ನಾವು ಆಯ್ಕೆ ಮಾಡಿಕೊಳ್ಳುವ ಅಲೋಚನೆ, ಚಿಂತನೆಗಳು ಬದುಕನ್ನು ಬದಲಿಸುವ ಶಕ್ತಿ ಹೊಂದಿವೆ.
ಹೂವಿನಹಡಗಲಿ: ನಾವು ಆಯ್ಕೆ ಮಾಡಿಕೊಳ್ಳುವ ಅಲೋಚನೆ, ಚಿಂತನೆಗಳು ಬದುಕನ್ನು ಬದಲಿಸುವ ಶಕ್ತಿ ಹೊಂದಿವೆ. ಎಲ್ಲರೂ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡು ಸುಂದರ ಬದುಕು ರೂಪಿಸಿಕೊಳ್ಳಿ ಎಂದು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ, ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ದಿವಂ ಕಂಫರ್ಟ್‌ನಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದಿಂದ ಹಮ್ಮಿಕೊಂಡಿದ್ದ ದೈವಜ್ಞ- ದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಆಧುನಿಕತೆಯ ನೆಪದಲ್ಲಿ ಸನಾತನ ಸಂಸ್ಕೃತಿ, ಪರಂಪರೆಯನ್ನು ನಾವು ಮರೆಯಬಾರದು. ಇತ್ತೀಚಿನ ದಿನಗಳಲ್ಲಿ ಭೌತಿಕ ಸಂಪತ್ತು ಹೆಚ್ಚಾಗಿ, ಆಚಾರ, ವಿಚಾರ, ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಸಂಸ್ಕೃತಿ ಪಾಠ ಕಲಿಸಿ ಸಮಾಜದಲ್ಲಿ ಘನತೆಯಿಂದ ಬದುಕುವುದನ್ನು ಪೋಷಕರು ಕಲಿಸಬೇಕೆಂದು ಹೇಳಿದರು.
ಕಿರಿಯ ಶ್ರೀಗಳಾದ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ದೈವಜ್ಞ ಬ್ರಾಹ್ಮಣರು ಹೆಸರಿನಿಂದ ಶ್ರೇಷ್ಠವಾಗಿದ್ದರೆ ಸಾಲದು, ನಮ್ಮ ಆಚಾರ, ವಿಚಾರ. ವೃತ್ತಿಯಿಂದಲ್ಲೂ ನಾವು ಶ್ರೇಷ್ಠರಾಗಬೇಕು. ಈ ಭಾಗದಲ್ಲಿ ಸಮಾಜದವರ ಸಂಖ್ಯೆ ಕಡಿಮೆ ಇರಬಹುದು, ಆದರೆ ಎಷ್ಟು ಗುಣಾತ್ಮಕವಾಗಿದ್ದಾರೆ; ಸಮಾಜಮುಖಿಯಾಗಿದ್ದಾರೆ ಎಂಬುದು ಮುಖ್ಯ. ಭಕ್ತಿಯಿಂದ ಪೂಜೆಗೈದರೆ ಭಗವಂತನ ಸಾಮೀಪ್ಯ ದೊರೆಯುತ್ತದೆ. ಸಮಾಜದ ಪ್ರತಿ ಮಗುವೂ ಶಿಕ್ಷಣ, ಸಂಸ್ಕಾರ ಪಡೆಯಬೇಕು. ಸಮಾಜ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಮಹಾಬಲೇಶ್ವರ ದಿವಾಕರ ಮಾತನಾಡಿ, ಪ್ರಾಚೀನ ಇತಿಹಾಸವಿರುವ ದೈವಜ್ಞ ಸಮಾಜಕ್ಕೆ ಮೇಧಾವಿ ಸ್ವಾಮೀಜಿ ಸಿಕ್ಕಿರುವುದು ನಮ್ಮ ಪುಣ್ಯ. ಅವರ ಮಾರ್ಗದರ್ಶನದಲ್ಲಿ ಮಾದರಿ ಸಮಾಜ ರೂಪುಗೊಳ್ಳುತ್ತಿದೆ. ಸಮಾಜ ಬಾಂಧವರು ಪರಿಸರ ದಿನ ನೆಪದಲ್ಲಿ, ಒಂದು ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸೇವಾರ್ಥಿಗಳು, ಸಾಧಕರಿಗೆ ಗುರುರಕ್ಷೆ ನೀಡಲಾಯಿತು.
ದೈವಜ್ಞ ಬ್ರಾಹ್ಮಣ ಯುವಕ ಸಂಘದ ಕಾರ್ಯದರ್ಶಿ ರಾಘವೇಂದ್ರ ರಾಯ್ಕರ್, ಖಜಾಂಚಿ ಎ.ನಾಗರಾಜ, ಸದಸ್ಯರಾದ ನಾಗರಾಜ ಕುರ್ಡೇಕರ್, ಬಿ.ಪ್ರಕಾಶ, ಸುರೇಶ, ವಿನಾಯಕ, ದತ್ತಾತ್ರೇಯ, ಮಂಜುನಾಥ, ಗಜಾನನ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.ಇದಕ್ಕೂ ಮುನ್ನ ದೈವಜ್ಞ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹಾಗೂ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಪುರ ಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸ್ವಾಮೀಜಿಗಳನ್ನು ದೈವಜ್ಞ ಬ್ರಾಹ್ಮಣ ಸಮಾಜದವರು ಭಕ್ತಿಯಿಂದ ಸ್ವಾಗತಿಸಿದರು. ಪಟ್ಟಣದ ಕಲ್ಲೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆ ಮೂಲಕ ಬಸ್ ನಿಲ್ದಾಣ ಹತ್ತಿರದ ದಿವಂ ಕಂಫರ್ಟ್ ವರೆಗೆ ಇಬ್ಬರು ಸ್ವಾಮೀಜಿಗಳನ್ನು ಅಲಂಕೃತ ರಥ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಸಮಾಳ, ನಂದಿಕೋಲು, ಮಹಿಳಾ ಚಂಡೆ ವಾದ್ಯ, ಶಿರಸಿಯ ಬೇಡರ ವೇಷ ಜಾನಪದ ಮೇಳಗಳು ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು. ಮಹಿಳೆಯರು ಭಜನೆ ಹಾಡುತ್ತಾ ಹೆಜ್ಜೆ ಹಾಕಿದರು.