ಸಾರಾಂಶ
ಕನ್ನಡಪ್ರಭ ವಾರ್ತೆ ಭಟ್ಕಳ
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಎಲ್ಲಾ ಕಡೆಗಳ ಜನತೆಯಿಂದ ಉತ್ತಮ ಸ್ಪಂದನೆ ದೊರಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೇಳಿದರು.ಇಲ್ಲಿನ ನಗರ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.೪೭ ಮನೆಗಳಿಗೆ ನಮ್ಮ ಪೊಲೀಸರು ಭೇಟಿ ನೀಡಿ ಜನ ಜಾಗೃತಿ ಮೂಡಿಸಿದ್ದಾರೆ. ಮನೆ ಮನೆಗೆ ಪೊಲೀಸ್ ಈ ಕಾರ್ಯಕ್ರಮ ಉತ್ತಮ ಉದ್ದೇಶ ಹೊಂದಿದ್ದು, ಭಟ್ಕಳದಲ್ಲಿ ಈ ಕಾರ್ಯಕ್ರಮದ ಬಗ್ಗೆ ನಮ್ಮ ಇಲಾಖೆಯ ಸಿಬ್ಬಂದಿಗಳೊಂದಿಗೆ ಚರ್ಚಿಸಿದ್ದೇನೆ ಎಂದ ಅವರು, ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಪ್ರತಿಯೊಂದು ಮನೆ ಮನೆಗೆ ನಮ್ಮ ಸಿಬ್ಬಂದಿ ತೆರಳಿ ತುರ್ತು ಸಂದರ್ಭದಲ್ಲಿ ೧೧೨ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಗಿದೆ. ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ವಹಿಸಲು ಸಾರ್ವಜನಿಕರಿಗೆ ತಿಳಿಸಿ ಹಣ ಕಳೆದುಕೊಂಡವರು ತಕ್ಷಣ ೧೦೩೩ ಗೆ ಕರೆ ಮಾಡಿ ವಿಷಯ ತಿಳಿಸಿದಲ್ಲಿ ತಕ್ಷಣ ಆ ಹಣವನ್ನು ತಡೆಹಿಡಿಯಬಹುದು ಎಂದ ಅವರು, ಶಾಲಾ-ಕಾಲೇಜುಗಳ ಹತ್ತಿರದಲ್ಲಿ ಡ್ರಗ್ಸ್, ಗಾಂಜಾ ಮಾರಾಟ ಮತ್ತು ಸೇವನೆ ತಡೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಶಾಲಾ-ಕಾಲೇಜುಗಳಲ್ಲಿ ಶಾಲಾ ಮುಖ್ಯಸ್ಥರೊಳಗೊಂಡ ಸಮಿತಿ ಮಾಡಿದ್ದೇವೆ. ಮಾದಕ ವಸ್ತುಗಳ ಸೇವನೆ ಎಲ್ಲಿಯೇ ಕಂಡು ಬಂದರೂ ಬಂದಲ್ಲಿ ನಮ್ಮ ಇಲಾಖೆಯ ಕ್ಯೂಆರ್ ಕೋಡ್‌ಗೆ ಸ್ಕ್ಯಾನ್ ಮಾಡಿ ದೂರು ನೀಡಬಹುದು. ಈ ಬಗ್ಗೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಜಾಗೃತಿ ಮೂಡಿಸುವ ಕಾರ್ಯ ಇಲಾಖೆಯಿಂದ ನಡೆಯುತ್ತಿದೆ ಎಂದರು.ಆಸರಕೇರಿಯ ಮನೆಗಳಿಗೆ ಎಸ್ಪಿ ಭೇಟಿ:
ಮನೆ ಮನೆಗೆ ಪೊಲೀಸ್ ಎಂಬ ಪರಿಕಲ್ಪನೆಯಡಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಪುರಸಭಾ ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಭಟ್ಕಳ ಪಟ್ಟಣದ ಆಸರಕೇರಿಯಲ್ಲಿ ಕೆಲವು ಮನೆಗಳಿಗೆ ಭೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧ ಹಾಗೂ ಇತರೇ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದರು.ಆಸರಕೇರಿಯ ಮಾದೇವ ನಾಯ್ಕ, ವೆಂಕಟೇಶ ನಾಯ್ಕ ಹಾಗೂ ನೂರ್ ಅಹಮ್ಮದ್ ಎನ್ನುವವರ ಮನೆಗೆ ತರೆಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆಯವರಿಗೆ ತುರ್ತು ಸಂದರ್ಭದಲ್ಲಿ ೧೧೨ ನಂಬರ್‌ಗೆ ಕರೆ ಮಾಡಿ ತಮ್ಮ ಸಮಸ್ಯೆ ಹೇಳಬಹುದು ಎಂದರಲ್ಲದೇ ಯಾರೇ ಅಪರಿಚಿತರಿಗೆ ತಮ್ಮ ಮೊಬೈಲ್‌ನಲ್ಲಿ ಬಂದ ಓಟಿಪಿಯನ್ನು ವಿನಿಮಯ ಮಾಡಬಾರದು, ಸೈಬರ್ ಅಪರಾಧಗಳ ಬಗ್ಗೆ ಜಾಗೃತೆ ವಹಿಸುವಂತೆ ಅರಿವು ಮೂಡಿಸಿದರು.ಈ ಸಂದರ್ಭ ಡಿಎಸ್ಪಿ ಮಹೇಶ, ಎಂ.ಕೆ. ನಗರ ಠಾಣಾ ಸಿಪಿಐ ದಿವಾಕರ, ಗ್ರಾಮಾಂತರ ಠಾಣಾ ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ನಗರ ಠಾಣಾ ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ತಿಮ್ಮಪ್ಪ, ಪ್ರಮುಖರಾದ ಕೃಷ್ಣ ನಾಯ್ಕ, ಶ್ರೀಧರ ನಾಯ್ಕ, ಶ್ರೀಕಾಂತ ನಾಯ್ಕ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಯುವಕ ಸಂಘದ ಅಧ್ಯಕ್ಷರಾದ ಶ್ರೀಧರ ನಾಯ್ಕ, ಪಾಂಡುರಂಗ ನಾಯ್ಕ ಮುಂತಾದವರಿದ್ದರು.