಟಿ ರು. ದಾಟಿಲ್ಲ.

 ಕಾಮಗಾರಿ ಆರಂಭವಾಗಿ ಇಪ್ಪತ್ತು ವರ್ಷಗಳು ಕಳೆದರೂ ಅರೆಬರೆಯಾಗಿದೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಕೇಂದ್ರದಿಂದ ಅನುದಾನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ವಚನ ನೀಡಿದ್ದರು. 2023-24ರ ಕೇಂದ್ರ ಬಜೆಟ್ ನಲ್ಲಿ 5300 ಕೋಟಿ ರುಪಾಯಿ ಮೀಸಲಿಡಲಾಗಿತ್ತು. ವರ್ಷಗಳು ಉರುಳಿದರೂ ಒಂದು ಪೈಸೆ ಅನುದಾನ ಬಿಡುಡೆಯಾಗಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಡಿಆರ್‌ಡಿಓ ಸೇರಿ ಹಲವು ಯೋಜನೆಗಳಿಗೆ ಚಳ್ಳಕೆರೆ ತಾಲೂಕಿನ 13 ಸಾವಿರಕ್ಕೂ ಹೆಚ್ಚು ಪ್ರದೇಶ ಬಿಟ್ಟುಕೊಡಲಾಗಿದೆ. ಚಳ್ಳಕೆರೆ ಜನರ ಈ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಡಿಆರ್‌ಡಿಓ ಸೇರಿ ಹಲವು ಯೋಜನೆಗಳು ತಾಲೂಕಲ್ಲಿ ಭದ್ರವಾಗಿ ನೆಲೆಯೂರಿವೆ. ಪರ್ಯಾಯವಾಗಿ ಈ ಜನರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಪ್ರಯತ್ನ ಮಾಡದೇ ಇರುವುದು ದುರದೃಷ್ಟಕರ ಸಂಗತಿ.

ತ್ಯಾಗಿಗಳು, ದೇಶಪ್ರೇಮಿಗಳ ನಿಕೃಷ್ಟವಾಗಿ ಕಾಣಲಾಗಿದೆ. ಈಗಾಗಲೇ ಕಡು ಬೇಸಗೆ ಆರಂಭವಾಗಿದ್ದು, ಕುಡಿವ ನೀರಿನ ಆಹಾಕಾರ ಎದುರಾಗಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಂಡಿದ್ದರೆ ಚಳ್ಳಕೆರೆ ತಾಲೂಕಿನ 60ಕ್ಕೂ ಹೆಚ್ಚು ಕೆರೆಗಳು ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು.

 ಜನ ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು. ಜನರ ಬದುಕನ್ನು ಸಮೃದ್ಧಗೊಳಿಸುವುದು ಪ್ರಜಾಪ್ರಭುತ್ವದ ಮೂಲ ಆಶಯ. ಇಂತಹ ಜನಕಲ್ಯಾಣ ಕಾರ್ಯಕ್ರಮವನ್ನೇ ಸರ್ಕಾರ ಮರೆತುಕುಳಿತರೆ ಭವಿಷ್ಯದ ದಿನಗಳು ಘೋರವಾಗುತ್ತವೆ.

ಜನರ ಆಕ್ರೋಶ ಇಮ್ಮಡಿಯಾಗುವ ಮೊದಲು ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ರಾಜ್ಯ ಸರ್ಕಾರ ಕೇಂದ್ರದ ಅನುದಾನ ಕಾದು ಕುಳಿತುಕೊಳ್ಳದೇ ಭದ್ರಾ ಮೇಲ್ದಂಡೆ ಕಾಮಗಾರಿಗೆ ಶರವೇಗ ನೀಡಿ ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರ 5300 ಕೋಟಿ ರು. ನೆರವು ನೀಡಿ ತನ್ನ ವಚನ ಬದ್ಧತೆ ಮೆರೆಯಬೇಕೆಂದು ತಹಸೀಲ್ದಾರರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂಘಟನೆಗಳ ಮಹಾಪೂರ: ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಜಗಳೂರು ಯಾದವರೆಡ್ಡಿ, ಲಕ್ಷ್ಮಣರೆಡ್ಡಿ, ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಕೆ.ಸಿ.ಹೊರಕೇರಪ್ಪ, ಶಿವಕುಮಾರ್, ದಯಾನಂದ, ಅಖಂಡ ರೈತ ಸಂಘದ ಸೋಮಗುದ್ದು ರಂಗಸ್ವಾಮಿ, ಕೆ.ಸಿ.ಹೊರಕೇರಪ್ಪ, ಶಿವಕುಮಾರ್, ಕರುನಾಡ ವಿಜಯ ಸೇನೆ ಕೆ.ಟಿ.ಶಿವಕುಮಾರ್, ವಿಶ್ವಕರ್ಮ ಮಹಾ ಸಭಾದ ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಸೈಯದ್

ಕನ್ನಡ ರಕ್ಷಣಾ ವೇದಿಕೆ ಸ್ವಪ್ನ ವೆಂಕಟೇಶ್, ಅಖಂಡ ಕರ್ನಾಟಕ ರೈತ ಸಂಘ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಸಿಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ, ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ಅಖಿಲಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಛಾಯಾಗ್ರಾಹಕರ ಜಿಲ್ಲಾ ಕಾರ್ಯದರ್ಶಿ ನೇತಾಜಿ ಪ್ರಸನ್ನ, ಬಿ.ಪರೀದ್‍ಖಾನ್, ಕೆಆರ್‌ಎಸ್ ಪಕ್ಷದ ಜಿಲ್ಲಾ ಮುಖಂಡ ನಗರಂಗೆರೆ ಮಹೇಶ್, ಬೋಜರಾಜ್

 ಮುಸ್ಲಿಂ ಸಂಘಟನೆ ಮುಖಂಡರಾದ ಎಚ್.ಎಸ್.ಸೈಯದ್, ಎಸ್.ಮುಬೀಬ್, ನಭಿ, ಅನ್ವರ್‍ಮಾಸ್ಟರ್, ಅನುದಾನ ರಹಿತ ಆಡಳಿತ ಮಂಡಳಿ ದಯಾನಂದ, ಯಾದಲಗಟ್ಟೆಜಗನ್ನಾಥ, ಖಾಸಗಿ ಬಸ್ ಮಾಲೀಕರ ಸಂಘದ ಅಂಬಣ್ಣ, ಫರ್ಟಿಲೇಜರ್ ಅಸೋಸಿಯೇಷನ್ ಸಿದ್ದಲಿಂಗಪ್ಪ, ಬಾರ್ ಮಾಲೀಕರ ಸಂಘದ ಪ್ರಕಾಶ್

ಎಪಿಎಂಸಿ ಹಮಾಲರ ಸಂಘ ಎನ್.ನಿಂಗಣ್ಣ, ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ.ಅರವಿಂದ, ಕೆ.ಎಂ.ಕೋಟ್ರೇಶ್, ಹೂವಿನ ವ್ಯಾಪಾರಿಗಳ ಸಂಘದ ಜಗದೀಶ್, ಮಂಜುನಾಥ, ಆಟೋಚಾಲಕ ಸಂಘದ ನಾಗರಾಜು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.