ಸಾರಾಂಶ
- ದಾವಣಗೆರೆ ಟೆನ್ನಿಸ್ ಲೀಗ್-2025 ಚನ್ನಗಿರಿ ಆರ್.ವಿರೂಪಾಕ್ಷಪ್ಪ ಟ್ರೋಫಿ ಟೂರ್ನಮೆಂಟ್‌ಗೆ ಚಾಲನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಟೆನ್ನಿಸ್ ಆಟದಲ್ಲಿ ದಾವಣಗೆರೆ ಉನ್ನತ ಮಟ್ಟದಲ್ಲಿದೆ ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.ನಗರದ ಎವಿಕೆ ರಸ್ತೆಯ ಜಿಲ್ಲಾ ಟೆನ್ನಿಸ್ ಕೋರ್ಟ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ದಾವಣಗೆರೆ ಟೆನ್ನಿಸ್ ಲೀಗ್-2025 ಚನ್ನಗಿರಿ ಆರ್. ವಿರೂಪಾಕ್ಷಪ್ಪ ಟ್ರೋಫಿ ಟೂರ್ನಮೆಂಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಟೆನ್ನಿಸ್ ಆಟವೆಂದರೆ ಬೆಂಗಳೂರು, ಮೈಸೂರು ಎನ್ನುವ ಮಾತಿತ್ತು. ಆದರೆ, ಈಗ ಅನೇಕ ಟೂರ್ನಿಮೆಂಟ್‌ಗಳನ್ನು ಹಮ್ಮಿಕೊಳ್ಳುವ ಮೂಲಕ ದಾವಣಗೆರೆ ಟೆನ್ನಿಸ್ ಆಟದಲ್ಲಿ ಉನ್ನತ ಮಟ್ಟದಲ್ಲಿ ಸಾಗುತ್ತಿದೆ. ಈ ಸಾಧನೆಯ ಕೀರ್ತಿ ದಾವಣಗೆರೆ ಟೆನ್ನಿಸ್ ಅಸೋಸಿಯೇಷನ್‌ಗೆ ಸಲ್ಲುತ್ತದೆ ಎಂದರು.
ಹೋರಾಟದ ಪ್ರತಿಫಲವಾಗಿ ಟೆನ್ನಿಸ್ ಕೋರ್ಟ್ ನಗರದ ಮಧ್ಯ ಭಾಗದಲ್ಲಿ ನಿರ್ಮಾಣವಾಗಿದೆ. ದಾವಣಗೆರೆಯಲ್ಲಿ ಟೆನ್ನಿಸ್ ಕೋರ್ಟ್ ನಿರ್ಮಿಸಬೇಕು ಎಂದು ತೀರ್ಮಾನಿಸಿದಾಗ ಐದು ಸ್ಥಳಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಈ ಸ್ಥಳವೂ ಒಂದು. ಆದರೆ ಕೆಲವರು ವಿರೋಧಿಸಿದ ಪರಿಣಾಮ ನಗರದ ಹೊರಭಾಗದಲ್ಲಿ ಟೆನ್ನಿಸ್ ಕೋರ್ಟ್ ನಿರ್ಮಿಸಲು ಮುಂದಾಗಲಾಗಿತ್ತು. ಹೊರ ಭಾಗದಲ್ಲಿ ಟೆನ್ನಿಸ್ ಕೋರ್ಟ್ ನಿರ್ಮಾಣವಾದರೆ ನಿರ್ವಹಣೆ ಕಷ್ಟ ಎಂದು ನಾವೆಲ್ಲ ಸೇರಿ ಹೋರಾಟ ಮಾಡಿದ್ದರಿಂದ ನಗರದ ಮಧ್ಯ ಭಾಗದಲ್ಲಿ ಟೆನ್ನಿಸ್ ಕೋರ್ಟ್ ನಿರ್ಮಾಣವಾಯಿತು ಎಂದರು.ನಂತರ ದಾವಣಗೆರೆಗೆ 13 ಟೆನ್ನಿಸ್ ಕೋಚ್‌ಗಳು ಬಂದರು. ಈಗ ದಾವಣಗೆರೆಗೆ ಉತ್ತಮ ಟೆನ್ನಿಸ್ ಕ್ರೀಡಾಪಟುಗಳು ಬರುತ್ತಿದ್ದಾರೆ. ಆಡುವ ಸಮಯಲ್ಲಿ ಆಡಬೇಕು. ಓದುವ ಸಮಯದಲ್ಲಿ ಓದಬೇಕು. ಜೀವನದಲ್ಲಿ ಕ್ರೀಡೆ ಮತ್ತು ಓದನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಉನ್ನತ ಹುದ್ದೆಯನ್ನೇರುವ ಜೊತೆ ಉತ್ತಮ ಕ್ರೀಡಾಪಟುಗಳಾಗಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಟೆನ್ನಿಸ್ ಆಟವಾಡುವ ಮೂಲಕ ಟೂರ್ನಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಟೆನ್ನಿಸ್ ಅಸೋಸಿಯೇಷನ್ ಸಲಹೆಗಾರ ಎಸ್.ಎಂ. ಬ್ಯಾಡಗಿ, ಕಾರ್ಯದರ್ಶಿ ನಂದಗೋಪಾಲ, ಉಪಾಧ್ಯಕ್ಷ ರವಿಕುಮಾರ್, ಸದಸ್ಯ ಬಿಎಸ್. ರಾಜಶೇಖರ್, ಸರ್ ಎಂವಿ ಕಾಲೇಜಿನ ಶ್ರೀಧರ್ ಇತರರು ಇದ್ದರು.ಕರ್ನಾಟಕದ ವಿವಿಧ ಜಿಲ್ಲೆಯ 35 ವರ್ಷ ಮೇಲ್ಪಟ್ಟ ಒಟ್ಟು 20 ತಂಡಗಳ 120 ಟೆನ್ನಿಸ್ ಕ್ರೀಡಾಪಟುಗಳು ಭಾಗವಹಿಸಿದ್ದರು. ಚೇತನ್ ಪ್ರಾರ್ಥಿಸಿ, ಕರಿಬಸವರಾಜ್ ನಿರೂಪಣೆ ಮಾಡಿದರು.
- - --11ಕೆಡಿವಿಜಿ35:
ದಾವಣಗೆರೆಯಲ್ಲಿ ನಡೆದ ಚನ್ನಗಿರಿ ಆರ್ ವಿರೂಪಾಕ್ಷಪ್ಪ ಟ್ರೋಫಿ ಟೂರ್ನಮೆಂಟ್‌ಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಚಾಲನೆ ನೀಡಿ ಶುಭ ಕೋರಿದರು.