ಸಾರಾಂಶ
ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಿದಾಗ ಬೆಲೆ ಕಟ್ಟಲಾಗದಷ್ಟು ಮೌಲ್ಯಯುತ ಆಸ್ತಿವಂತರಾಗುತ್ತಾರೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಸರ್ವಜಯಾನಂದಾಜೀ ಮಹಾರಾಜ್ ತಿಳಿಸಿದರು. ಅರಕಲಗೂಡಲ್ಲಿ ಆಯೋಜಿಸಿದ ಸ್ವಾಮಿ ವಿವೇಕಾನಂದ ಜಯಂತಿಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದ ಜಯಂತಿಕನ್ನಡಪ್ರಭ ವಾರ್ತೆ ಅರಕಲಗೂಡು
ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಿದಾಗ ಬೆಲೆ ಕಟ್ಟಲಾಗದಷ್ಟು ಮೌಲ್ಯಯುತ ಆಸ್ತಿವಂತರಾಗುತ್ತಾರೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಸರ್ವಜಯಾನಂದಾಜೀ ಮಹಾರಾಜ್ ತಿಳಿಸಿದರು.ಪಟ್ಟಣದ ನಿವೇದಿತಾ ವಿದ್ಯಾಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಮಿ ವಿವೇಕನಂದ ಜಯಂತಿ, ನಿವೇದಿತಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ‘ಪೋಷಕರು ಮತ್ತು ಶಿಕ್ಷಕರು ನಮ್ಮ ಮಕ್ಕಳಿಗೆ ಜ್ಞಾನ ಭಕ್ತಿ ಧರ್ಮ-ಕರ್ಮಗಳ ಬಗ್ಗೆ ನಿತ್ಯ ಜಾಗೃತಿ ಮೂಡಿಸುತ್ತಿದ್ದರೆ ಅಂತಹ ಮಕ್ಕಳು ಸಂಸ್ಕಾರವಂತರಾಗಿ ಸಮಾಜಕ್ಕೆ ಕೊಡುಗೆಯಾಗುತ್ತಾರೆ. ಇದನ್ನು ಮನಗಂಡು ಶಾಲಾ ಶಿಕ್ಷಕರು, ಪೋಷಕರು ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.
ನಿವೇದಿತಾರವರು ವಿದೇಶಿ ಮಹಿಳೆಯಾದರೂ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಮೆಚ್ಚಿ ತನ್ನ ದೇಶವನ್ನ ಬಿಟ್ಟು ಭಾರತಕ್ಕೆ ಪಾದಾರ್ಪಣೆ ಮಾಡಿದ ಮಹಿಳೆ. ಇವರು ಸ್ವಾಮಿ ವಿವೇಕನಂದರ ಶಿಷ್ಯರಾಗಿ ಅವರ ಮಾರ್ಗದರ್ಶನದಂತೆ ದೇಶದ ಸ್ತ್ರಿಯರಿಗೆ ವಿಧ್ಯಾವಂತರನ್ನಾಗಿ ಮಾಡುವ ಮಹಾತ್ಕಾರ್ಯವನ್ನು ನಡೆಸಿ ಇಂದಿಗೂ ಚಿರಸ್ಮರಣೀಯರಾಗಿದ್ದಾರೆ. ಇಂತಹ ಭವ್ಯ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಸ್ಕಾರದ ಕೊರತೆ ಹೆಚ್ಚಾಗುತ್ತಿದ್ದು, ವೃದ್ದಾಶ್ರಮಗಳು ಬೆಳೆಯುತ್ತಿವೆ. ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆ ಶಾಂತಿಯುತ ಜೀವನವನ್ನು ನಡೆಸುವುದು ಅಸಾಧ್ಯವಾಗುತ್ತದೆ. ಆದುದರಿಂದ ಎಲ್ಲರೂ ಭಾರತಾಂಬೆಯ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ತಾಲೂಕು ಪಶುವೈಧ್ಯಾಧಿಕಾರಿ ಡಾ. ಶಿವರಾಮ್ ಅವರಿಗೆ ನಿವೇದಿತಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅನಿವಾರ್ಯತೆ ತಲೆದೋರಿದೆ. ಮಕ್ಕಳಿಗೆ ಓದುವ ಒತ್ತಡ ಹೆಚ್ಚುತ್ತಿರುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆಗೂ ಕಾರಣವಾಗುತ್ತಿದೆ. ಓದಿನ ಜೊತೆ ಆಟ, ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಿವೇದಿತಾ ವಿದ್ಯಾಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಆ.ರಾ. ಸುಬ್ಬರಾವ್, ಮುಖ್ಯ ಶಿಕ್ಷಕಿ ರಾಗಿಣಿ ಉಪಸ್ಥಿತರಿದ್ದರು.ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪಶುವೈಧ್ಯಾಧಿಕಾರಿ ಡಾ. ಶಿವರಾಮ್ ಅವರಿಗೆ ನಿವೇದಿತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.