-ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜೆ.ಪಿ. ನಾರಾಯಣ

-----

ಕನ್ನಡಪ್ರಭ ವಾರ್ತೆ ಸುರಪುರಆಧುನಿಕ ಕೃಷಿ ಪದ್ಧತಿಯಲ್ಲಿ ರೈತರಿಗೆ ಹಲವು ಹೊಸ ತಂತ್ರಜ್ಞಾನಗಳು ಹಾಗೂ ಸೌಲಭ್ಯಗಳು ಲಭ್ಯವಿದ್ದು, ಅವುಗಳ ಬಗ್ಗೆ ಸಮರ್ಪಕ ಅರಿವು ಹೊಂದಿ ಬಳಸಿಕೊಂಡರೆ ಉತ್ತಮ ಇಳುವರಿ ಮತ್ತು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜೆ.ಪಿ. ನಾರಾಯಣ ಹೇಳಿದರು.

ನಗರದ ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಕೋರಮಂಡಲ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ''''ಕೃಷಿಯಲ್ಲಿ ನ್ಯಾನೊ ಗೊಬ್ಬರಗಳ ಬಳಕೆ'''' ಕುರಿತ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಯಲ್ಲಿ ಜೈವಿಕ, ಸಾವಯವ ಹಾಗೂ ನ್ಯಾನೊ ಗೊಬ್ಬರಗಳ ಸಮರ್ಪಕ ಬಳಕೆಯ ಕುರಿತು ರೈತರು ಜಾಗೃತರಾಗಬೇಕು. ಇವುಗಳ ಸಮರ್ಪಕ ಬಳಕೆಯಿಂದ ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನೂ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.


ಕೋರಮಂಡಲ್ ಸಂಸ್ಥೆಯ ರಾಯಚೂರು ವಲಯದ ಹಿರಿಯ ಬೇಸಾಯ ಶಾಸ್ತ್ರಜ್ಞ ಪ್ರಶಾಂತ ವಿ ಮಾತನಾಡಿ, ನ್ಯಾನೊ ರಸಗೊಬ್ಬರಗಳು ಕೃಷಿ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಮುಂದಿನ ದಿನಗಳಲ್ಲಿ ಅವುಗಳ ಬಳಕೆ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ರೈತರು ಈಗಿನಿಂದಲೇ ಅವುಗಳ ಉಪಯೋಗದ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಾಮರಾವ್ ಕೆ ಅವರು ಸಾವಯವ ಕೃಷಿ, ಸಮಗ್ರ ಕೃಷಿ ಪದ್ಧತಿ ಹಾಗೂ ನ್ಯಾನೊ ಗೊಬ್ಬರಗಳ ಬಳಕೆಯ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೋರಮಂಡಲ್ ಸಂಸ್ಥೆಯ ರಾಯಚೂರು ವಲಯದ ಮುಖ್ಯಸ್ಥ ಅಮರನಾಥ ರೆಡ್ಡಿ, ಸುರಪುರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಮಾಲಿ ಪಾಟೀಲ, ಕೃಷಿ ವಿಜ್ಞಾನಿ ಡಾ. ಉಮೇಶ, ಕೃಷಿ ವಿಸ್ತೀರ್ಣಾಧಿಕಾರಿ ಅಬ್ದುಲ್ ಘನಿ, ಕೃಷಿ ಪರಿಕರಗಳ ಮಾರಾಟಗಾರರಾದ ಶಿವಶೆಟ್ಟಿ ಹಾಗೂ ರಾಮಕೃಷ್ಣ ರೆಡ್ಡಿ ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ರೈತರು ಭಾಗವಹಿಸಿದ್ದರು.

-----

ಫೋಟೋ:

ಸುರಪುರದ ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ನ್ಯಾನೊ ಗೊಬ್ಬರಗಳ ಬಳಕೆ ಕುರಿತ ವಿಚಾರ ವಿನಿಮಯ ಕಾರ್ಯಕ್ರಮವನ್ನು ಡಾ. ಜೆ.ಪಿ. ನಾರಾಯಣ ಅವರು ಉದ್ಘಾಟಿಸಿದರು. ಕೃಷಿ ಸಹಾಯಕ ನಿರ್ದೇಶಕ ರಾಮನಗೌಡ ಮಾಲಿ ಪಾಟೀಲ್, ಪ್ರಶಾಂತ ವಿ. ಇದ್ದರು.